ಸುಧಿರ್ಮನ್ ಕಪ್: ಭಾರತಕ್ಕೆ 5-0 ಹೀನಾಯ ಸೋಲು
ಕೌಲಾಲಂಪುರ: ಚೀನಾ ಬ್ಯಾಡ್ಮಿಂಟನ್ ಆಟಗಾರರ ಆಕ್ರಮಣಕಾರಿ ಪ್ರದರ್ಶನ ಎದುರು ಮಂಕಾದ ಭಾರತ ಬ್ಯಾಡ್ಮಿಂಟನ್ ಆಟಗಾರರು, ಭಾನುವಾರ ನಡೆದ ಸುಧಿರ್ಮನ್ ಕಪ್ ಪಂದ್ಯದಲ್ಲಿ 5-0 ಅಂತರದ ಸೋಲನುಭವಿಸಿದೆ.
ಭಾನುವಾರ ಇಲ್ಲಿನ ಪುತ್ರ ಕ್ರೀಡಾಂಗಣದಲ್ಲಿ ನಡೆದ ಎ ಗುಂಪಿನ ಪಂದ್ಯಗಳ ಐದೂ ವಿಭಾಗಗಳಲ್ಲಿ ಸೋಲನುಭವಿಸಿದೆ. ಒಟ್ಟು 11 ಪಂದ್ಯವನ್ನಾಡಿದ ಭಾರತ ಕೇವಲ 1 ಪಂದ್ಯದಲ್ಲಿ ಮಾತ್ರ ಗೆಲವು ಸಾಧಿಸಿತು.
ಮೊದಲ ಪಂದ್ಯದಲ್ಲಿ ತರುಣ್ ಕೋನಾ ಮತ್ತು ಅಶ್ವಿನಿ ಪೊನ್ನಪ್ಪ ನಿರೀಕ್ಷೆಯಂತೆ ವಿಶ್ವದ 3ನೇ ರ್ಯಾಂಕಿಂಗ್ನ ನಾನ್ ಜಾಂಗ್ ಮತ್ತು ಯುನ್ಲಿ ಜಾವೊ ವಿರುದ್ಧ 10-21, 13-21 ಅಂತರದಲ್ಲಿ ಸೋಲನುಭವಿಸಿದರು.
ಸೈನಾ ನೆಹ್ವಾಲ್ ಹಾಗೂ ಜ್ವಾಲಾ ಗುಟ್ಟಾ ಅವರ ಅನುಪಸ್ಥಿತಿಯಲ್ಲಿ ಪಿ.ಕಶ್ಯಪ್ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಗಳಿದ್ದವು. ಆದರೆ ಕಶ್ಯಪ್ ನೀಡಿದ ಕಳಪೆ ಪ್ರದರ್ಶನದಿಂದ ಅಭಿಮಾನಿಗಳು ನಿರಾಸೆ ಅನುಭವಿಸಿದರು.
ವಿಶ್ವದ ನಂ.2ನೇ ಆಟಗಾರ ಲಾಂಗ್ ಚೆನ್ ವಿರುದ್ಧ ಆಡಿದ ಕಶ್ಯಪ್ ಕೇವಲ 33 ನಿಮಿಷದಲ್ಲಿ 21-11, 21-9 ಅಂತರದಲ್ಲಿ ಪರಾಭವಗೊಂಡರು. ಈ ಮೂಲಕ ಭಾರತ ತಂಡ 2-0 ಹಿನ್ನಡೆ ಅನುಭವಿಸಿತು.
ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಣವ್ ಚೋಪ್ರಾ ಹಾಗೂ ಅಕ್ಷಯ್ ದೇವಾಲ್ಕರ್ ಪಂದ್ಯಾವಳಿಯಲ್ಲಿ ಭಾರತದ ಹೋರಾಟವನ್ನು ಜೀವಂತವಾಗಿರಿಸುವ ನಿರೀಕ್ಷೆ ಇತ್ತು. ಈ ಜೋಡಿ ಆಕ್ರಮಣಕಾರಿ ಆರಂಭ ಪಡೆಯಿತಾದರು, ನಂತರ 23-25, 18-21 ಅಂತರದಲ್ಲಿ ಮುಗ್ಗರಿಸಿತು. ಹಾಗಾಗಿ 3-0 ಅಂತರದಲ್ಲಿ ಹಿನ್ನಡೆ ಅನುಭವಿಸುವಂತಾಯಿತು. ನಂತರ ಭಾರತದ ಉದಯೋನ್ಮುಖ ಆಟಗಾರ್ತಿ ಪಿ.ವಿ ಸಿಂಧು, ವಿಶ್ವ ಚಾಂಪಿಯನ್ ಯಿಹಾನ್ ವಾಂಗ್ ಅವರನ್ನು ಎದುರಿಸಿದ್ದು, ಮೊದಲ ಸೆಟ್ನಲ್ಲಿ 21-19 ಗಳ ಜಯ ಸಾಧಿಸುವ ಮೂಲಕ ಮೊದಲ ಜಯ ಸಾಧಿಸಿದರು. ನಂತರ ಮರು ಹೋರಾಟ ನಡೆಸಿದ ಯಿಹಾನ್ ವಾಂಗ್ ನಂತರದ ಸೆಟ್ಗಳಲ್ಲಿ 16-21, 14-21 ಅಂತರದಲ್ಲಿ ಸಿಂಧು ಅವರನ್ನು ಮಣಿಸಿದರು.
ಇನ್ನು ಕೊನೆಯ ಪಂದ್ಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಹಾಗೂ ಪ್ರಧ್ನ್ಯಾ ಗಾಂಡ್ರೆ, ವಿಶ್ವದ ನಂ.1 ಜೋಡಿ ಯು ಯಾಂಗ್ ಮತ್ತು ಕ್ಸೈಲೊ ವಾಂಗ್ ವಿರುದ್ಧ 18-21, 11-21 ಅಂತರದಲ್ಲಿ ಮುಖಭಂಗ ಅನುಭವಿಸಿದರು.