ಪಂದ್ಯಕ್ಕೆ ಅಡ್ಡಿಯಾದ ಮಳೆ
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿತು. ಸಂಜೆ 6.30ರ ಸುಮಾರಿಗೆ ಆರಂಭವಾದ ಮಳೆ ಸುದೀರ್ಘವಾಗಿ ಸುರಿಯಿತು.
ಹಾಗಾಗಿ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯದಲ್ಲಿದ್ದ ಆರ್ಸಿಬಿ ತಂಡಕ್ಕೆ ಭಾರಿ ನಿರಾಸೆಯಾಗಿದೆ. ಈ ಪಂದ್ಯದಲ್ಲಿ ಆರ್ಸಿಬಿ ಜಯ ಸಾಧಿಸಿದ್ದರೆ ಒಟ್ಟು 18 ಅಂಕಗಳನ್ನು ಪಡೆಯುತಿತ್ತು. ಅಲ್ಲದೆ ಸನ್ರೈಸರ್ಸ್ ತಂಡ ಮುಂದಿನ ಪಂದ್ಯದಲ್ಲಿ ಸೋಲನುಭವಿಸಬೇಕು.
2011ರ ಆವೃತ್ತಿಯ ವೇಳೆ ಏ.19 ರಂದು ಆರ್ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ ಹಾಗೂ ಕಳೆದ ಆವೃತ್ತಿಯಲ್ಲಿ ಏ.25ರಂದು ಆರ್ಸಿಬಿ ಮತ್ತು ಸಿಎಸ್ಕೆ ನಡುವಣ ಪಂದ್ಯ ಮಳೆಯ ಕಾರಣ ರದ್ದಾಗಿತ್ತು.
ಕ್ರೀಡಾಂಗಣದಲ್ಲಿ ಬೆಂಕಿ
ಶನಿವಾರ ಸಂಜೆ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಪಂದ್ಯ ಆರಂಭವಾಗಲು ಕೆಲವೇ ಕ್ಷಣಗಳು ಬಾಕಿ ಇರುವಂತೆ ಕ್ರೀಡಾಂಗಣದ 9ನೇ ನಂಬರ್ನ ಗೇಟ್ ಬಳಿ ಬೆಂಕಿ ಕಾಣಿಸಿಕೊಂಡಿತು. ಗೇಟ್ ಬಳಿ ಪಂದ್ಯಕ್ಕಾಗಿ ವ್ಯವಸ್ಥೆ ಮಾಡಲಾಗಿದ್ದ ತಾತ್ಕಾಲಿಕ ಜನರೇಟರ್ನ ವಿದ್ಯುತ್ ತಂತಿ ಸಡಿಲಗೊಂಡಿದ್ದು, ಅದೇ ವೇಳೆಗೆ ಮಳೆ ಬಿದ್ದ ಹಿನ್ನೆಲೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.