ಸ್ಪಾಟ್ ಫಿಕ್ಸಿಂಗ್: ರು. 20 ಲಕ್ಷ ವಶ
ಸ್ಪಾಟ್ ಫಿಕ್ಸಿಂಗ್ನಲ್ಲಿ ಆರೋಪ ಹೊತ್ತಿರುವ ಅಜಿತ್ ಚಾಂಡಿಲ ಅವರ ಸಂಬಂಧಿಕರೊಬ್ಬರ ಮನೆಯನ್ನು...
ನವದೆಹಲಿ: ಸ್ಪಾಟ್ ಫಿಕ್ಸಿಂಗ್ನಲ್ಲಿ ಆರೋಪ ಹೊತ್ತಿರುವ ಅಜಿತ್ ಚಾಂಡಿಲ ಅವರ ಸಂಬಂಧಿಕರೊಬ್ಬರ ಮನೆಯನ್ನು ಸೋಮವಾರ ಜಾಲಾಡಿರುವ ಪೊಲೀಸರು ರು. 20 ಲಕ್ಷ ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಅಜಿತ್ ಚಾಂಡಿಲ ನೀಡಿದ ಮಾಹಿತಿ ಮೇರೆಗೆ ಫರಿದಾಬಾದ್ನಲ್ಲಿರುವ ಅವರ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, ಕ್ರಿಕೆಟ್ ಕಿಟ್ನಲ್ಲಿ ಅಡಗಿಸಿಟ್ಟಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಏತನ್ಮಧ್ಯೆ, ಅಜಿತ್ ಜೊತೆ ಬಂಧನಕ್ಕೊಳಗಾಗಿರುವ ಶ್ರೀಶಾಂತ್, ಅಂಕಿತ್ ಚವಾಣ್ ಬುಕ್ಕಿಗಳ ವಿಚಾರ ವಿಚಾರಣೆ ಮುಂದುವರೆದಿದೆ. ಸತತವಾಗಿ ಐದು ದಿನಗಳ ವಿಚಾರಣೆ ವೇಳೆ ಆರೋಪಿಗಳು ಮಹತ್ವದ ಮಾಹಿತಿಗಳನ್ನು ಪೊಲೀಸರಿಗೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಬಂಧಿತರಿಂದ ಹಾಗೂ ವಿವಿಧ ಮೂಲಗಳಿಂದ ಮಾಹಿತಿಗಳನ್ನು ಸಂಗ್ರಹಿಸಿರುವ ಪೊಲೀಸರು, ಹಲವಾರು ನಗರಗಳಲ್ಲಿ ದಾಳಿ ನಡೆಸಿ, 20ಕ್ಕೂ ಹೆಚ್ಚು ಬುಕ್ಕಿಗಳನ್ನು ಬಂಧಿಸಿದ್ದಾರೆ. ಇವರಲ್ಲಿ ಅಮಿತ್ ಸಿಂಗ್ ಎಂಬ ಮಾಜಿ ರಣಜಿ ಆಟಗಾರನೂ ಒಬ್ಬನಾಗಿದ್ದು, ಈತ ಬುಕ್ಕಿಗಳಿಗೆ 'ಸರಿಹೊಂದುವ' ಆಟಗಾರರನ್ನು ಹುಡುಕಿಕೊಡುವ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾದರೆ.
ಕಸ್ಟಡಿ ವಿಸ್ತರಣೆಗೆ ಅವಕಾಶ ?: ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಶದಲ್ಲಿರುವ ಶ್ರೀಶಾಂತ್, ಅಜಿತ್ ಹಾಗೂ ಅಂಕಿತ್ ಹಾಗೂ ಕೆಲ ಬುಕಿಗಳ ಬಂಧನದ ಅವಧಿ ಮಂಗಳವಾರ ಕೊನೆಗೊಳ್ಳಲಿದ್ದು, ತನಿಖೆಗೆ ಅನುಕೂಲವಾಗಲು ಬಂಧನ ಅವಧಿಯ ವಿಸ್ತರಣೆಗಾಗಿ ದೆಹಲಿ ಪೊಲೀಸರು ನ್ಯಾಯಾಲಯವನ್ನು ಕೋರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಧ್ವನಿ ಮಾದರಿ ಸಂಗ್ರಹ: ಬುಕ್ಕಿಗಳ ಹಾಗೂ ಆರೋಪಿತ ಕ್ರಿಕೆಟಿಗರ ನಡುವೆ ನಡೆದಿರುವ ದೂರವಾಣಿ ಮಾತುಕತೆಗಳ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು, ಬಂಧನಕ್ಕೊಳಗಾಗಿರುವ ಕ್ರಿಕೆಟಿಗರನ್ನು ಹಾಗೂ ಬುಕ್ಕಿಗಳನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅವರ ಧ್ವನಿ ಮಾದರಿಗಳನ್ನು ಸಂಗ್ರಹಿಸಿ, ವಿಧಿವಿಜ್ಞಾನ ಪರೀಕ್ಷೆಗೊಳಪಡಿಸಿದೆ.
ಇಂಗ್ಲೆಂಡ್ಗೆ ಬಿಸಿಸಿಐ ಅಧಿಕಾರಿ: ಫಿಕ್ಸಿಂಗ್ ಹಗರಣದ ಬಿಸಿಯಿಂದ ಎಚ್ಚೆತ್ತುಕೊಂಡಿರುವ ಬಿಸಿಸಿಐ, ಐಪಿಎಲ್ ಮಾತ್ರವಲ್ಲದೇ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಮೇಲೂ ದೃಷ್ಟಿ ಹರಿಸಿದೆ. ಇಂಗ್ಲೆಂಡ್ನಲ್ಲಿ ನಡೆಯಲಿರುವ ಈ ಪಂದ್ಯಾವಳಿ ಜೂನ್ ಮೊದಲ ವಾರ ಆರಂಭಗೊಳ್ಳಲಿದೆ. ಆದ್ದರಿಂದ, ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಯೊಬ್ಬರನ್ನು ಲಂಡನ್ಗೆ ಕಳುಹಿಸಿ, ಭದ್ರತಾ ನಿಯಮಗಳನ್ನು ಪರಿಶೀಲಿಸಲು ಬಿಸಿಸಿಐ ಚಿಂತನೆ ನಡೆಸಿದೆ.
ಭೂಗತ ಜಗತ್ತಿನ ನಂಟು?: ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಭೂಗತ ಜಗತ್ತಿನ ನಂಟನ್ನು ಬುಕ್ಕಿಗಳು ಹೊಂದಿರುವ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ರೂವಾರಿಯಾಗಿರುವ ಅನೀಸ್ ಇಬ್ರಾಹೀಂ, ಭೂಗತ ಜಗತ್ತಿನ ದೊರೆ ದಾವೂದ್ ಇಬ್ರಾಹೀಂನ ಕಿರಿಯ ಸಹೋದರ ಆಗಿರುವುದರಿಂದ, ಮುಂಬೈ ಭೂಗತ ಜಗತ್ತಿಗೂ ಸ್ಪಾಟ್ ಫಿಕ್ಸಿಂಗ್ಗೂ ನಂಟಿರುವ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ, ಅನೀಸ್ ಇಬ್ರಾಹೀಂನ ಬಂಟ ಚೋಟಾ ಶಕೀಲ್ ಕೂಡಾ ಇದರಲ್ಲಿ ಭಾಗಿಯಾಗಿರುವ ಕುರಿತಂತೆ ತನಿಖೆ ನಡೆಯುತ್ತಿದೆ.
ಕಳಂಕಿತರ ವಜಾ
ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ತನ್ನ ಮೂವರು ಆಟಗಾರರಾದ ಶ್ರೀಶಾಂತ್, ಅಜಿತ್ ಚಂಡಿಲಾ ಹಾಗೂ ಅಂಕಿತ್ ಚವಾಣ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡದ ವ್ಯವಸ್ಥಾಪಕ ಮಂಡಳಿ ವಜಾಗೊಳಿಸಿದೆ. ಆಟಗಾರರೊಂದಿಗೆ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನೂ ಫ್ರಾಂಚೈಸಿ ರದ್ದುಗೊಳಿಸಿದೆ.
ಮಳ್ಳತನ: ಏತನ್ಮಧ್ಯೆ, ಮಾಧ್ಯಮಗಳಿಗೆ ಹೆಸರನ್ನೇಳಲು ಇಚ್ಛಿಸದ ರಾಜಸ್ಥಾನ ರಾಯಲ್ಸ್ ಅಧಿಕಾರಿಯೊಬ್ಬರು ಶ್ರೀಶಾಂತ್ ಅವರನ್ನು ಅವರ ದರ್ಪದ ನಡವಳಿಕೆ ಕಾರಣದಿಂದ ಈ ಹಿಂದೆಯೇ ತಂಡದಿಂದ ಕೈಬಿಡಲಾಗಿತ್ತು ಎಂದು ಹೇಳಿದ್ದಾರೆ. ಮಾತು ಮಾತಿಗೂ ಸಿಡುಕುತ್ತಿದ್ದ ಶ್ರೀಶಾಂತ್ ಅವರ ನಡವಳಿಕೆಯಿಂದ ಬೇಸತ್ತಿದ್ದ ತಂಡದ ವ್ಯವಸ್ಥಾಪಕ ಮಂಡಳಿ, ಶ್ರೀಶಾಂತ್ ಅವರ ಎಲ್ಲಾ ಲೆಕ್ಕವನ್ನೂ ಚುಪ್ತಾ ಮಾಡಿ, ಸ್ಪಾಟ್ ಫಿಕ್ಸಿಂಗ್ ಹಗರಣಕ್ಕಿಂತಲೂ ಮೊದಲೇ ಅವರನ್ನು ಅಮಾನತುಗೊಳಿಸಿತ್ತು ಎಂದು ಹೇಳಿದ್ದಾರೆ.
ಐಪಿಎಲ್ಗೆ ತಡೆಯಾಜ್ಞೆ ಕೋರಿ ಸುಪ್ರೀಂನಲ್ಲಿ ಅರ್ಜಿ
ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಲಖ್ನೋದ ವಕೀಲರಾದ ವಿಷ್ಣು ಜೈನ್ ಎಂಬುವರು ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಸುದರ್ಶ್ ಜೈನ್ ಎಂಬ ಆರ್ಕಿಟೆಕ್ಟ್ ಒಬ್ಬರ ಪರವಾಗಿ ವಿಷ್ಣು ಜೈನ್ ಈ ಅರ್ಜಿಯಲ್ಲಿ ದಾಖಲಿಸಿದ್ದಾರೆ. ಸುಪ್ರೀಂ ಕೋರ್ಟ್ನಿಂದ ವಿಶೇಷ ತನಿಖಾ ತಂಡ (ಎಸ್ಐಟಿ)ವನ್ನು ರೂಪಿಸಿ, ಅದರ ಮೂಲಕ ತನಿಖೆ ನಡೆಸಬೇಕು ಹಾಗೂ ಈ ಮುಂದೆ ನಡೆಯಲಿರುವ ಐಪಿಎಲ್ ಪಂದ್ಯಗಳಿಗೆ ತಡೆಯಾಜ್ಞೆ ನೀಡಬೇಕೆಂದು ಅವರು ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆಟಗಾರರ ಬಿಡ್ಡಿಂಗ್ನಿಂದ ಹಿಡಿದು ಇಲ್ಲಿಯವರೆಗೆ ಐಪಿಎಲ್ನಲ್ಲಿ ಕಪ್ಪುಹಣ ಹಾಗೂ ಸಮಾಜ ಘಾತುಕ ವ್ಯಕ್ತಿಗಳಿಂದ ಹಣ ಹರಿದು ಬಂದಿದೆ. ಆದ್ದರಿಂದ, ಬಿಸಿಸಿಐ ಹಾಗೂ ಐಪಿಎಲ್ ತಂಡಗಳ ಮಾಲೀಕರನ್ನೂ ತನಿಖೆಯಲ್ಲಿ ಪರಿಗಣಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.
ಇಂದು ಸಿಬಲ್-ಜಿತೇಂದ್ರ ಮತ್ತೆ ಭೇಟಿ ?
ಕ್ರಿಕೆಟ್ ಸೇರಿದಂತೆ, ದೇಶದ ಸಮಗ್ರ ಕ್ರೀಡಾಕ್ಷೇತ್ರವನ್ನು ಬೆಟ್ಟಿಂಗ್ನಿಂದ ಹೊರಗಿಡಲು ಸಾಧ್ಯವಾಗುವಂತೆ ಪರಿಣಾಮಕಾರಿ ಕಾನೂನು ರೂಪಿಸುವ ಇಂಗಿತ ವ್ಯಕ್ತಪಡಿಸಿರುವ ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಅವರನ್ನು ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಅವರು ಮಂಗಳವಾರ ಭೇಟಿ ಮಾಡಲಿದ್ದಾರೆಂದು ಮೂಲಗಳು ಹೇಳಿವೆ. ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಹಿನ್ನೆಲೆಯಲ್ಲಿ, ಭಾನುವಾರ ಜಿತೇಂದ್ರ ಸಿಂಗ್ ಅವರನ್ನು ಕಪಿಲ್ ಸಿಬಲ್ ಭೇಟಿ ಮಾಡಿ, ಮೋಸದಾಟ ನಿಯಂತ್ರಿಸಲು ಕಠಿಣ ಕಾನೂನನ್ನು ರೂಪಿಸುವ ಅಗತ್ಯದ ಬಗ್ಗೆ ಚರ್ಚಿಸಿದ್ದರು.
ಇ ಡಿ ತನಿಖೆ
ಸ್ಪಾಟ್ ಫಿಕ್ಸಿಂಗ್ ಕುರಿತಂತೆ, ದೆಹಲಿ ಪೊಲೀಸ್ ತನಿಖೆ ಆರಂಭಿಸಿರುವುದರ ಜೊತೆಗೆ ಕೇಂದ್ರ ಜಾರಿ ನಿರ್ದೇಶನಾಲಯವೂ ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ. ಸ್ಪಾಟ್ ಫಿಕ್ಸಿಂಗ್ನಲ್ಲಿ ಕಪ್ಪು ಹಣ ಹರಿದಾಡಿರುವ ಬಗ್ಗೆ ಶಂಕೆ ಎದ್ದಿರುವುದರಿಂದ ಈ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ.
ಮತ್ತೊಬ್ಬ ರಣಜಿ ಆಟಗಾರನ ಬಂಧನ
ಏತನ್ಮಧ್ಯೆ, ಸ್ಪಾಟ್ ಫಿಕ್ಸಿಂಗ್ ತನಿಖೆಯಲ್ಲಿ ನಿರತವಾಗಿರುವ ದೆಹಲಿ ಪೊಲೀಸ್ನ ವಿಶೇಷ ಕಾರ್ಯಪಡೆ ಮತ್ತೊಬ್ಬ ಮಾಜಿ ರಣಜಿ ಆಟಗಾರರನ್ನು ಬಂಧಿಸಿದೆ. ಈತನ ಹೆಸರು ಬಾಬುರಾವ್ ಯಾದವ್ ಎಂದು ಹೇಳಲಾಗಿದೆ. ಈಗಾಗಲೇ ಬಂಧಿತನಾಗಿರುವ ಸುನಿಲ್ ಭಾಟಿಯಾನನ್ನು ರಾಜಸ್ಥಾನ ರಾಯಲ್ಸ್ನ ಅಜಿತ್ ಚಂಡಿಲಾ ಅವರಿಗೆ ಪರಿಚಯಿಸಿದ್ದು ಈತನೇ ಎಂದು ಪೊಲೀಸರು ತಿಳಿಸಿದ್ದಾರೆ. ಬಾಬುರಾವ್ ಅವರು, ದೆಹಲಿ ರಣಜಿ ತಂಡದಲ್ಲಿ ಆಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸ್ಪಾಟ್ ಫಿಕ್ಸಿಂಗ್ಗೆ ಬಾಲಿವುಡ್ ನಂಟು?
ಶ್ರೀಶಾಂತ್ಗೆ ರೂಪದರ್ಶಿಗಳ ಫೋಟೊ ಕಳುಹಿಸಿಕೊಟ್ಟ ಕಾಸ್ಟಿಂಗ್ ಡೈರೆಕ್ಟರೊಬ್ಬರನ್ನು ವಿಚಾರಣೆ ನಡೆಸಿದ ಮುಂಬೈ ಪೊಲೀಸರು, ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ನಂಟು ಬೆಳೆಸಿಕೊಂಡಿರುವ ತೆಲುಗು ಸಿನಿಮಾ ನಿರ್ಮಾಪಕರಿಗೆ ಸಮನ್ಸ್ ಜಾರಿ ಮಾಡಿದೆ.
ಅಪರಾಧ ವಿಭಾಗದ ಮೂಲಗಳ ಪ್ರಕಾರ, ಕಳೆದ ಕೆಲವು ತಿಂಗಳಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಕಳುಹಿಸಿರುವ ಅನೇಕ ರೂಪದರ್ಶಿಗಳ ಪೋಟೊ ಶ್ರೀಶಾಂತ್ ಇ-ಮೇಲ್ನಲ್ಲಿದೆ ಎಂದು ತಿಳಿಸಿದೆ.
ಶ್ರೀಶಾಂತ್ ಲ್ಯಾಪ್ಟಾಪ್ನಲ್ಲಿ ಮಹತ್ವದ ಮಾಹಿತಿ
ರಾಜಸ್ಥಾನ ರಾಯಲ್ಸ್ ತಂಡದ ಶ್ರೀಶಾಂತ್ ಬಾಡಿಗೆಗೆ ಪಡೆದಿದ್ದ ಪಂಚತಾರಾ ಹೊಟೇಲೊಂದರ ಕೊಠಡಿಯಿಂದ ವಶಪಡಿಸಿಕೊಳ್ಳಲಾದ ಶ್ರೀಶಾಂತ್ ಅವರ ಲ್ಯಾಪ್ಟಾಪ್ನಲ್ಲಿ ಮಹತ್ವದ ಮಾಹಿತಿಗಳನ್ನು ಪತ್ತೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮುಂಬೈ ಪೊಲೀಸ್ ಇಲಾಖೆಯ ಸೈಬರ್ ಸೆಲ್ನಲ್ಲಿ ಪರೀಕ್ಷೆಗೊಳಪಡಿಸಲಾಗಿರುವ ಲ್ಯಾಪ್ಟಾಪ್ ಹಾಗೂ ನೋಟ್ಬುಕ್ನಲ್ಲಿ ಶ್ರೀಶಾಂತ್ ಅವರು, ಬುಕ್ಕಿಗಳ ಜೊತೆ ಇ-ಮೇಲ್ ಕಳುಹಿಸಿರುವ ಹಾಗೂ ಚಾಟ್ ಮಾಡಿರುವ ಮಾಹಿತಿ ದೊರೆತಿವೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಬುಕ್ಕಿಗಳಾದ ಜೀಜು ಹಾಗೂ ಜ್ಯೂಪಿಟರ್ ಜೊತೆಯಲ್ಲಿ ಶ್ರೀಶಾಂತ್ ತಗೆಸಿಕೊಂಡಿರುವ ಫೋಟೋ ಕೂಡಾ ಲಭ್ಯವಾಗಿದೆ. ಆದರೆ, ನೋಟ್ಬುಕ್ನಲ್ಲಿ ತಾವು ಬುಕ್ಕಿಗಳೊಡನೆ ಮಾತುಕತೆ (ಚಾಟಿಂಗ್)ಯನ್ನು ಡಿಲೀಟ್ ಮಾಡಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಲ್ಯಾಪ್ಟಾಪ್ನ ಫೋಲ್ಡರ್ ಒಂದರಲ್ಲಿ, ಅನೇಕ ಟೆಲಿಫೋನ್ ನಂಬರ್ಗಳಿರುವ ಪಟ್ಟಿಯೊಂದು ದೊರತಿದ್ದು, ಪ್ರತಿಯೊಂದು ಸಂಖ್ಯೆಗೂ ಗುಪ್ತ ಪದ (ಕೋಡ್ ವರ್ಡ್) ಬಳಸಲಾಗಿದೆ. ಇದೂ ಶ್ರೀಶಾಂತ್ ಅವರ ಮೇಲಿನ ಆರೋಪಕ್ಕೆ ಮತ್ತಷ್ಟು ಇಂಬು ಕೊಟ್ಟಿದೆ.