ಶ್ರೀಶಾಂತ್ ತಂಗಿದ್ದ ಕೋಣೆಯ ಶೋಧ
ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು, ಐಪಿಎಲ್ ಫಿಕ್ಸಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗುವ ಮೊದಲು ಶ್ರೀಶಾಂತ್ ತಂಗಿದ್ದ ಹೊಟೇಲೊಂದರ ರೂಮನ್ನು ಶೋಧಿಸಿ, ಕೆಲ ವಸ್ತುಗಳು ಹಾಗೂ ಮಾಹಿತಿಗಳನ್ನು ವಶಪಡಿಸಿಕೊಂಡಿದ್ದಾಗಿ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಂಬೈ ಪೊಲೀಸ್ ಜಂಟಿ ಆಯುಕ್ತ ಹಿಮಾಂಶು ರಾಯ್, 'ರಮೇಶ್ ವ್ಯಾಸ್ ಹೆಸರಿನ ವ್ಯಕ್ತಿಯೊಬ್ಬನ್ನು ಸ್ಪಾಟ್ ಫಿಕ್ಸಿಂಗ್ ಸಂಬಂಧಿಸಿದಂತೆ ಮೇ 14ರಂದು ಬಂಧಿಸಲಾಗಿತ್ತು. ಆತನಿಂದ 92 ಮೊಬೈಲ್, 18 ಸಿಮ್ ಕಾರ್ಡ್, ಒಂದು ಲ್ಯಾಪ್ಟಾಪ್ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಆತ ನೀಡಿದ್ದ ಮಾಹಿತಿ ಮೇರೆಗೆ ಶನಿವಾರ ಪಂಕಜ್ ಸಿಂಗ್ ಅಲಿಯಾಸ್ ಪಪ್ಪು ಎಂಬ ಹೆಸರಿನ ಮತ್ತೊಬ್ಬ ಬುಕಿಯನ್ನು ಬಂಧಿಸಲಾಗಿದೆ' ಎಂದು ತಿಳಿಸಿದರು.
ಶನಿವಾರ ಬಂಧಿಸಲ್ಪಟ್ಟ ಬುಕಿ ನೀಡಿದ ಮಾಹಿತಿ ಮೇರೆಗೆ, ಪೊಲೀಸರು ಶ್ರೀಶಾಂತ್ ತಂಗಿದ್ದರೆನ್ನಲಾದ ಹೋಟೇಲ್ನ ರೂಮ್ ಜಾಲಾಡಿದ್ದಾರೆ. ಶ್ರೀಶಾಂತ್ ಹಾಗೂ ಜೀಜು ಜನಾರ್ಧನ್ ಹೆಸರಿನಲ್ಲಿ ಎರಡು ಕೊಠಡಿಗಳನ್ನು ಪಡೆಯಲಾಗಿದೆಯೆಂಬ ಮಾಹಿತಿಯನ್ನು ಬುಕಿ ಪೊಲೀಸರಿಗೆ ನೀಡಿದ್ದ ಈ ಹಿನ್ನೆಲೆಯಲ್ಲಿ, ಎರಡೂ ಕೊಠಡಿಗಳನ್ನು ಪೊಲೀಸರು ತಪಾಸಣೆಗೊಳಪಡಿಸಿದ್ದು, ಶ್ರೀಶಾಂತ್ ಇದ್ದ ಕೊಠಡಿಯಿಂದ ಲ್ಯಾಪ್ಟಾಪ್, ನಗದು, ಐ-ಪ್ಯಾಡ್, ಮೊಬೈಲ್ ಫೋನ್, ಡೇಟಾ ಕಾರ್ಡ್, ಡೈರಿಗಳು, ಕ್ರಿಕೆಟ್ ಕಿಟ್ ಹಾಗೂ ಇಂಗ್ಲೀಷ್ ಮತ್ತು ಮಲಯಾಳಂನಲ್ಲಿ ಬರೆಯಲ್ಪಟ್ಟಿರುವ ಕೆಲ ಬರಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಯ್ ತಿಳಿಸಿದರು.
ಇದೀಗ, ಹೋಟೆಲ್ನ ಸಿಸಿಟಿವಿ ಕ್ಯಾಮೆರಾದ ಮೂಲಕ ಸಂಗ್ರಹವಾಗಿರುವ ಡೇಟಾದಲ್ಲಿ ಶ್ರೀಶಾಂತ್ ಹಾಗೂ ಜೀಜು ತಂಗಿದ್ದ ರೂಮಿಗೆ ಭೇಟಿ ನೀಡಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು ಎಂದು ರಾಯ್ ತಿಳಿಸಿದ್ದಾರೆ. ಏನತ್ಮಧ್ಯೆ, ಮೊಬೈಲ್ ಸಂಭಾಷಣೆಗಳನ್ನು ಖಚಿತಪಡಿಸಿಕೊಳ್ಳಲು ಬಂಧಿತ ಆರೋಪಿಗಳ ಧ್ವನಿ ಮಾದರಿ (ಸೌಂಡ್ ಸ್ಯಾಂಪಲ್)ಗಳನ್ನೂ ಸಂಗ್ರಹಿಸಿ, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ರಾಯ್ ಹೇಳಿದರು.