ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬ್ರಾಡ್ ವಿನ್

ಬುಧವಾರ ನಡೆದ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ತಂಡ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

Srinivasa Murthy VN
Updated On : 23 May 2013, 11:50 am

ನವದೆಹಲಿ: ಬ್ರಾಡ್ ಹಾಡ್ಜ್ ಅವರ ಭರ್ಜರಿ ಬ್ಯಾಟಿಂಗ್‌ನಿಂದಾಗಿ ರಾಜಸ್ಥಾನ ತಂಡ, ಬುಧವಾರ ನಡೆದ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ್ದ ಸನ್‌ರೈಸರ್ಸ್, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ, 19.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿ ಜಯಗಳಿಸಿತು.
ಆರಂಭಿಕ ಕುಸಿತ: ಸನ್‌ರೈಸರ್ಸ್ ನೀಡಿದ್ದ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ ಆರಂಭಿಕ ರಾಹುಲ್ ದ್ರಾವಿಡ್ ಅವರನ್ನು ಬೇಗನೇ ಕಳೆದುಕೊಂಡಿತು. ವೈಯುಕ್ತಿಕವಾಗಿ ಕೇವಲ 12 ರನ್ ಗಳಿಸಿ ಔಟಾದ ಅವರು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ಅವರ ನಂತರ, ಮತ್ತೊಬ್ಬ ಆರಂಭಿಕ ಅಜಿಂಕ್ಯ ರಹಾನೆ ಹಾಗೂ ಡೇವಿಡ್ ವ್ಯಾಟ್ಸನ್ ಇನಿಂಗ್ಸ್ ಮುಂದುವರೆಸಿದರಾದರೂ, ಅಗತ್ಯ ಅಡಿಪಾಯ ಹಾಕಲಾಗಲಿಲ್ಲ. ತಂಡದ ಮೊತ್ತ 50 ರನ್ ಆಗಿದ್ದಾಗ ವ್ಯಾಟ್ಸನ್ ಔಟಾದರು. ವ್ಯಾಟ್ಸನ್ ಅವರ ನಂತರ 60 ರನ್ ಆಗುವಷ್ಟರಲ್ಲಿ ಮೂರು ಪ್ರಮುಖ ವಿಕೆಟ್ (ಯಗ್ನಿಕ್, ರಹಾನೆ ಹಾಗೂ ಸ್ಟುವರ್ಟ್ ಬಿನ್ನಿ)ಗಳನ್ನು ರಾಜಸ್ಥಾನ ಕಳೆದುಕೊಂಡಿತು.
ಆದರೆ, 10ನೇ ಓವರ್‌ನ ಆರಂಭದಿಂದ ಜೊತೆಯಾದ ಸ್ಯಾಮ್ಸನ್ ಹಾಗೂ ಬ್ರಾಡ್ ಹಾಡ್ಜ್ 6ನೇ ವಿಕೆಟ್‌ಗೆ 45 ರನ್ ಸೇರಿಸುವ ಮೂಲಕ ಇನಿಂಗ್ಸ್‌ಗೆ ಚೇತರಿಕೆ ತಂದರು. 14ನೇ ಓವರ್‌ನಲ್ಲಿ ಎರಡು ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದ ಹಾಡ್ಜ್, 15ನೇ ಓವರ್‌ನಲ್ಲಿ ಪುನಃ ಬೌಂಡರಿ ಬಾರಿಸಿ ಭರವಸೆ ಮೂಡಿಸಿದರು.
ಆದರೆ, ಅವರಿಗೆ ಉತ್ತಮ ಸಾಥ್ ನೀಡುತ್ತಿದ್ದ ಸ್ಯಾಮ್ಸನ್ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ. 15ನೇ ಓವರ್‌ನ ಕೊನೆಯ ಎಸೆತದಲ್ಲಿ ಅವರು ವಿಕೆಟ್ ಒಪ್ಪಿಸಿ ಹೊರನಡೆದರು.
ನಂತರ ಬಂದ ಫಾಕ್ನರ್ ಜೊತೆಗೂಡಿದ ಹಾಡ್ಜ್, ಗೆಲವಿಗಾಗಿ ಹೋರಾಟ ನಡೆಸಿದರು.
ಸ್ಟೇಯ್ನ್, ಪೆರೇರಾ ಅವರಂಥ ಬೌಲರ್‌ಗಳು ಇನಿಂಗ್ಸ್ ಅಂತ್ಯದ ವೇಳೆಗೆ ದಾಳಿ ನಡೆಸಿದರೂ, ಬ್ರಾಡ್ಜ್ ಮಾತ್ರ ಎಚ್ಚರಿಕೆಯ ಆಟವಾಡಿದರು. ಈ ಹಂತದಲ್ಲಿ ಕೆಲವೊಂದು ಮಿಸ್‌ಫೀಲ್ಡ್‌ಗಳೂ ತಂಡಕ್ಕೆ ನೆರವಾದವು. ಅಂತೂ ಇಂತೂ ಗೆಲವಿನ ಸನಿಹಕ್ಕೆ ಬಂದ ರಾಜಸ್ಥಾನ ತಂಡಕ್ಕೆ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ 10 ರನ್ ಪೇರಿಸುವ ಅನಿವಾರ್ಯತೆ ಸಿಲುಕಿತು. ಸಾಮಿ ಮಾಡಿದ ಆ ಓವರ್‌ನ ಮೊದಲೆರಡೂ ಎಸೆತಗಳಲ್ಲಿ ಸಿಕ್ಸರ್ ಎತ್ತಿದ ಹಾಡ್ಜ್, ರಾಜಸ್ಥಾನ ತಂಡಕ್ಕೆ ಜಯ ತಂದರು.

ಸಾಧಾರಣ ಮೊತ್ತ: ಇದಕ್ಕೂ ಮುನ್ನ, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಸನ್‌ರೈಸರ್ಸ್, ಆರಂಭದಲ್ಲೇ ಪಾರ್ಥಿವ್ ಪಟೇಲ್ ಹಾಗೂ ಅವರ ನಂತರ ಬಂದಿದ್ದ ಹನುಮ ವಿಹಾರಿ ಅವರನ್ನು ಬೇಗನೇ ಕಳೆದುಕೊಂಡಿತು.
ಆದರೆ, ಮತ್ತೊಬ್ಬ ಆರಂಭಿಕ ಶಿಖರ್ ಧವನ್ ಹಾಗೂ ಕೆಮೆರೂನ್ ವೈಟ್ ಅವರಿಬ್ಬರೂ ತಂಡದ ರನ್‌ವೇಗ ಹೆಚ್ಚಿಸಿದರು. 3ನೇ ವಿಕೆಟ್‌ಗೆ ಈ ಇಬ್ಬರೂ 52 ರನ್ ಸೇರಿಸಿದರು.
ಆದರೆ, 16ನೇ ಓವರ್‌ನಲ್ಲಿ ಇವರಿಬ್ಬರ ಜೋಡಿ ಬೇರ್ಪಟ್ಟಿತು. ವೈಟ್ ಅವರು ವಿಕೆಟ್ ಒಪ್ಪಿಸಿ ಹೊರನಡೆದರು. ಆಗ, ಧವನ್ ಅವರನ್ನು ಸೇರಿಕೊಂಡ ಡರೇನ್ ಸಾಮಿ, ಉತ್ತಮ ಪ್ರದರ್ಶನ ನೀಡಿದರು.
4ನೇ ವಿಕೆಟ್‌ಗೆ ಧವನ್- ಸಾಮಿ 28 ರನ್ ಪೇರಿಸಿದರು. ಆಗ, ಧವನ್ ವಿಕೆಟ್ ಉರುಳಿತು.  ಆಗ, ಜೋಡಿಯಾದ ಸಾಮಿ ಹಾಗೂ ಪೆರೇರಾ 5ನೇ ವಿಕೆಟ್‌ಗೆ 28 ರನ್ ಸೇರಿಸಿತು. ಆದರೆ, ಈ ಇಬ್ಬರ ವಿಕೆಟ್ ಉರುಳಿದ ಮೇಲೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಆಡಲಿಲ್ಲ. ಅಂತಿಮವಾಗಿ, ಸನ್‌ರೈಸರ್ಸ್ 132 ರನ್‌ಗಳ ಸಾಧಾರಣ ಮೊತ್ತ ಗಳಿಸಿತು.

ಸ್ಕೋರ್ ಬೋರ್ಡ್
ಸನ್‌ರೈಸರ್ಸ್
132/7 (20 ಓವರ್)
ಪಾರ್ಥೀವ್ ಸಿ ಸ್ಯಾಮ್ಸನ್ ಬಿ ಮಲ್ಲಿಕ್ 1(3), ಧವನ್ ಸಿ ತ್ರಿವೇದಿ ಬಿ ಫಾಕ್ನರ್ 33(39), ವಿಹಾರಿ ಸಿ ಕೂಪರ್ ಬಿ ಮಲ್ಲಿಕ್ 1(8), ವೈಟ್ ಸಿ ಕೂಪರ್ ಬಿ ತ್ರಿವೇದಿ 31(28), ಸಾಮಿ ರನೌಟ್ (ಶುಕ್ಲಾ/ಯಾಗ್ನಿಕ್) 29(21), ಪೆರೇರಾ ಸಿ ಯಾಗ್ನಿಕ್ ಬಿ ವ್ಯಾಟ್ಸನ್ 11(6), ಸಾಮಂತ್ರೆ ರನೌಟ್ (ರಹಾನೆ/ಫಾಕ್ನರ್) 14(11), ಕರಣ್ ಅಜೇಯ 2(2), ಸ್ಟೇಯ್ನ್ ಅಜೇಯ 4(2), ಇತರೆ 6; ವಿಕೆಟ್ ಪತನ: 1-2, 2-3, 3-55, 4-83, 5-111, 6-113, 7-127; ಬೌಲಿಂಗ್: ಮಲ್ಲಿಕ್ 3-0-14-2, ಫಾಕ್ನರ್ 4-0-28-1, ವ್ಯಾಟ್ಸನ್ 4-0-32-1, ತ್ರಿವೇದಿ 4-0-18-1, ಕೂಪರ್ 4-0-36-0, ಬಿನ್ನಿ 1-0-2-0.
ರಾಜಸ್ಥಾನ ರಾಯಲ್ಸ್: 135/6 (19.2 ಓವರ್)
ರಾಹುಲ್ ದ್ರಾವಿಡ್ ಸಿ ಕೆವಿ ಶರ್ಮಾ ಬಿ ಇಶಾಂತ್ 12 (10), ಅಜಿಂಕ್ಯ ರಹಾನೆ ಸಿ ಅಂಡ್ ಬಿ 18 (20), ಶೇನ್ ವ್ಯಾಟ್ಸನ್ ಸಿ ಸಾಮಿ ಬಿ ಕೆವಿ ಶರ್ಮಾ 24 (15), ಯಗ್ನಿಕ್ ಬಿ ಸಾಮಿ 0 (4), ಸ್ಟುವರ್ಟ್ ಬಿನ್ನಿ ಬಿ ಸಾಮಿ 2 (6), ಸ್ಯಾಮ್ಸನ್ ಎಲ್‌ಬಿಡಬ್ಲ್ಯೂ ಬಿ ಸ್ಟೇಯ್ನ್ 10 (21), ಬ್ರಾಡ್ ಹಾಡ್ಜ್ ಅಜೇಯ 54 (29), ಫಾಕ್ನರ್ ಅಜೇಯ 11 (11). ಇತರೆ 4.
ವಿಕೆಟ್ ಪತನ: 1-13, 2-50, 3-53, 4-55, 5-57, 6- 102.
ಬೌಲಿಂಗ್: ಸ್ಟೇಯ್ನ್ 4-0-23-1, ಇಶಾಂತ್ ಶರ್ಮಾ 3-0-31-1, ತಿಸಾರಾ ಪೆರೇರಾ 3-0-14-0, ಕೆವಿ ಶರ್ಮಾ 2-0-24-1, ಡರೇನ್ ಸಾಮಿ 3.2-0-27-2, ಅಮಿತ್ ಮಿಶ್ರಾ 4-1-16-1.

ಪಂದ್ಯಶ್ರೇಷ್ಠ: ಬ್ರಾಡ್ ಹಾಡ್ಜ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement