ಭಾರತೀಯ ವನಿತೆಯರ ಕನಸು ಭಗ್ನ
ರಮಲ್ಲಾ (ವೆಸ್ಟ್ ಬ್ಯಾಂಕ್): ತೀವ್ರ ಹೋರಾಟದ ಹೊರತಾಗಿಯೂ ಭಾರತೀಯ ವನಿತೆಯರ ತಂಡ, ಏಷ್ಯನ್ ಕಪ್ ಅರ್ಹತಾ ಸುತ್ತಿನ ತಮ್ಮ 2ನೇ ಪಂದ್ಯದಲ್ಲಿ ಸೋಲು ಕಂಡರು. ಇಲ್ಲಿನ ಫೈಸಲ್ ಅಲ್ ಹುಸೇನಿ ಕ್ರೀಡಾಂಗಣದಲ್ಲಿ ನಡೆದ 'ಗ್ರೂಪ್ ಡಿ' ವಿಭಾಗದ ಲೀಗ್ ಪಂದ್ಯದಲ್ಲಿ ತೈಪೇ ವಿರುದ್ಧ ಭಾರತ ತಂಡ 2-1 ಅಂತರದಲ್ಲಿ ಶರಣಾಯಿತು. ಇದರೊಂದಿಗೆ, ಬಾರತ ತಂಡದ ಏಷ್ಯನ್ ಕಪ್‌ನಲ್ಲಿ ಆಡುವ ಕನಸು ಭಗ್ನಗೊಂಡಿದೆ.
ಲೀಗ್ ಹಂತದ ಮೊದಲ ಪಂದ್ಯದಲ್ಲೇ ಸೋತಿದ್ದ ಭಾರತ ತಂಡ, ಅರ್ಹತಾ ಸುತ್ತಿಗೆ ಪದಾರ್ಪಣೆ ಮಾಡುವ ಅವಕಾಶವನ್ನು ಜೀವಂತವಾಗಿರಿಸಲು ಎರಡನೇ ಪಂದ್ಯದಲ್ಲಿ ಚೀನಾ ತೈಪೇ ವಿರುದ್ಧ ಜಯಗಳಿಸಲೇಬೇಕಿತ್ತು. ಆದರೆ, ತೈಪೇ ವಿರುದ್ಧ ಮಣಿದ ಭಾರತ ತಂಡ, ಎಎಫ್‌ಸಿ ಏಷ್ಯನ್ ಕಪ್ ಪಂದ್ಯಾವಳಿಯನ್ನು ಪ್ರವೇಶಿಸುವ ಅವಕಾಶದಿಂದ ವಂಚಿತವಾಯಿತು.
ವೀರೋಚಿತ ಸೋಲು: ಪ್ರಬಲ ತಂಡವಾಗಿರುವ ತೈಪೇ ವಿರುದ್ಧ ಭಾರತ ತಂಡ, ಪಂದ್ಯದ ಆರಂಭದಿಂದಲೂ ಉತ್ತಮ ಪೈಪೋಟಿ ನೀಡಿತು. ಇದರಿಂದ ಇತ್ತಂಡಗಳಿಗೂ ಪಂದ್ಯದ ಮೊದಲಾರ್ಧದಲ್ಲಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ಪಂದ್ಯದ ದ್ವಿತೀಯಾರ್ಧದಲ್ಲಿ ಯು ಹ್ಸಿಯು ಚಿನ್ (43ನೇ ನಿಮಿಷ) ಗೋಲು ಗಳಿಸುವ ಮೂಲಕ ತಮ್ಮ ತಂಡಕ್ಕೆ ಮೊದಲ ಗೋಲು ದಾಖಲಿಸಿದರು.
ಆದರೆ, ಭಾರತ ತಂಡದ 53ನೇ ನಿಮಿಷದಲ್ಲಿ ಸಶ್ಮಿತಾ ಮಾಲಿಕ್ ಅವರು ಗೋಲು ಗಳಿಸಿ, ಭಾರತವು ಪಂದ್ಯದಲ್ಲಿ ಸಮಬಲ ಸಾಧಿಸಲು ನೆರವಾದರು. ಆದರೆ, ಪಂದ್ಯದ 81ನೇ ನಿಮಿಷದಲ್ಲಿ ಚೀನಾ ಪರವಾಗಿ ಲೈ ಲಿ ಚಿನ್ ಗೋಲು ಬಾರಿಸಿ, ತಮ್ಮ ತಂಡದ ಗೆಲವಿಗೆ ಕಾರಣರಾದರು.
ಈ ಪಂದ್ಯದಲ್ಲಿ ಜಯಗಳಿಸುವ ಮೂಲಕ, ಇದುವರೆಗೂ ಆಡಿರುವ ಎರಡೂ ಪಂದ್ಯಗಳಲ್ಲಿ ಚೀನಾ ಜಯಗಳಿಸಿ, ಒಟ್ಟು 6 ಅಂಕಗಳನ್ನು ಗಳಿಸಿದೆ. ಆದರೆ, ಭಾರತ ತಂಡ ಮಾತ್ರ ಈವರೆಗೆ ಆಡಿರುವ ಎರಡೂ ಪಂದ್ಯಗಳನ್ನು ಸೋಲುವ ಮೂಲಕ ಯಾವುದೇ ಅಂಕಗಳನ್ನೂ ಗಳಿಸದೇ ಶೂನ್ಯ ಸಂಪಾದನೆಯೊಂದಿಗೆ ಪಟ್ಟಿಯಲ್ಲಿದೆ.