ಮಹಾರಾಷ್ಟ್ರದ ಧ್ರುವ, ಸಿದ್ದಾಂತ್ ಫೈನಲ್‌ಗೆ
ಬೆಂಗಳೂರು: ಆಕ್ರಮಣಕಾರಿ ಆಟ ಪ್ರದರ್ಶಿಸುವ ಮಹಾರಾಷ್ಟ್ರದ ಧ್ರುವ ಸುನೀಶ್ ಮತ್ತು ಸಿದ್ದಾಂತ ಜಗದೀಶ್ ಬಂತಿಯಾ ಅವರು ಏಷ್ಯನ್ ಜೂನಿಯರ್ ರ್ಯಾಂಕಿಂಗ್ ಟೆನಿಸ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ.ಧೃವ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಆದಿಲ್ ಕಲ್ಯಾಣ್‌ಪುರ ಅವರನ್ನು 6-2, 6-4 ನೇರ ಸೆಟ್‌ಗಳಿಂದ ಸೋಲಿಸಿ ಪೈನಲ್ ಪ್ರವೇಶಿಸಿದರು.
ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಸಿದ್ದಾಂತ್ ಅವರು ಗುಜರಾತ್‌ನ ಮೇಘ್ ಪಟೇಲ್ ವಿರುದ್ಧ 6-7 ( 7), 6-3, 6-2 ಪ್ರಯಾಸದ ಜಯ ಸಾಧಿಸಿದರು. ಹೀಗಾಗಿ ಈಗ ಫೈನಲ್‌ನಲ್ಲಿ ಧ್ರುವ ಮತ್ತು ಸಿದ್ದಾಂತ್ ಅವರನ್ನು ಎದುರಿಸಲಿದ್ದಾರೆ. ಇನ್ನು ಬಾಲಕಿಯರ ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ತನ್ವಿ ಭಟ್ ಅವರು 3ನೇ ಶ್ರೇಯಾಂಕ ಪಡೆದಿರುವ ಶಿವಾನಿ ಇಂಗಲ್ ಅವರನ್ನು 7-5, 6-2 ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದರು. ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಆಂಧ್ರಪ್ರದೇಶದ ಸಮಾ ಸಾಥ್ವಿಕಾ ಅವರು ಶಾಕಿ ಹುಮೇರಾ ಅವರನ್ನು 6-2, 6-0 ನೇರ ಸೆಟ್‌ಗಳಿಂದ ಪರಾಭವಗೊಳಿಸಿದರು. ಈಗ ಫೈನಲ್ ಪಂದ್ಯದಲ್ಲಿ ತನ್ವಿ ಭಟ್ ಮತ್ತು ಸಮಾ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ.