ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಲೆಕ್ಸ್, ಗ್ಲಾಡೀಸ್ ಚೆರೊನೊಗೆ ಜಯ

ಹಿಂವಿಶ್ವ 10 ಕೆ ಬೆಂಗಳೂರು ಮ್ಯಾರಥಾನ್‌ನ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಕೀನ್ಯಾದ...

Srinivasa Murthy VN
Updated On : 20 May 2013, 12:34 pm

ಬೆಂಗಳೂರು: ಹಿಂದೆಂದಿಗಿಂತಲೂ ದೊಡ್ಡಮಟ್ಟದಲ್ಲಿ, ವಿಜೃಂಭಣೆಯಿಂದ ಆಯೋಜಿಸಲ್ಪಟ್ಟಿದ್ದ ವಿಶ್ವ 10 ಕೆ ಬೆಂಗಳೂರು ಮ್ಯಾರಥಾನ್‌ನ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಕೀನ್ಯಾದ ಅಲೆಕ್ಸ್ ಒಲೊಯ್‌ಟಿಪ್ಟಿಪ್ ಹಾಗೂ ಗ್ಲಾಡೀಸ್ ಚೆರೊನೊ ಜಯಶಾಲಿಯಾದರು.
ಭಾರತೀಯರ ವಿಭಾಗದಲ್ಲಿ ಸುರೇಶ್ ಕೆ. ಪಟೇಲ್ ಅವರು ಪುರುಷರ ವಿಭಾಗದಲ್ಲಿ ಜಯಗಳಿಸಿದರೆ, ಸುಧಾ ಸಿಂಗ್ ಅವರು ಮಹಿಳೆಯರ ವಿಭಾಗದಲ್ಲಿ ಮೊದಲಿಗರಾಗಿ ಹೊಮ್ಮಿದರು.
23ರ ಪ್ರಾಯದ ಕೀನ್ಯಾದ ಓಟಗಾರ ಒಲೊಯ್‌ಟಿಪ್ಟಿಪ್ ಅವರು ಸ್ಪರ್ಧೆ ಆರಂಭಕ್ಕೂ ಮುನ್ನ ಗೆಲುವು ಸಾಧಿಸುತ್ತಾರೆಂದು ಯಾರೂ ಊಹಿಸಿರಲಿಲ್ಲ. ಆದರೆ, ಭಾನುವಾರ ಬೆಳಗ್ಗೆ ಸ್ಪರ್ಧೆ ಆರಂಭಗೊಳ್ಳುತ್ತಲೇ, ಅವರು ಪೋಲ್ ಪೊಸಿಷನ್ ಗೆಲ್ಲುವಲ್ಲಿ ಯಶಸ್ವಿಯಾಗಿ, ಕೆಲವೇ ನಿಮಿಷಗಳಲ್ಲಿ ಎಲ್ಲರಿಗಿಂತ ಮುಂಚೂಣಿಗೆ ಬಂದರು. ಆದರೆ, ಅವರಿಗೆ ಕೀನ್ಯಾದವರೇ ಆದ ಮತ್ತೊಬ್ಬ ಸ್ಪರ್ಧಿ ನಿಕೋಲಸ್ ಕಿಪ್ಕೊಮ್‌ಬೊಯ್ ಹಾಗೂ ಇಥಿಯೋಪಿಯಾದ ಯುವ ಆಟಗಾರ ಬ್ರಿಹಾನು ಲೆಗೀಸ್ ಅವರಿಂದ ತೀವ್ರ ರೀತಿಯ ಪೈಪೋಟಿಯನ್ನು ಎದುರಿಸಬೇಕಾಯಿತು. ಆದರೂ, ಇವರೆಲ್ಲರೂ ಒಡ್ಡಿದ್ದ ಸವಾಲುಗಳನ್ನು ಮೆಟ್ಟುವಲ್ಲಿ ಯಶಸ್ವಿಯಾದ ಅವರು, 28.07 ಅವಧಿಯಲ್ಲಿ ಗುರಿಮುಟ್ಟಿ ಮೊದಲಿಗರಾಗಿ ಹೊರಹೊಮ್ಮಿದರು.
ಕಿಪ್ಕೆಮ್‌ಬೊಯ್ ಅವರು ನಿಗದಿತ ಗುರಿಯನ್ನು 28.12 ಅವಧಿಯಲ್ಲಿ ಮುಟ್ಟಿ ಎರಡನೇ ಸ್ಥಾನ ಪಡೆದರೆ, ಲೆಗೀಸ್ ಅವರು 28.16 ಅವಧಿಯಲ್ಲಿ ಗುರಿ ಕ್ರಮಿಸಿ ಮೂರನೇ ಸ್ಥಾನ ಪಡೆದರು.
ಹತಾಶೆ: ಹಾಲಿ 'ವರ್ಲ್ಡ್ ಕ್ರಾಸ್ ಕಂಟ್ರಿ ಚಾಂಪಿಯನ್‌' ಜಾಫೆಟ್ ಕೊರಿರ್ ಅವರು ವಿಶ್ವ 10 ಕೆ ಬೆಂಗಳೂರು ಮ್ಯಾರಥಾನ್‌ನಲ್ಲಿ ನಿರಾಸೆಗೊಳಿಸಿದರು. ನಿಗದಿತ ಗುರಿಯನ್ನು 29.59 ಅವಧಿಯಲ್ಲಿ ಮುಟ್ಟಿದ ಅವರು, 17ನೇ ಸ್ಥಾನ ಪಡೆದರು. ಸ್ಪರ್ಧೆ ಆರಂಭಕ್ಕೂ ಮೊದಲು ಭರವಸೆ ಮೂಡಿಸಿದ್ದ ಕೀನ್ಯಾದ ಮತ್ತೊಬ್ಬ ಓಟಗಾರ ಮೋಸೆಸ್ ಮಸಾಯ್ ಅವರು 29.05 ಅವಧಿಯಲ್ಲಿ ಗುರಿ ಮುಟ್ಟಿ 10ನೇ ಸ್ಥಾನ ಪಡೆದರು.
ಗ್ಲಾಡಿಸ್ ಜಯ: ಮಹಿಳೆಯರ ವಿಭಾಗದಲ್ಲಿ, ಎಲ್ಲರಿಗಿಂತ ಮುಂಚೂಣಿಯಲ್ಲಿ ಸಾಗಿದ ಕೀನ್ಯಾದ ಗ್ಲಾಡೀಸ್ ಚೆರೊನೊ ಅವರು ನಿಗದಿತ ದೂರವನ್ನು 32.03 ಅಂತರದಲ್ಲಿ ಕ್ರಮಿಸಿ, ಮೊದಲಿಗರಾದರು. ಆದರೆ, ನಾಲ್ಕು ಸೆಕೆಂಡ್‌ಗಳ ಅಂತರದಲ್ಲಿ ಅವರು ಕೂಟ ದಾಖಲೆಯನ್ನು ಮುರಿಯುವ ಅವಕಾಶವನ್ನು ತಪ್ಪಿಸಿಕೊಂಡರು. ಅವರ ಹಿಂದೆ 32.10 ಅವಧಿಯಲ್ಲಿ ರೇಸ್ ಮುಗಿಸಿದ ಇಥಿಯೋಪಿಯಾದ ಗುಟೇನಿ ಶೋನ್ ಎರಡನೇ ಸ್ಥಾನ ಪಡೆದರೆ, ಕೀನ್ಯಾದ ಮತ್ತೊಬ್ಬ ಓಟಗಾರ್ತಿ ಹೆಲಾಪ್ ಕಿಪ್ರೊಪ್ ಅವರು 32.26 ಅವಧಿಯಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಪಡೆದರು.

ಸುರೇಶ್, ಸುಧಾಗೆ ಜಯ
ಭಾರತೀಯರ ವಿಭಾಗದಲ್ಲಿ ಸುರೇಶ್ ಕೆ. ಪಟೇಲ್ ಹಾಗೂ ಸುಧಾ ಸಿಂಗ್ ಅವರು ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದರು. ಡೆಹರಾಡೂನ್‌ನವರಾದ ಸುರೇಶ್, 30.34 ಅವಧಿಯಲ್ಲಿ ಸ್ಪರ್ಧೆ ಪೂರ್ತಿಗೊಳಿಸಿದರೆ, ಸುಧಾ ಅವರು 35.25 ಅವಧಿಯಲ್ಲಿ ಗುರಿ ಮುಟ್ಟಿದರು. ಪುರುಷರ ವಿಭಾಗದಲ್ಲಿ, ವಿ.ಎಲ್. ಡಾಂಗಿ 30.53 ಅವಧಿಯಲ್ಲಿ ಗುರಿ ಮುಟ್ಟಿ ಎರಡನೇ ಸ್ಥಾನ ಗಳಿಸಿದರೆ, ಮಹಮ್ಮದ್ ಯೂನಸ್ ಅವರು 30.58 ಅವಧಿಯಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಪಡೆದರು.  30.34 ಅವಧಿಯಲ್ಲಿ ಗುರಿ ಮುಟ್ಟಿದ ಸುರೇಶ್ ಅವರು, ವಿಭಾಗೀಯ ದಾಖಲೆ  (29.59) ಮುರಿಯುವಲ್ಲಿ ವಿಫಲರಾದರು.  ಮಹಿಳೆಯರ ವಿಭಾಗದಲ್ಲಿ, ಪ್ರೀಜಾ ಶ್ರೀಧರನ್ ್‌ವರು 36.01 ಅವಧಿಯಲ್ಲಿ ಗುರಿಮುಟ್ಟಿ ದ್ವಿತೀಯ ಸ್ಥಾನ ಅಲಂಕರಿಸಿದರೆ, ಒ.ಪಿ. ಜೈಶಾ ಅವರು 36.31 ಅವಧಿಯಲ್ಲಿ ಸ್ಪರ್ಧೆ ಪೂರ್ಣಗೊಳಿಸುವ ಮೂಲಕ ಮೂರನೇ ಸ್ಥಾನ ಅಲಂಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement