ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮುಗ್ಗರಿಸಿದ ತಂಡಗಳಲ್ಲಿ ನಾಯಕರ ಪಾತ್ರ

Srinivasa Murthy VN
Updated On : 23 May 2013, 11:53 am

ಬೆಂಗಳೂರು: ಐಪಿಎಲ್ 6ನೇ ಆವೃತ್ತಿಯಲ್ಲಿ ಪ್ರತಿಯೊಂದು ನಾಯಕರ ಪ್ರದರ್ಶನ ಆಯಾ ತಂಡಗಳ ಯಶಸ್ಸಿನ ಮೇಲೆ ಪರಿಣಾಮ ಬೀರಿದ್ದು, ತಂಡದ ಯಶಸ್ಸು ಹಾಗೂ ವಿಫಲತೆಗೆ ಕಾರಣವಾಗಿದೆ. ಹಾಗಾಗಿ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆಯಲು ವಿಫಲವಾದ ತಂಡಗಳ ಬಹುತೇಕ ನಾಯಕರ ಪ್ರದರ್ಶನ ತೀರಾ ಕಳಪೆಯಾಗಿದೆ.
ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹೊರತು ಪಡಿಸಿದರೆ ಉಳಿದ ನಾಲ್ಕು ತಂಡಗಳ ನಾಯಕತ್ವ ವಹಿಸಿಕೊಂಡ ಆಟಗಾರರ ಪ್ರದರ್ಶನ ಉತ್ತಮವಾಗಿಲ್ಲ. ಇದು ತಂಡ ಪಂದ್ಯಾವಳಿಯಲ್ಲಿ ನೀರಸ ಪ್ರದರ್ಶನ ತೋರಲು ಪ್ರಮುಖ ಅಂಶ ಎಂದರೆ ತಪ್ಪಾಗಲಾರದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಪಂದ್ಯಾವಳಿಯಲ್ಲಿ ಹೆಚ್ಚು ಮನರಂಜನೆ ನೀಡಿರುವ ತಂಡವೆಂದು ಬಿಂಬಿತವಾಗಿರುವ ಆರ್‌ಸಿಬಿ, ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆಯಾದರೂ ಒಂದೆರಡು ಪಂದ್ಯಗಳಲ್ಲಿ ಮಾಡಿದ ಸ್ವಯಂಕೃತ ತಪ್ಪುಗಳಿಂದ ಪ್ಲೇ ಆಫ್ ಕೈ ತಪ್ಪಿತು. ಇನ್ನು ತಂಡದ ನಾಯಕ ವಿರಾಟ್ ಕೊಹ್ಲಿಯ ಪ್ರದರ್ಶನವನ್ನು ನೋಡುವುದಾದರೆ, ಈ ಆವೃತ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕತ್ವ ವಹಿಸಿಕೊಂಡ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 16 ಪಂದ್ಯಗಳಲ್ಲಿ 45.28 ಸರಾಸರಿಯಲ್ಲಿ 634 ರನ್‌ಗಳಿಸಿದರು.

ಕಿಂಗ್ಸ್ ಇಲೆವೆನ್ ಪಂಜಾಬ್: ಕಿಂಗ್ಸ್ ಇಲೆವೆನ್ ಪಂಜಾಬ್ ಆರಂಭಿಕ ಪಂದ್ಯಗಳಲ್ಲಿ ಸಾಧಾರಣ ಪ್ರದರ್ಶನ ನೀಡಿತಾದರೂ, ಅಂತಿಮ ಪಂದ್ಯಗಳಲ್ಲಿ ಜಯದ ಲಯವನ್ನು ಕಂಡುಕೊಂಡಿತು. ತಂಡದ ನಾಯಕ ಗಿಲ್‌ಕ್ರಿಸ್ಟ್ ಆರಂಭಿಕ ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸಿದರು, ಆದರೆ ಅಂತಿಮ ಕೆಲವು ಪಂದ್ಯಗಳಲ್ಲಿ ಉತ್ತಮ ರನ್‌ಗಳಿಸಿದ ಗಿಲ್ಲಿ, ಆರ್‌ಸಿಬಿ ವಿರುದ್ಧ ಅಜೇಯ 85 ಹಾಗೂ ಡೆಲ್ಲಿ ವಿರುದ್ಧ 42 ರನ್‌ಗಳಿಸಿದ್ದು, ಈ ಎರಡೂ ಪಂದ್ಯಗಳಲ್ಲಿ ಪಂಜಾಬ್ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಗಿಲ್ಲಿ 13 ಪಂದ್ಯಗಳಲ್ಲಿ 24.50 ಸರಾಸರಿಯಲ್ಲಿ 294 ರನ್‌ಗಳಿಸಿದ್ದಾರೆ. ಜತೆಗೆ ವಿಕೆಟ್ ಕೀಪಿಂಗ್‌ನಲ್ಲಿ 12 ಕ್ಯಾಚ್ ಪಡೆಯುವ ಮೂಲಕ 2ನೇ ಅತಿ ಹೆಚ್ಚು ಔಟ್‌ಗಳಲ್ಲಿ ಭಾಗಿಯಾಗಿದ್ದಾರೆ.

ಕೋಲ್ಕತಾ ನೈಟ್‌ರೈಡರ್ಸ್: ಹಾಲಿ ಚಾಂಪಿಯನ್ ಹಣೆ ಪಟ್ಟಿಯೊಂದಿಗೆ ಪಂದ್ಯಾವಳಿಯನ್ನು ಆರಂಭಿಸಿದ ಕೆಕೆಆರ್, ತನ್ನ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲಿಲ್ಲ. ತಂಡದ ನಾಯಕ ಹಾಗೂ ತಂಡದ ಪ್ರಮುಖ ಆಟಗಾರನಾಗಿರುವ ಗೌತಮ್ ಗಂಭೀರ್ ಪಂದ್ಯವಳಿಯಲ್ಲಿ ಸ್ಥಿರ ಪ್ರದರ್ಶನ ನೀಡಲಿಲ್ಲ. ಹಾಗಾಗಿ ತಂಡ ಹೀನಾಯ ಫಲಿತಾಂಶ ಪಡೆಯಲು ಕಾರಣವಾಯಿತು. 16 ಪಂದ್ಯಗಳನ್ನಾಡಿರುವ ಗಂಭೀರ್, 25.37ರ ಸರಾಸರಿಯಲ್ಲಿ 406 ರನ್‌ಗಳಿಸಿದ್ದಾರೆ. ಇದರಲ್ಲಿ 4 ಅರ್ಧ ಶತಕಗಳಿಸಿದ್ದಾರೆ. ಆರಂಭಿಕ ಪಂದ್ಯಗಳಲ್ಲಿ ಉತ್ತಮವಾಗಿ ರನ್‌ಗಳಿಸಿದರಾದರೂ, ಕಳೆದ 10 ಪಂದ್ಯಗಳಲ್ಲಿ ಕೇವಲ 1 ಅರ್ಧ ಶತಕ ಗಳಿಸಿದ್ದು ಉಳಿದ ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ್ದಾರೆ.

ಪುಣೆ ವಾರಿಯರ್ಸ್: ಕಳೆದ ಮೂರೂ ಆವೃತ್ತಿಯಲ್ಲೂ ಈ ತಂಡಕ್ಕೆ ಉತ್ತಮ ನಾಯಕನ ಕೊರತೆ ಕಾಣುತ್ತಿದ್ದು, ಈ ಮೂರೂ ಆವೃತ್ತಿಯಲ್ಲೂ ತಂಡ ಅಂಕಪಟ್ಟಿಯಲ್ಲಿ ಕೊನೆ ಎರಡು ಸ್ಥಾನಗಳಲ್ಲಿದೆ. ಈ ಆವೃತ್ತಿಯಲ್ಲಿ ಪುಣೆ ತಂಡ ಒಟ್ಟು 3 ನಾಯಕರನ್ನು ಪಡೆಯಿತು. ಪಂದ್ಯಾವಳಿಯ ಆರಂಭದಲ್ಲಿ ನಾಯಕ ಆ್ಯಂಜಲೋ ಮ್ಯಾಥ್ಯೂಸ್ ವಿಫವಾದರು. ಮ್ಯಾಥ್ಯೂಸ್ ಹಾಗೂ ಟೇಲರ್ ಸಹ ವಿಫಲರಾದರು. ಆನಂತರ ತಂಡಕ್ಕೆ ಸೇರ್ಪಡೆಯಾದ ಏರಾನ್ ಫಿಂಚ್ ನಾಯಕತ್ವ ವಹಿಸಿಕೊಂಡರು. ಫಿಂಚ್ ಕೆಲವು ಉತ್ತಮ ಪಂದ್ಯವನ್ನಾಡಿ ತಂಡ ಗೆಲವಿನ ರುಚಿ ನೋಡುವಂತೆ ಮಾಡಿದರಾದರು, ಇತರೆ ಆಟಗಾರರಿಂದ ಸರಿಯಾದ ಬೆಂಬಲ ದೊರಕದ ಹಿನ್ನಲೆಯಲ್ಲಿ ತಂಡ 8ನೇ ಸ್ಥಾನಕ್ಕೆ ತೃಪ್ತಪಡುವಂತಾಯಿತು. 14 ಪಂದ್ಯಗಳನ್ನಾಡಿದ ಫಿಂಚ್, 32.57 ಸರಾಸರಿಯಲ್ಲಿ 456 ರನ್ ಕಲೆಹಾಕಿದರು.

ಡೆಲ್ಲಿ ಡೇರ್‌ಡೆವಿಲ್ಸ್: ಕಳೆದ ಬಾರಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಗಳಿಸಿದ್ದ ಡೆಲ್ಲಿ ತಂಡ ಈ ಬಾರಿ ಕೊನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಈ ಬಾರಿ ತಂಡವನ್ನು ಮುನ್ನಡೆಸಿದ ಮಹೇಲಾ ಜಯವರ್ಧನೆ ಪ್ರದರ್ಶನ ಸಹ ಉತ್ತಮವಾಗಿಲ್ಲ. 15 ಪಂದ್ಯಗಳಲ್ಲಿ 22.06 ಸರಾಸರಿಯಲ್ಲಿ 331 ರನ್‌ಗಳಿಸಿದ್ದಾರೆ. ಅಲ್ಲದೆ ಈ ಪಂದ್ಯಾವಳಿಯಲ್ಲಿ ಕೇವಲ 2 ಅರ್ಧ ಶತಕಗಳನ್ನು ಗಳಿಸಿದ್ದಾರೆ. ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನ ಗಳಿಸಲು ಇದು ಒಂದು ಕಾರಣವಾಗಿದೆ.

-ಸೋಮಶೇಖರ ಪಿ. ಭದ್ರಾವತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement