ಅಂತರ ಶಾಲಾ ಕ್ರಿಕೆಟ್ ಪಂದ್ಯಾವಳಿ
ಬೆಂಗಳೂರು: ಸರ್.ಎಂ ವಿಶ್ವೇಶ್ವರಯ್ಯ ಸ್ಮಾರಕ ಅಂತರ ಅಕಾಡೆಮಿ ಹಾಗೂ ಶಾಲಾ ಕ್ರಿಕೆಟ್ ಪಂದ್ಯಾವಳಿ ಮೇ23 ರಿಂದ ಜೂನ್ 7ರವರೆಗೆ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ 10 ಪ್ರಮುಖ ಅಕಾಡೆಮಿ ತಂಡಗಳು ಭಾಗವಹಿಸುತ್ತಿದ್ದು, ಈ ತಂಡಗಳನ್ನು 2 ವಲಯಗಳನ್ನಾಗಿ ವಿಂಗಡಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಪ್ರತಿ ಪಂದ್ಯ 30 ಓವರ್‌ಗಳ ಪಂದ್ಯವಾಗಿದ್ದು, ಪ್ರತಿ ತಂಡ ಮತ್ತೊಂದು ವಲಯದ ಎಲ್ಲಾ ತಂಡಗಳ ವಿರುದ್ಧ ಪಂದ್ಯವನ್ನಾಡಲಿದೆ. ಪ್ರತಿ ದಿನಕ್ಕೆ ಎರಡು ಪಂದ್ಯಗಳು ನಡೆಯಲಿದ್ದು, ಕೆಎಸ್‌ಸಿಎ ಪಂದ್ಯಾವಳಿಗೆ ಅಂಪೈರ್‌ಗಳನ್ನು ನೇಮಕ ಮಾಡಿದೆ. ಈ ಪಂದ್ಯಾವಳಿ ಕೆಎಸ್‌ಸಿಎ ಮಾನ್ಯತೆ ಪಡೆದಿದ್ದು, ಪಂದ್ಯಾವಳಿಯಲ್ಲಿ ವಿನ್ನರ್ ಮತ್ತು ರನ್ನರ್ ಅಪ್ ಜತೆಗೆ ಉತ್ತಮ ಬ್ಯಾಟ್ಸ್‌ಮನ್, ಉತ್ತಮ ಬೌಲರ್ ಹಾಗೂ ಉತ್ತಮ ಆಲ್ರೌಂಡರ್ ಪ್ರಶಸ್ತಿಯನ್ನು ನೀಡಲಾಗುವುದು.
ಕಿರಿಯರ ಫ್ರೆಂಚ್ ಓಪನ್‌ಗೆ ಸ್ನೇಹಾ
ಚೆನ್ನೈ: ಜೂನ್ 2ರಿಂದ ಆರಂಭವಾಗಲಿರುವ ಕಿರಿಯರ ಫ್ರೆಂಚ್ ಓಪನ್ ಪಂದ್ಯಾವಳಿಗೆ ಭಾರತದಿಂದ ಸ್ನೇಹದೇವಿ ರೆಡ್ಡಿ ಏಕಾಂಗಿಯಾಗಿ ಭಾಗವಹಿಸುತ್ತಿದ್ದು, ಕ್ವಾಲಿಫೈಯರ್ ಮೂಲಕ ಪ್ರಮುಖ ಸುತ್ತಿಗೆ ಪ್ರವೇಶಿಸಲು ಪ್ರಯತ್‌ನಿಸಲಿದ್ದಾರೆ. ಸ್ನೇಹದೇವಿ ಕಳೆದ ತಿಂಗಳು ನಡೆದ ಏಷ್ಯನ್ ಜೂನಿಯರ್ ಚಾಂಪಿಯನ್‌ನ ಮಹಿಳೆಯರ ವಿಭಾಗದಲ್ಲಿ ಗೆಲವು ಸಾಧಿಸಿದ್ದರು. ಅಲ್ಲದೆ ಈ ಪಂದ್ಯಾವಳಿಗೆ ತೆರಳುವ ಮುನ್ನ ಒಂದು ವಾರಗಳ ಕಾಲ ಬಾರ್ಸಿಲೋನಾದಲ್ಲಿರುವ 4ಸ್ಲಾಮ್ ಟೆನಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ತಮಿಳುನಾಡು ಟೆನಿಸ್ ಅಸೋಸಿಯೇಷನ್ (ಟಿಎನ್‌ಟಿಎ) ಯುವ ಆಟಗಾರರಿಗೆ ಉತ್ತೇಜನ ನೀಡಲು ಎಲ್ಲಾ ಪ್ರಯತ್ನವನ್ನು ನಡೆಸುತ್ತಿದ್ದು, ಸೇಹ್ನದೇವಿ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದು ಟಿಎನ್‌ಟಿಎ ಅಧ್ಯಕ್ಷ ಕಾರ್ತಿ ಪಿ ಚಿದಂಬರಂ ತಿಳಿಸಿದ್ದಾರೆ.
ವಾರ್ನರ್‌ಗೆ ದಂಡ
ಮೆಲ್ಬನ್: ಟ್ವಿಟರ್‌ನಲ್ಲಿ ಆಸೀಸ್‌ನ ಕ್ರಿಕೆಟ್ ಬರಹಗಾರರ ಮೇಲೆ ನಿಂಧನೆ ಮಾಡಿದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) 5750 ಅಮೆರಿಕನ್ ಡಾಲರ್‌ನಷ್ಟು ದಂಡ ವಿಧಿಸಿದೆ.