ಭಜ್ಜಿ, ವಿರಾಟ್ಗೆ ಆಪ್ತನಾಗಿದ್ದೆ: ವಿಂದೂ
ಮುಂಬೈ: ನನಗೆ ಹಲವಾರು ಕ್ರಿಕೆಟಿಗರು ಗೊತ್ತಿದ್ದಾರೆ. ವಿರಾಟ್ ಕೊಹ್ಲಿ, ಹರ್ಭಜನ್ ಸಿಂಗ್ ಹಾಗೂ ಮನ್ಪ್ರೀತ್ ಗೋನಿಗೆ ನಾನು ಆಪ್ತನಾಗಿದ್ದೆ ಎಂದು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬಂಧಿಸಲಾಗಿರುವ ವಿಂದೂ ದಾರಾ ಸಿಂಗ್ ಶುಕ್ರವಾರ ಹೇಳಿಕೊಂಡಿದ್ದಾನೆ.
ಪ್ರಸ್ತುತ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿರುವ ಮನ್ಪ್ರೀತ್ ಗೋನಿ, ಭಾರತ ತಂಡದಲ್ಲಿ ಏಕದಿನ ಪಂದ್ಯದಲ್ಲಿ ಆಡಿದ್ದಾನೆ. ಅಲ್ಲದೆ ಆತ 2008ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದ.
ಹೀಗಾಗಿ ಈ ಮೂವರು ಆಟಗಾರರು ವಿಂದೂ ಜತೆ ಸಂಪರ್ಕ ಹೊಂದಿರುವ ಕುರಿತು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಐಪಿಎಲ್ ಪಂದ್ಯಗಳಲ್ಲಿ ಬೆಟ್ಟಿಂಗ್ನಲ್ಲಿ ಭಾಗಿಯಾಗಿರುವ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳ ಹೆಸರುಗಳನ್ನು ವಿಂದೂ ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ. ವಿಂದೂ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವಾರು ವರ್ಷಗಳ ಹಿಂದೆಯೇ ನಾನು ಬೆಟ್ಟಿಂಗ್ ಸಂಪರ್ಕಕ್ಕೆ ಬಂದಿದ್ದೇನೆ. ಆನಂದ್ ಸಕ್ಸೇನಾ ಎಂಬ ನನ್ನ ಸ್ನೇಹಿತ, ದೊಡ್ಡ ಬುಕ್ಕಿಗಳಾದ ರಮೇಶ್ ವ್ಯಾಸ್ ಮತ್ತು ಶೋಭನ್ ಮೇಹ್ತಾ ಅವರನ್ನು ಪರಿಚಯಿಸಿದರು. ಇತ್ತೀಚೆಗೆ ಶ್ರೀಶಾಂತ್, ಅಜೀತ್ ಚಾಂಡಿಲಾ ಸೇರಿದಂತೆ ಹಲವಾರು ಕ್ರಿಕೆಟಿಗರ ಸಂಪರ್ಕಕ್ಕೆ ಬಂದಿದ್ದಾಗಿ ತಿಳಿಸಿದ್ದಾರೆ.