ರೋಮ್ ಮಾಸ್ಟರ್ಸ್: ಭೂಪತಿ- ಬೋಪಣ್ಣ ಸೆಮೀಸ್ಗೆ
ರೋಮ್: ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಜೋಡಿ ರೋಮ್ ಮಾಸ್ಟರ್ಸ್ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದೆ. ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಥಾಮಸ್ ಬೆರ್ಡಿಚ್ ಮತ್ತು ರಾಡೆಕ್ ಸ್ಟಿಪಾನೆಕ್ ಜೋಡಿ ಹಿಂದೆ ಸರಿದ ಕಾರಣ ವಾಕ್ ಓವರ್ ಪಡೆದ ಭಾರತದ ಜೋಡಿ ಸೆಮೀಸ್ಗೆ ಹೆಜ್ಜೆ ಹಾಕಿತು.
ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ನಂ.1 ಆಟಗಾರ ನೋವಾಕ್ ಜೊಕೊವಿಚ್ ಅವರನ್ನು ಪರಾಭವಗೊಳಿಸಿದ ಬೆರ್ಡಿಚ್ ಗಾಯಗೊಂಡ ಹಿನ್ನೆಲೆಯಲ್ಲಿ ಬೆರ್ಡಿಚ್ ಮತ್ತು ಸ್ಟಿಪಾನೆಕ್ ಜೋಡಿ ಪಂದ್ಯದಿಂದ ಹಿಂದೆ ಸರಿದಿದೆ.
ಭೂಪತಿ ಮತ್ತು ಬೋಪಣ್ಣ ಜೋಡಿ ಈಗ ಫೈನಲ್ ಪಂದ್ಯದಲ್ಲಿ ಮೆಕ್ಸಿಕೋದ ಸ್ಯಾಂಟಿಗೋ ಗೋಂಜಾಲೆಜ್ ಮತ್ತು ಅಮೆರಿಕಾದ ಸ್ಕಾಟ್ ಲಿಪ್ಸ್ಕೆ ಜೋಡಿಯನ್ನು ಎದುರಿಸಲಿದೆ.
ಏತನ್ಮಧ್ಯೆ: ಸಾನಿಯಾ ಮಿರ್ಜಾ ಮತ್ತು ಬೆಥನೀ ಜೋಡಿ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದೆ. ಎರಡನೇ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕ ಪಡೆದ ಮತ್ತು ಸ್ಥಳೀಯ ಫೇವರಿಟ್ ಸರಾ ಎರ್ರಾನಿ ಮತ್ತು ರಾಬರ್ಟ್ ವಿನ್ಸಿ ಜೋಡಿ ವಿರುದ್ಧ 4-6, 3-6 ನೇರ ಸೆಟ್ಗಳ ಅಂತರದಿಂದ ಸೋಲನುಭವಿಸಿತು.