ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಗುರುನಾಥ್ ಮೇಯಪ್ಪನ್ ಬಂಧನ

ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಗುರುನಾಥ್ ಮೇಯಪ್ಪನ್ ಅವರನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

Srinivasa Murthy VN
Updated On : 25 May 2013, 11:47 am

ಮದುರೈ/ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಗುರುನಾಥ್ ಮೇಯಪ್ಪನ್ ಅವರನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆಗೆ ಹಾಜರಾಗದೇ, ಗುರುವಾರ ಬೆಳಗ್ಗೆಯಿಂದಲೂ ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಗುರುನಾಥ್ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು. ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ವಿಂದೂ ಎದುರು ವಿಚಾರಣೆ: ಪೊಲೀಸರ ಮುಂದೆ ವಿಚಾರಣೆಗಾಗಿ ಆಗಮಿಸಿದ ಮೇಯಪ್ಪನ್ ಅವರನ್ನು ಮೇ 21ರಂದು ಬಂಧಿಸಿದ್ದ ವಿಂದೂ ದಾರಾಸಿಂಗ್ ಅವರ ಎದುರು ಕೂರಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ರಾಜೀನಾಮೆಗೆ ಒತ್ತಡ: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಎನ್. ಶ್ರೀನಿವಾಸನ್ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರಾಗಿರುವ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಬೆಟ್ಟಿಂಗ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಹಿನ್ನೆಲೆಯಲ್ಲಿ  ಒತ್ತಡ ಹೆಚ್ಚಾಗತೊಡಗಿದೆ.
ಇದೀಗ, ಗುರುನಾಥ್ ಬಂಧನಕ್ಕೊಳಗಾದ ಮೇಲೆ, ಶ್ರೀನಿವಾಸನ್ ಮೇಲಿನ ರಾಜಿನಾಮೆ ಒತ್ತಡ ಹೆಚ್ಚಿದೆ. ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಬಂಧಿತ ಬಾಲಿವುಡ್ ನಟ ವಿಂದೂ ದಾರಾ ಸಿಂಗ್, 35 ವರ್ಷದ ಮೇಯಪ್ಪನ್ ಬೆಟ್ಟಿಂಗ್ ಹಗರಣದಲ್ಲಿ ಭಾಗಿಯಾಗಿರುವ ಕುರಿತು ಹೇಳಿಕೆ ನೀಡಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಮೇಯಪ್ಪನ್‌ಗೆ ನೋಟಿಸ್ ಜಾರಿ ಮಾಡಿದ್ದರು.
ಈ ಮೊದಲು ಗುರುನಾಥ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಎನ್ನಲಾಗಿತ್ತು. ಆದರೆ, ಈಗ ಗುರುನಾಥ್ ಸಿಎಸ್‌ಕೆ ತಂಡದ ಮಾಲೀಕರೂ ಅಲ್ಲ. ಸಿಇಒ ಅಥವಾ ಪ್ರಿನ್ಸಿಪಾಲ್ ಸಹ ಅಲ್ಲ ಎಂದು ಹೇಳುವ ಮೂಲಕ ಶ್ರೀನಿವಾಸನ್ ಅವರು ಗುರುನಾಥ್ ಅವರಿಂದ ದೂರ ಉಳಿಯಲು ಯತ್ನಿಸಿದ್ದರು.
'ಗುರುನಾಥ್ ಸಿಎಸ್‌ಕೆ ತಂಡದ ಆಡಳಿತ ಮಂಡಳಿಯ ಓರ್ವ ಗೌರವ ಸದಸ್ಯ ಮಾತ್ರ. ಯಾರಾದರೂ ತಪ್ಪು ಮಾಡಿದ್ದರೆ ಅವರ ವಿರುದ್ಧ ಯಾವುದೇ ರೀತಿಯ ಕ್ರಮಕೈಗೊಳ್ಳಲು ಇಂಡಿಯಾ ಸಿಮೆಂಟ್ಸ್ ಹಿಂದೆ ಮುಂದೆ ನೋಡುವುದಿಲ್ಲ. ಇಂಡಿಯಾ ಸಿಮೆಂಟ್ಸ್ ಸಂಸ್ಥೆ, ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಬಿಸಿಸಿಐ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಅಧಿಕಾರಿಗಳಿಗೆ ಎಲ್ಲ ರೀತಿಯಿಂದ ಸಹಕಾರ ನೀಡಲಿದೆ' ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.
ಆದರೆ, ಗುರು ಬಂಧನದ ನಂತರ, ಶ್ರೀನಿವಾಸನ್ ರಾಜಿನಾಮೆಗೆ ಎಲ್ಲ ಕಡೆಯಿಂದ ಒತ್ತಾಯ ಹೆಚ್ಚಾಗುತ್ತಿದೆ. 'ಶ್ರೀನಿವಾಸನ್ ನೈತಿಕತೆಯ ಪ್ರಜ್ಞೆಯನ್ನು ಹೊಂದಿದ್ದರೆ ತಕ್ಷಣವೇ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು' ಎಂದು ಎನ್‌ಸಿಪಿ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಆದರೆ, ತನಿಖೆಯ ವರದಿ ಬರುವವರೆಗೂ ಕಾಯಬೇಕು ಎಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.
'ಬಿಸಿಸಿಐ ನೇಮಿಸಿರುವ ರವಿ ಸವಾನಿ ಸಮಿತಿ ಈಗಾಗಲೇ ತನಿಖೆ ನಡೆಸಿದೆ.  ಸಮಿತಿ ವರದಿ ಸಲ್ಲಿಸುವರೆಗೂ ಕಾಯೋಣ.
ವರದಿ ಒಪ್ಪಿಸಿದ ನಂತರ ಶಿಸ್ತು ಸಮಿತಿ ನಂತರ ಕ್ರಮ ಕೈಗೊಳ್ಳಲಿದೆ' ಎಂದಿದ್ದಾರೆ ಶುಕ್ಲಾ.

ಗುರುನಾಥ್‌ಗೆ ಚೆನ್ನೈ ಬುಕ್ಕಿಗಳ ಜತೆ ನಂಟಿದೆ: ಶ್ರೀನಿವಾಸನ್ ಪುತ್ರ
ಮುಂಬೈ:
ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರ ಕುರ್ಚಿ ಅಲುಗಾಡುವ ಪರಿಸ್ಥಿತಿ ಬಂದಿದೆ. ಅವರ ಕುಟುಂಬದ ಸದಸ್ಯರೇ ಅವರನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ, ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರ ಹೆಸರು ಕೇಳಿಬರುತ್ತಲೇ ದಂಗಾಗಿದ್ದ ಶ್ರೀನಿವಾಸನ್, ಅವರಿಗೆ ಈಗ ಅವರ ಪುತ್ರ ಅಶ್ವಿನ್ ಶಾಕ್ ನೀಡಿದ್ದಾರೆ.
ಶುಕ್ರವಾರ ಝೀ ಸುದ್ದಿವಾಹಿನಿಗೆ ಹೇಳಿಕೆ ನೀಡಿರುವ ಅವರು, 'ಮೇಯಪ್ಪನ್ ಅವರಿಗೆ ಚೆನ್ನೈ, ದುಬೈ ಬುಕ್ಕಿಗಳೊಂದಿಗೆ ನಂಟಿತ್ತು' ಎಂದು ಹೇಳಿದ್ದಾರೆ. 'ಐಪಿಎಲ್ ಶುರುವಾಗುವುದಕ್ಕೂ ಮುನ್ನವೇ ಅವರಿಗೆ ಬುಕ್ಕಿಗಳ ಜೊತೆ ನಂಟಿತ್ತು' ಎಂದೂ ಅವರು ಹೇಳಿದ್ದಾರೆ.
'ಮೇಯಪ್ಪನ್ ಅವರು  'ಚೆಟ್ಟಿಯಾರ್‌' ಜಾತಿಗೆ ಸೇರಿದವರಾದ್ದರಿಂದ ಅವರ ಕಣಕಣದಲ್ಲೂ ವ್ಯಾಪಾರಿ ಗುಣಗಳಿವೆ. ನಮ್ಮ ತಂದೆಯವರ ವಾಣಿಜ್ಯ ವ್ಯವಹಾರಗಳಲ್ಲಿ ತಮ್ಮ ಪಾಲನ್ನೂ ಹೊಂದಿರುವ ಅವರು, ತಮ್ಮ ಆಸ್ತಿಯನ್ನು ಈಗ ಗಣನೀಯವಾಗಿ ಹೆಚ್ಚಿಸಿಕೊಳ್ಳುತ್ತಿದ್ದಾರೆ' ಎಂದಿದ್ದಾರೆ.

ರಾಜಿನಾಮೆಗೆ ಎನ್‌ಸಿಪಿ ಆಗ್ರಹ
ನವದೆಹಲಿ:
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆಯಲ್ಲಿ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಹೆಸರು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಶ್ರೀನಿವಾಸನ್ ತಮ್ಮ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಆಗ್ರಹಿಸಿದೆ.
ಶ್ರೀನಿವಾಸನ್ ಅವರಿಗೆ ಕಿಂಚಿತ್ತಾದರೂ ನೈತಿಕ ಮೌಲ್ಯಗಳಿದ್ದರೆ ಹಾಗೂ ಸಾವಂಜನಿಕ ಜವಾಬ್ದಾರಿ ಇದ್ದರೆ ಈ ಕೂಡಲೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಎನ್‌ಸಿಪಿ ವಕ್ತಾರ ಡಿ.ಪಿ ತ್ರಿಪಾಠಿ ಆಗ್ರಹಿಸಿದ್ದಾರೆ. ಅಳಿಯ ಗುರುನಾಥ್ ಅವರಿಗೆ ಪೊಲೀಸರು ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿ ಮಾಡಿದ ನಂತರ ಶ್ರೀನಿವಾಸನ್ ಅವರ ಮೇಲೂ ಅನುಮಾನದ ನೆರಳು ಬೀಳುತ್ತಿದೆ.
ಹಾಗಾಗಿ ತನಿಖೆ ಮುಕ್ತಾಯಗೊಳ್ಳುವವರೆಗೂ ಶ್ರೀನಿವಾಸನ್ ರಾಜಿನಾಮೆ ನೀಡಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement