ದಶಕಗಳ ನಂತರ ನನಸಾದ ಕನಸು
ಬೆಂಗಳೂರು: 64 ವರ್ಷಗಳ ಸತತ ಪ್ರಯತ್ನದ ನಂತರ ಕರ್ನಾಟಕ ತಂಡ ರಂಗಸ್ವಾಮಿ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸನ್ನು ನನಸಾಗಿಸಿದೆ.
ಪ್ರತಿ ಬಾರಿಯೂ ಪಂದ್ಯಾವಳಿಯಲ್ಲಿ ಗೆಲವಿನ ಬೆನ್ನತ್ತಿದ್ದ ರಾಜ್ಯ ತಂಡಕ್ಕೆ ನಿರಾಸೆಯ ಫಲಿತಾಂಶ ದೊರೆಯುತ್ತಿತ್ತು. ಆದರೆ ಈ ಬಾರಿ ಸಿಕ್ಕ ಕಡಿಮೆ ಅವಕಾಶದಲ್ಲಿ ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಸಿದ ರಾಜ್ಯ ತಂಡ ಕೊನೆಗೂ ಚಾಂಪಿಯನ್ ಆಗುವ ಮೂಲಕ ತಮ್ಮ ಬಹು ವರ್ಷಗಳ ಕನಸನ್ನು ಈಡೇರಿಸಿಕೊಂಡಿದೆ.
ಈ ಪಂದ್ಯಾವಳಿ ಗೆದ್ದ ಅನುಭವವನ್ನು ತಂಡದ ಕೋಚ್ ರಮೇಶ್ ಪರಮೇಶ್ವರನ್ ಹಾಗೂ ತಂಡ ನಾಯಕ ದೀಪಕ್ ಬಿಜೇವಾಡ್ 'ಕನ್ನಡ ಪ್ರಭ'ದೊಂದಿಗೆ ಹಂಚಿಕೊಂಡಿದ್ದು ಹೀಗೆ.
ದಶಕಗಳ ಕನಸು ನನಸಾದಾಗ: ಆಟಗಾರನಾಗಿದ್ದಾಗ ಹೊಂದಿದ್ದ ಕನಸನ್ನು ಕೋಚ್ ಆದ ಮೇಲೆ ನನಸಾಗಿಸಿರುವುದು ಹೆಚ್ಚು ಖುಷಿ ನೀಡಿದೆ ಎಂದು ಕರ್ನಾಟಕ ತಂಡದ ಕೋಚ್ ರಮೇಶ್ ಪರಮೇಶ್ವರನ್ ಸಂತಸ ಹಂಚಿಕೊಂಡರು.
1969-81ರವರೆಗೆ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಪರಮೇಶ್ವರನ್ ರಂಗಸ್ವಾಮಿ ಕಪ್ ಗೆಲ್ಲುವ ಆಸೆ ಹೊಂದಿದ್ದರು. 1978ರಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ, ನಂತರ 10 ವರ್ಷಗಳ ಕಾಲ ಭಾರತ ತಂಡದ ಹಾಕಿ ಕೋಚ್ ಆಗಿ ಕಾರ್ಯ ನಿರ್ವಹಿಸಿರುವ ರಮೇಶ್, ತಮ್ಮ ವೃತ್ತಿ ಜೀವನದಲ್ಲಿ ಹಲವು ಯಶಸ್ಸನ್ನು ಕಂಡಿದ್ದರು. ಆದರೆ ರಂಗಸ್ವಾಮಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಬೇಕೆಂಬುದು ಕನಸಾಗಿಯೇ ಉಳಿದಿತ್ತು.
ಪಂದ್ಯಾವಳಿ ಆರಂಭಕ್ಕು ಮುನ್ನ ರಾಜ್ಯ ತಂಡದ ಪ್ರಮುಖ ಆಟಗಾರರು ಇತರೆ ಲೀಗ್ ಪಂದ್ಯಗಳಲ್ಲಿ ಭಾಗವಹಿಸುವ ಮೂಲಕ ಈ ಟೂರ್ನಿಗೆ ಅಲಭ್ಯರಾದರು. ಈ ವೇಳೆ ರಾಜ್ಯ ಹಾಕಿ ತಂಡದ ಆಯ್ಕೆ ಮುಖ್ಯಸ್ಥರಾದ ಎಂ.ಪಿ ಗಣೇಶ್ ಜತೆಗೂಡಿ ಹೊಸ ಪ್ರತಿಭೆಗಳನ್ನು ಹುಡುಕಲು ನಿರ್ಧರಿಸಿದ ಪರಮೇಶ್ವರನ್, 18 ಯುವ ಪ್ರತಿಭೆಗಳನ್ನು ಆಯ್ಕೆ ಮಾಡಿದರು. ನಂತರ ಸಿಕ್ಕ ಕಡಿಮೆ ಅವಧಿಯಲ್ಲಿ ಅಭ್ಯಾಸ ಪಂದ್ಯಗಳ ಮೂಲಕ ಆಟಗಾರರನ್ನು ಪಂದ್ಯಾವಳಿಗೆ ಸಜ್ಜುಗೊಳಿಸಲಾಯಿತು.
ನಂತರ ಪಂದ್ಯಾವಳಿಯ ಲೀಗ್ ಹಂತದಲ್ಲಿ ಮೊದಲೆರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿದ ರಾಜ್ಯ ತಂಡ, ತಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ.
ನಂತರ ಮೂರು ಪಂದ್ಯಗಳಲ್ಲಿ ಆಟಗಾರರ ತಪ್ಪುಗಳನ್ನು ಸರಿ ಮಾಡಿಕೊಂಡು ಮುನ್ನುಗಿದ ರಾಜ್ಯ ತಂಡ ಸತತ ಗೆಲವು ದಾಖಲಿಸಿತು. ನಂತರ ಫೈನಲ್ನಲ್ಲಿ ಉತ್ತರ ಪ್ರದೇಶ ತಂಡದ ವಿರುದ್ಧ ಸಂಘಟಿತ ದಾಳಿ ನಡೆಸಿತು. ಅಲ್ಲದೆ ತಂಡದಲ್ಲಿನ ಕೆ.ಆರ್ ಉಮೇಶ್ ಅವರನ್ನು ಫೈನಲ್ ಪಂದ್ಯದಲ್ಲಿ ಮಾತ್ರ ಆಡಿಸುವುದು ತಂಡದ ತಂತ್ರವಾಗಿತ್ತು. ಅದರಂತೆ ಉತ್ತಮ ಪ್ರದರ್ಶನ ನೀಡಿದ ಉಮೇಶ್ ತಂಡದ ಜಯಕ್ಕೆ ಕಾಣಿಕೆ ನೀಡಿದರು. ಈ ಮೂಲಕ ರಾಜ್ಯ ತಂಡ ಮೊದಲ ಬಾರಿಗೆ ಚಾಂಪಿಯನ್ ಆಗಿ ತಮ್ಮ ಕನಸನ್ನು ನನಸಾಗಿಸಿತು ಎಂದು ಅವರು ತಿಳಿಸಿದರು. ಉತ್ತರ ಪ್ರದೇಶ ತಂಡ ಅನುಭವಿ ಆಟಗಾರರನ್ನು ಹೊಂದಿದ್ದು, ಈ ತಂಡ ನಮಗೆ ಹೆಚ್ಚಿನ ಪೈಪೋಟಿ ನೀಡಿತು ಎಂದು ಅವರು ಅಭಿಪ್ರಾಯಪಟ್ಟರು.
ತಂಡದ ಆಟಗಾರರ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಪರಮೇಶ್ವರನ್, ಎಲ್ಲಾ ಆಟಗಾರರಿಗೂ ಅಭಿನಂದನೆ ಸಲ್ಲಿಸಿದರು. ಅಲ್ಲದೆ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದು, ನಾಯಕ ದೀಪಕ್ ಬಿಜೆವಾಡ, ಬಿಜು ಬಿಜೆವಾಡ್ ಹಾಗೂ ಕೆ.ಆರ್ ಉಮೇಶ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಈ ಆಟಗಾರರು ಉತ್ತಮ ಸಾಮರ್ಥ್ಯವನ್ನು ಹೊಂದಿದ್ದು, ಮಂದಿನ ಹಂತದಲ್ಲಿ ಆಡಲು ಸಮರ್ಥರಾಗಿದ್ದಾರೆ ಎಂದು ರಮೇಶ್ ಅಭಿಪ್ರಾಯಪಟ್ಟರು.
ರಘುನಾಥ್ ನನ್ನ ಸ್ಫೂರ್ತಿ: ಈ ಪಂದ್ಯಾವಳಿಯಲ್ಲಿ ರಾಜ್ಯ ತಂಡವನ್ನು ಮುನ್ನಡೆಸಿ, ಪಂದ್ಯಾವಳಿಯಲ್ಲಿ ಉತ್ತಮ ರಕ್ಷಣಾ ಆಟಗಾರ ಪ್ರಶಸ್ತಿ ಪಡೆದ ದೀಪಕ್ ಬಿಜೇವಾಡ, ವಿ.ಆರ್ ರಘುನಾಥ್ ನನ್ನ ನೆಚ್ಚಿನ ಆಟಗಾರ ಎಂದು ತಿಳಿಸಿದರು.
ಭಾರತ ಹಾಕಿ ತಂಡದಲ್ಲಿ ಕರ್ನಾಟಕದ ವಿ.ಆರ್ ರಘುನಾಥ್ ಸಹ ಉತ್ತಮ ಡಿಫೆಂಡರ್ ಆಗಿದ್ದು, ಅವರಂತೆಯೇ ಉತ್ತಮ ಡಿಫೆಂಡರ್ ಆಟಗಾರನಾಗಬೇಕೆಂಬ ಆಸೆ ಇದೆ. ಅಲ್ಲದೆ ರಘುನಾಥ್ ಸಾಯಿಗೆ ಬಂದಾಗಲೆಲ್ಲಾ ನನಗೆ ಡ್ರ್ಯಾಗ್ ಫ್ಲಿಕ್ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಅವರ ಮಾರ್ಗದರ್ಶನದಿಂದ ನಾನು ಡ್ರ್ಯಾಗ್ ಫ್ಲಿಕ್ನಲ್ಲಿ ಹಿಡಿತ ಸಾಧಿಸಲು ಸಾಧ್ಯವಾಯಿತು. ಇವರ ಜತೆಗೆ ಸಾಯಿಯಲ್ಲಿರುವ ಕೋಚ್ ಪ್ರಭಾಕರ್ ಹಾಗೂ ಅಶ್ವತ್ ಅವರ ಮಾರ್ಗದರ್ಶನ ನನ್ನ ಯಶಸ್ಸಿಗೆ ಕಾರಣ ಎಂದು ದೀಪಕ್ ತಿಳಿಸಿದರು.
ನಂತರ ಪಂದ್ಯಾವಳಿಯಲ್ಲಿನ ಅನುಭವವನ್ನು ಹಂಚಿಕೊಂಡ ದೀಪಕ್, ನಾನು ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸುವ ಆಸೆ ಹೊಂದಿದ್ದೆ. ತಂಡದ ಬಹುತೇಕ ಆಟಗಾರರು ಹೊಸಬರು, ಹಾಗಾಗಿ ಎಲ್ಲಾ ಆಟಗಾರರಿಗೂ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಈ ಪಂದ್ಯಾವಳಿ ಉತ್ತಮ ವೇದಿಕೆಯಾಗಿತ್ತು.
ಎಲ್ಲಾ ಆಟಗಾರರು ಪರಸ್ಪರ ಹೊಂದಾಣಿಕೆಯಿಂದ ಸಂಘಟಿತವಾಗಿ ಒಂದು ತಂಡವಾಗಿ ಆಡಿದೆವು. ಅದರ ಫಲವೇ ಚಾಂಪಿಯನ್ಪಟ್ಟ ಎಂದು ದೀಪಕ್ ಅಭಿಪ್ರಾಯಪಟ್ಟರು.
ಮೊದಲ ಬಾರಿಗೆ ಈ ಪಂದ್ಯವಾಳಿಯಲ್ಲಿ ಭಾಗವಹಿಸುತ್ತಿದ ಹಿನ್ನಲೆಯಲ್ಲಿ ತಂಡದ ಕೋಚ್ ಹಾಗೂ ಮ್ಯಾನೇಜರ್ ಅವರ ಮಾರ್ಗದರ್ಶನದಂತೆ ತಯಾರಿ ನಡೆಸಿ, ನಮ್ಮ ಆಟ ಪ್ರದರ್ಶಿಸಿದೆವು. ಮೊದಲೆರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿದ ನಾವು ಹಿಂಜರಿಯಲಿಲ್ಲ. ನಂತರದ ಪಂದ್ಯಗಳಲ್ಲಿ ಕೋಚ್ ನಮಗೆ ಸ್ಫೂರ್ತಿ ತುಂಬಿದರು. ನಂತರ ಮುಂದಿನ ಪಂದ್ಯಗಳಲ್ಲಿ ಆರಂಭದಲ್ಲಿ ಗೋಲು ದಾಖಲಿಸಿ ನಂತರ ಎದುರಾಳಿ ತಂಡವನ್ನು ಉತ್ತಮವಾಗಿ ನಿಯಂತ್ರಿಸುವ ಮೂಲಕ ಜಯ ಸಾಧಿಸಿದೆವು ಎಂದು ತಂಡದ ತಂತ್ರಗಾರಿಕೆಯನ್ನು ಹಂಚಿಕೊಂಡರು.
ಇನ್ನು ತವರಿನ ಅಂಗಳದಲ್ಲಿ ಆಡಿದ್ದು ನಮಗೆ ಅನುಕೂಲವಾಯಿತು. ಪ್ರತಿದಿನ ಇದೇ ಅಂಗಳದಲ್ಲಿ ಅಭ್ಯಾಸ ನಡೆಸಿ ಉತ್ತಮ ಅನುಭವ ಹೊಂದಿದ್ದರಿಂದ ಎದುರಾಳಿ ತಂಡವನ್ನು ನಿಯಂತ್ರಿಸಲು ಅನುಕೂಲವಾಯಿತು.
ಅಲ್ಲದೆ ತಂಡದ ಕೋಚ್ ಅವರು ತಮ್ಮ ಅನುಭವವನ್ನು ಆಟಗಾರರೊಂದಿಗೆ ಹಂಚಿಕೊಂಡು, ಎದುರಾಳಿ ತಂಡವನ್ನು ಹೇಗೆ ನಿಯಂತ್ರಿಸಬೇಕು ಎಂದು ಮಾರ್ಗದರ್ಶನ ನೀಡಿದರು. ಒಟ್ಟಾರೆಯಾಗಿ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಉತ್ತಮ ಸಾಧನೆ ಮಾಡಿರುವ ನೆಮ್ಮದಿ ಇದೆ ಎಂದು ದೀಪಕ್ ತಿಳಿಸಿದರು.
- ಸೋಮಶೇಖರ ಪಿ. ಭದ್ರಾವತಿ