ಬಿಸಿಸಿಐ ವಶ ಅರ್ಜಿ: ಕೇಂದ್ರಕ್ಕೆ ಮದ್ರಾಸ್ ಹೈ ನೋಟಿಸ್
ಚೆನ್ನೈ: ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಆಡಳಿತವನ್ನು ಸರ್ಕಾರ ವಶಪಡಿಸಿಕೊಳ್ಳಬೇಕೆಂದು ಸಲ್ಲಿಸಲಾಗಿದ್ದ ಮನವಿಗೆ ಸ್ಪಂದಿಸಿರುವ ಮದ್ರಾಸ್ ಹೈಕೋರ್ಟ್, ಈ ಬಗ್ಗೆ ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ಕೇಳಿದೆ. ಫಿಕ್ಸಿಂಗ್ ಹಗರಣದ ಹಿನ್ನೆಲೆಯಲ್ಲಿ ಬಿಸಿಸಿಐನ ಆಡಳಿತವನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಬೇಕೆಂದು ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ, ಕೇಂದ್ರಕ್ಕೆ ಈ ಸೂಚನೆ ನೀಡಿದೆ.
ಸಂಪೂರ್ಣ ವ್ಯಾಪರಮಯವಾಗಿರುವ ಐಪಿಎಲ್‌ನಲ್ಲಿ ಬರುವ ಹಣದಿಂದ ಸಮಾಜಕ್ಕೆ ಕಿಂಚಿತ್ತಾದರೂ ಉಪಯೋಗವಿಲ್ಲ. ಬಿಸಿಸಿಐ ಆಗಲೀ, ಐಪಿಎಲ್ ಆಡಳಿತ ಮಂಡಳಿಯಾಗಲೀ ತಮ್ಮ ಆದಾಯದಲ್ಲಿ ಯಾವುದೇ ಸಾಮಾಜಿಕ ಸೇವೆಯನ್ನೂ ಮಾಡಿಲ್ಲ. ಅದಲ್ಲದೇ, ಈ ಎರಡೂ ಸಂಸ್ಥೆಗಳಿಂದ ಸಮಾಜದಲ್ಲಿ ಸ್ಪಾಟ್ ಫಿಕ್ಸಿಂಗ್‌ನಂಥ ಪೀಡೆಗೆ ಅವಕಾಶವಾಗಿದೆ. ಇದರಿಂದಾಗಿ, ಈ ಎರಡೂ ಸಂಸ್ಥೆಗಳ ಆಡಳಿತವನ್ನು ಸರ್ಕಾರ ವಹಿಸಿಕೊಳ್ಳಬೇಕೆಂದು ಅರ್ಜಿದಾರರು ವಾದ ಮಂಡಿಸಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿರುವ ಪೀಠ, ಈ ಬಗ್ಗೆ ಎರಡು ವಾರಗಳಲ್ಲಿ ಉತ್ತರ ನೀಡಲು ಕೇಂದ್ರ ಸರ್ಕಾರ, ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.
ಮತ್ತೊಂದು ಐಪಿಎಲ್: ಸ್ಪಾಟ್ ಫಿಕ್ಸಿಂಗ್ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಾವಳಿಯನ್ನು ನಿಷೇಧಿಸುವಂಥ ಆದೇಶವನ್ನು ನ್ಯಾಯಾಲಯ ನೀಡಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ದೆಹಲಿ ಮೂಲದ ಸರ್ಕಾರೇತರ ಸಂಸ್ಥೆಯೊಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಅಭಿಪ್ರಾಯ ತಿಳಿಸಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಇತ್ತೀಚೆಗೆ ಸಲ್ಲಿಸಲಾಗಿದ್ದ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಐಪಿಎಲ್ ನಿಷೇಧ ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಸುಪ್ರೀಂ ಕೋರ್ಟ್‌ನಿಂದ ಇಂಥದ್ದೊಂದು ಸ್ಪಷ್ಟನೆ ಬಂದ ಮೇಲೆ ಪುನಃ ಅದೇ ರೀತಿಯ ಅರ್ಜಿಯ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಮುರುಗೇಶನ್ ಹಾಗೂ ನ್ಯಾ. ಜಯಂತ್ ನಾಥ್ ಅವರುಳ್ಳ ಪೀಠ ಅಭಿಪ್ರಾಯಪಟ್ಟಿತು.
ಅರ್ಜಿದಾರರಿಗೆ ಸಲಹೆ: ಆದರೆ, ಸಲ್ಲಿಸಲಾಗಿರುವ ಅರ್ಜಿಯಲ್ಲಿ ಕೊಂಚ ಮಾರ್ಪಾಟು ಮಾಡಿದರೆ, ನ್ಯಾಯಾಲಯ ಆ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸಿದ್ಧ ಎಂದು ನ್ಯಾಯಾಲಯ ಹೇಳಿತು. ಐಪಿಎಲ್ ಆಡಳಿತವನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಬೇಕು ಅಥವಾ ಕಳಂಕಿತ ಆಟಗಾರರ ಮೇಲೆ ಆಜೀವ ನಿಷೇಧ ಹೇರಬೇಕೆನ್ನುವ ವಿಷಯಗಳ ಮೇಲೆ ಅರ್ಜಿ ಸಲ್ಲಿಸಿದರೆ, ನ್ಯಾಯಾಲಯ ವಿಚಾರಣೆ ನಡೆಸುತ್ತದೆಂದು ಸಲಹೆ ನೀಡಿದರು.
ಅಂಪೈರ್ ಅಸದ್ ಮೇಲೆ ಅನುಮಾನ
ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ದೃಷ್ಟಿ ಇದೀಗ ಅಂಪೈರ್‌ಗಳ ಮೇಲೆ ಬಿದ್ದಿದೆ. ಪಾಕಿಸ್ತಾನ ಮೂಲದ ಅಂಪೈರ್ ಅಸದ್ ರೌಫ್ ಈ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ಮೂಲಗಳು ಹೇಳಿವೆ. ಫಿಕ್ಸಿಂಗ್ ಹಿನ್ನೆಲೆಯಲ್ಲಿ, ಇತ್ತೀಚೆಗೆ ಬಂಧಿಸಲಾಗಿರುವ ರಾಜಸ್ಥಾನ ರಾಯಲ್ಸ್ ತಂಡದ ಮೂವರು ಆಟಗಾರರು ಬುಕಿಗಳೊಂದಿಗೆ 'ಹೊಂದಾಣಿಕೆ' ಮಾಡಿಕೊಂಡಿದ್ದ ಪಂದ್ಯಗಳಲ್ಲಿ ಅಂಪೈರ್‌ಗಳೂ ಸಾಥ್ ನೀಡಿದ್ದಾರೆಂಬ ಗುಮಾನಿಯನ್ನು ಪೊಲೀಸರು ಹೊಂದಿದ್ದಾರೆಂದು ಕೆಲ ವರದಿಗಳು ಹೇಳಿವೆ.
ಸಾಕ್ಷ್ಯಗಳು: ಪಾಕಿಸ್ತಾನ ಮೂಲದ ಅಸದ್ ರವೂಫ್, ಐಪಿಲ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರೆಂದು ಮಂಗಳವಾರ ಬಂಧನಕ್ಕೊಳಗಾಗಿರುವ ನಟ ವಿಂಧೂ ಸಿಂಗ್ ಅವರು ಬಾಯಿಬಿಟ್ಟಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.