ಭಾರತದ ವನಿತೆಯರಿಗೆ ಆರಂಭಿಕ ಆಘಾತ
ರಾಮಲ್ಲಾ: ಭಾರತ ವನಿತೆಯರ ಫುಟ್ಬಾಲ್ ತಂಡ ಎಎಫ್‌ಸಿ ವನಿತೆಯರ ಏಷ್ಯಾ ಕಪ್ ಅರ್ಹತಾ ಪಂದ್ಯಾವಳಿಯಲ್ಲಿ ಮ್ಯಾನ್ಮಾರ್ ವಿರುದ್ಧ 0-2 ಅಂತರದಿಂದ ಸೋಲನುಭವಿಸಿದೆ.
ನಾವ್ ಫಾವ್ ಮತ್ತು ಖಿನ್ ಮೋಯಿ ವಾಯಿ ಅವರು ಮೊದಲಾರ್ಧ ಪಂದ್ಯದಲ್ಲಿ ಕ್ರಮವಾಗಿ 5ನೇ ಮತ್ತು 26ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಮ್ಯಾನ್ಮಾರ್ ತಂಡ ಭಾರತದ ವಿರುದ್ಧ ಸುಲಭವಾಗಿ ಜಯ ಕಂಡುಕೊಂಡಿತು.
ಪಂದ್ಯದ 27ನೇ ನಿಮಿಷದಲ್ಲಿ ಮ್ಯಾನ್ಮಾರ್ ಮತ್ತೊಂದು ಗೋಲು ದಾಖಲಿಸುವ ಯತ್ನದಲ್ಲಿತ್ತು. ಆದರೆ, ಯೂ ಯೀ ಓವ್ಸ್ ಯತ್ನ ವಿಫಲವಾಯಿತು.
ಭಾರತ ವನಿತೆಯರ ತಂಡ ಕೃತಕ ಟರ್ಫ್‌ನಲ್ಲಿ ಹೊಂದಿಕೊಂಡು ಆಡುವ ಹೊತ್ತಿಗೆ ಮ್ಯಾನ್ಮಾರ್ ಮೇಲುಗೈ ಸಾಧಿಸಿ ಆಗಿತ್ತು. ಮೊದಲಾರ್ಧದಲ್ಲಿ ಹಿನ್ನಡೆ ಅನುಭವಿಸಿದ್ದ ಭಾರತ ತಂಡ ದ್ವಿತೀಯಾರ್ಧದಲ್ಲಿ ಚೇತರಿಸಿಕೊಳ್ಳಲೇ ಇಲ್ಲ. ಆಕ್ರಮಣಕಾರಿ ದಾಳಿ ನಡೆಸಿತಾದರೂ, ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.
ಪಂದ್ಯದ 22ನೇ ನಿಮಿಷದಲ್ಲಿ ಗೋಲು ದಾಖಲಿಸಲು ಭಾರತಕ್ಕೆ ಸುವರ್ಣ ಅವಕಾಶ ದೊರಕಿತ್ತು. ಆದರೆ, ಮಾಜಿ ನಾಯಕಿ ಒಯಿನಾಮ್ ಬೆಂಬೆಮ್ ದೇವಿ ಪಾಸ್ ಮಾಡಿದ ಚೆಂಡನ್ನು ಗೋಲಾಗಿ ಪರಿವರ್ತಿಸುವಲ್ಲಿ ಸ್ಟ್ರೈಕರ್ ಬಾಲಾದೇವಿ ವೈಫಲ್ಯ ಕಂಡರು. ಭಾರತ ಸಮಬಲ ಸಾಧಿಸಲು ಯತ್ನಿಸುತ್ತಿದ್ದಂತೆ ಮ್ಯಾನ್ಮಾರ್ 2-0 ಅಂತರದಿಂದ ಮುನ್ನಡೆ ಕಂಡುಕೊಂಡಿತು.
ಭಾರತ ವನಿತೆಯರು ಗುರುವಾರ ನಡೆಯಲಿರುವ ಪಂದ್ಯದಲ್ಲಿ ತೈಪೇ ವಿರುದ್ಧ ಹೋರಾಟ ನಡೆಸಲಿದ್ದಾರೆ. ತೈಪೇ ತಂಡ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಪ್ಯಾಲೆಸ್ತಿನ್ ವಿರುದ್ಧ 6-0 ಗೋಲುಗಳ ಅಂತರದಿಂದ ಜಯ ಸಾಧಿಸಿದೆ. ಭಾರತಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ.