ರಾಜಿನಾಮೆಗೆ ಶ್ರೀನಿ ನಕಾರ
ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ತಮ್ಮ ಅಳಿಯ ಗುರುನಾಥ್ ಮೇಯಪ್ಪನ್ ಅವರ ಬಂಧನ ಹಾಗೂ ವಿಚಾರಣೆ ಹಿನ್ನೆಲೆಯಲ್ಲಿ...
ಮುಂಬೈ: ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ತಮ್ಮ ಅಳಿಯ ಗುರುನಾಥ್ ಮೇಯಪ್ಪನ್ ಅವರ ಬಂಧನ ಹಾಗೂ ವಿಚಾರಣೆ ಹಿನ್ನೆಲೆಯಲ್ಲಿ ತಾವು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವುದಿಲ್ಲವೆಂದು ಶ್ರೀನಿವಾಸನ್ ತಿಳಿಸಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಗುರುನಾಥ್ ಅವರ ಹೆಸರು ಹೊರಬಂದಾಗಿನಿಂದಲೂ ಅವರ ಮೇಲೆ ರಾಜಿನಾಮೆಗೆ ಒತ್ತಡ ಹೆಚ್ಚಿತ್ತು.
ಗುರುನಾಥ್ ಅವರನ್ನು ಮುಂಬೈ ಪೊಲೀಸರು ವಿಚಾರಣೆಗೊಳಪಡಿಸಿರುವ ಹಿನ್ನೆಲೆಯಲ್ಲಿ, ಮುಂಬೈಗೆ ಆಗಮಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಿನಾಮೆ ನೀಡುವ ವಿಚಾರವನ್ನು ಸ್ಪಷ್ಟವಾಗಿ ತಳ್ಳಿಹಾಕಿದರಲ್ಲದೇ, ಆರೋಪ ಸಾಬೀತಾದಲ್ಲಿ, ಗುರುನಾಥ್ ಅವರ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಆದರೆ, ಶ್ರೀನಿವಾಸನ್ ಅವರ ಮೇಲೆ ಒತ್ತಡ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಗುರುನಾಥ್ ಬಂಧನದ ನಂತರ, ಅವರ ಪದತ್ಯಾಗಕ್ಕೆ ಕ್ರಿಕೆಟ್ ವಲಯದಿಂದ ಮಾತ್ರವಲ್ಲದೇ ರಾಜಕೀಯ ಕ್ಷೇತ್ರದಿಂದಲೂ ಒತ್ತಡಗಳು ಬರುತ್ತಿವೆ. ಆದರೆ, ಶ್ರೀನಿವಾಸನ್ ಮಾತ್ರ ಇದ್ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ.
ಅಮಾನತಿಗೆ ಸಿದ್ಧತೆ?: ಬಿಸಿಸಿಐ ಸಂಸ್ಥೆಯಲ್ಲಿ ಶ್ರೀನಿವಾಸನ್ ರಾಜಿನಾಮೆಗೆ ಕೆಲ ಸದಸ್ಯರು ಒತ್ತಾಯ ಮಾಡುತ್ತಿದ್ದಾರೆಂದು ಮೂಲಗಳು ಹೇಳಿವೆ. ಗುರುನಾಥ್ ಬಂಧನದ ನಂತರ, ಶ್ರೀನಿವಾಸನ್ ಅವರ ವಿರೋಧಿ ಬಣವೊಂದು ಬಿಸಿಸಿಐ ಸಂಸ್ಥೆಯೊಳಗೇ ರೂಪುಗೊಂಡಿದ್ದು ಅವರ ರಾಜಿನಾಮೆಯನ್ನು ಈ ಬಣ ಎದುರು ನೋಡುತ್ತಿದೆ. ಒಂದೊಮ್ಮೆ ಶ್ರೀನಿವಾಸನ್ ಅವರು ರಾಜಿನಾಮೆ ನೀಡದಿದ್ದರೆ, ಅವರನ್ನು ಅಮಾನತುಗೊಳಿಸಲು ಈ ಬಣ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಗುರುನಾಥ್ ಬಂಧನದ ನಂತರ, ಸಂಸ್ಥೆಯೊಳಗೇ ವರ್ಷಗಳಿಂದ ಶ್ರೀನಿವಾಸನ್ ಅವರಿಗೆ ನಿಷ್ಠರಾಗಿದ್ದ ಕೆಲವರೂ ಈಗ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆಂದು ಆಂತರಿಕ ಮೂಲಗಳು ಹೇಳಿವೆ.
ಜೇಟ್ಲಿ ಅಥವಾ ಮನೋಹರ್?: ವಿರೋಧಿ ಬಣದ ಕಾರ್ಯತಂತ್ರ ಸಫಲವಾಗಿ ಶ್ರೀನಿವಾಸನ್ ಅವರು ರಾಜಿನಾಮೆ ನೀಡಿದರೆ ಅಥವಾ ಅವರು ಅಮಾನತುಗೊಂಡರೆ, ಅಧ್ಯಕ್ಷ ಸ್ಥಾನಕ್ಕೆ ಅರುಣ್ ಜೇಟ್ಲಿ ಬರುವ ಸಾಧ್ಯತೆಗಳನ್ನು ಕೆಲ ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ, ಬಿಸಿಸಿಐನ ಕೆಲ ಸದಸ್ಯರು ಈ ಹಿಂದೆ ಅಧ್ಯಕ್ಷರಾಗಿದ್ದ ಶಶಾಂಕ್ ಮನೋಹರ್ ಅವರನ್ನೇ ಮಧ್ಯಂತರ ಅಧ್ಯಕ್ಷರನ್ನಾಗಿಸಲು ಒಲವು ತೋರಿದ್ದಾರೆ ಎನ್ನಲಾಗಿದೆ. ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದಿರುವ ಶಶಾಂಕ್ ಮನೋಹರ್ ಅವರೇ ಪುನಃ ಅಧ್ಯಕ್ಷರನ್ನಾಗಿಸಿ ಬಿಸಿಸಿಐ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಲು ಯತ್ನಿಸುವ ಉದ್ದೇಶ ಕೆಲ ಸದಸ್ಯರಿಗೆ ಇದೆ ಎಂದು ಮೂಲಗಳು ಹೇಳಿವೆ. ಬಿಸಿಸಿಐನಲ್ಲಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ಶಿವಲಾಲ್ ಯಾದವ್ ಅವರನ್ನು ಅಧ್ಯಕ್ಷಸ್ಥಾನಕ್ಕೆ ತರಬೇಕೆಂದು ಮತ್ತೊಂದು ಬಣ ಪ್ರಯತ್ನಿಸುತ್ತಿದೆ ಎನ್ನಲಾಗುತ್ತಿದೆ.
ಮನೋಹರ್ ಜತೆ ಮಾತುಕತೆ: ಏತನ್ಮಧ್ಯೆ, ಶಶಾಂಕ್ ಮನೋಹರ್ ಬಳಿ ಬಿಸಿಸಿಐನ ಕೆಲ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಮನೋಹರ್ ಅವರು ಅಧ್ಯಕ್ಷ ಸ್ಥಾನಕ್ಕೆ ಮರಳಲು ಒಪ್ಪಿದ್ದಾರೆಂದೂ ಹೇಳಲಾಗಿದೆ.
ಪದಚ್ಯುತಿಗೆ ಚಾಲನೆ: ಶತಾಯ ಗತಾಯ ಶ್ರೀನಿವಾಸನ್ ಅವರನ್ನು ಅಧ್ಯಕ್ಷಗಿರಿಯಿಂದ ಕೆಳಗಿಳಿಸಲು ಪಣತೊಟ್ಟಿರುವ ಬಿಸಿಸಿಐನ ಕೆಲ ಹಿರಿಯ ಅಧಿಕಾರಿಗಳು ಈಗಾಗಲೇ ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿನ ಪದಾಧಿಕಾರಿಗಳನ್ನು ಸಂಪರ್ಕಿಸಿ, ತಮ್ಮ ಆಶಯಕ್ಕೆ ಬೆಂಬಲ ನೀಡುವಂತೆ ಕೋರುತ್ತಿದ್ದಾರೆಂದು ಹೇಳಲಾಗಿದೆ. ಮೂರನೇ ಎರಡು ಭಾಗದಷ್ಟು ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿನ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆಗೆ ಪತ್ರ ಬರೆದು ತುರ್ತು ಸಭೆ ಕರೆಯಲು ಕೋರಿದ್ದಾರೆ.
ರಾಜಿನಾಮೆಗೆ ರಾಜಕೀಯ ಒತ್ತಡ
ನವದೆಹಲಿ: ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಅಳಿಯ ಗುರುನಾಥ ಮೇಯಪ್ಪನ್ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಶ್ರೀನಿವಾಸನ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಹಲವಾರು ರಾಜಕಿಯ ನಾಯಕರು ಒತ್ತಡ ಹೇರುತ್ತಿದ್ದಾರೆ.
ಶ್ರೀನಿವಾಸನ್ ಈ ಆರೋಪದ ಹೊರತಾಗಿಯೂ ತಮ್ಮ ಸ್ಥಾನದಲ್ಲಿ ಮುಂದುವರಿಯುವುದು ಅಸಮರ್ಥನೀಯ ಹಾಗಾಗಿ ಅವರಲ್ಲಿ ಕಿಂಚಿತ್ತಾದರೂ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ರಾಜಿನಾಮೆ ನೀಡಬೇಕು. ಪ್ರಕರಣ ಬೆಳಕಿಗೆ ಬಂದಿದ್ದು, ಬೇಕಾದ ಎಲ್ಲಾ ಸಾಕ್ಷ್ಯಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಅವರ ಸ್ಥಾನ ಅಭದ್ರವಾಗಿದೆ. ಹಾಗಾಗಿ ಅವರು ಹೊರ ನಡೆಯಬೇಕಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಮಲ್ನಾಥ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕ್ರಿಕೆಟ್ಪಟುವಾಗಿ ನಂತರ ರಾಜಕಾರಣಿಯಾದ ಕೀರ್ತಿ ಆಜಾದ್, ಶ್ರೀನಿವಾಸನ್ ರಾಜಿನಾಮೆ ನೀಡುತ್ತಾರೊ ಅಥವಾ ನೀಡುವುದಿಲ್ಲವೊ ನನಗೆ ತಿಳಿದಿಲ್ಲ. ಈ ಪ್ರಕರಣದಲ್ಲಿ ನೀವು ಎಷ್ಟು ರಾಜಿನಾಮೆಯನ್ನು ಪಡೆಯುವಿರಿ? ಈ ವಿಷಯವನ್ನು ನಾನು ಕಳೆದ ವರ್ಷವೇ ಪ್ರಸ್ತಾಪಿಸಿದ್ದೇ. ಆದರೆ ಎಲ್ಲರು ನನ್ನ ನೋಡಿ ನಕ್ಕರು ಎಂದು ತಿಳಿಸಿದರು.