ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

6ಕ್ಕೇರಿದ ಮುಂಬೈ

ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸದೆ ಬಡಿಯುವ ಮೂಲಕ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡ ರೋಹಿತ್ ಪಡೆ.

Srinivasa Murthy VN
Updated On : 27 May 2013, 2:09 am

ಕೋಲ್ಕತಾ: ಮುಂಬೈ ಇಂಡಿಯನ್ಸ್ ಗೆ ಚೊಚ್ಚಲ ಪ್ರಶಸ್ತಿ ಸಂಭ್ರಮ..!
ಸ್ಪಾಟ್ ಫಿಕ್ಸಿಂಗ್ ವಿವಾದದ ಕರಿ ನೆರಳಲ್ಲೇ ನಡೆದ ಫೈನಲ್ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್, ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಅನ್ನು 23 ರನ್ಗಳಿಂದ ಸದೆ ಬಡಿಯುವ ಮೂಲಕ ಇದೇ ಮೊದಲ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿದ ಖುಷಿ ಅನುಭವಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್ ಪೋಲಾರ್ಡ್ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ 148 ರನ್ ಗಳಿಸಿತ್ತು. ಈ ಸವಾಲಿನ ಮೊತ್ತ ಬೆನ್ನಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ನಲ್ಲಿ 125ರನ್ಗಳಿಗೆ 9 ವಿಕೆಟ್ ಕಳೆದುಕೊಳ್ಳುವ ಮೂಲಕ ಸೋತು, ಮೂರನೇ ಬಾರಿಯ ಪ್ರಶಸ್ತಿ ಗೆಲ್ಲುವ ಕನಸನ್ನು ನುಚ್ಚುನೂರು ಮಾಡಿಕೊಂಡಿತು. ನಾಯಕ ಧೋನಿ 45 ಎಸೆತಗಳಲ್ಲಿ ಅಜೇಯ 63 ರನ್ ಗಳಿಸಿದರಾದರೂ ಗೆಲುವಿನ ದಡ ಮುಟ್ಟಿಸಲಾಗಲಿಲ್ಲ.
ಭಾರಿ ಕುಸಿತ ಕಂಡ ಚೆನ್ನೈ: ಮುಂಬೈ ನೀಡಿದ್ದ 149 ಗುರಿ ಬೆನ್ನತ್ತಿದ್ದ ಚೆನ್ನೈಗೆ ಮಾಲಿಂಗ ಮತ್ತು ಜಾನ್ಸನ್ ಮಾರಕವಾಗಿ ಪರಿಣಮಿಸಿದರು. ಮೊದಲ ಓವರ್ನಲ್ಲಿಯೇ ಮಾಲಿಂಗ ಹಸ್ಸಿ ಮತ್ತು ರೈನಾ ವಿಕೆಟ್ ಕಬಳಿಸುವ ಮೂಲಕ ಚೆನ್ನೈ ಬೆನ್ನು ಹುರಿ ಮುರಿದಿದ್ದರು.
ಎರಡನೇ ಓವರ್ ಮಾಡಿದ ಜಾನ್ಸನ್ ಬದ್ರಿನಾಥ್ ಅವರನ್ನು ಪೆವಿಲಿಯನ್ಗೆ ಅಟ್ಟಿದ್ದರು. ಬ್ರಾವೋ ಕೊಂಚ ಪ್ರತಿರೋಧ ಒಡ್ಡಿದರಾದರೂ ಆರ್. ಧವನ್ ಅವರ ಬೌಲಿಂಗ್ನಲ್ಲಿ ಜಾನ್ಸನ್ಗೆ ಕ್ಯಾಚಿತ್ತು ಹೊರ ನಡೆದರು. ವಿಜಯ್(18), ಬ್ರಾವೋ(15), ಮಾರ್ಕೆಲ್(10), ಧೋನಿ ಅಜೇಯ(63) ಮಾತ್ರ ಎರಡಂಕಿ ಮೊತ್ತ ತಲುಪಿದರು. ಉಳಿದವರೆಲ್ಲಾ ಬಂದ ದಾರಿಗೆ ಸುಂಕವಿಲ್ಲದಂತೆ ಪೆವಿಲಿಯನ್ ದಾರಿ ಹಿಡಿದರು.
ಪೋಲಾರ್ಡ್ ಮಿಂಚು: ಉತ್ತಮ ಸ್ಕೋರ್ ಗಳಿಸುವ ಇರಾದೆಯೊಂದಿಗೆ ಬ್ಯಾಟಿಂಗ್ಗೆ ಇಳಿದಿದ್ದ ಮುಂಬೈಗೆ ಆರಂಭದಲ್ಲಿ ಉತ್ತಮ ಆಟ ಬರಲಿಲ್ಲ. 16 ರನ್ಗಳಾಗುವಷ್ಟರಲ್ಲಿ ಸ್ಮಿತ್, ತಾರೆ ಮತ್ತು ರೋಹಿತ್ ಶರ್ಮಾ ಪೆವಿಲಿಯನ್ ಸೇರಿಕೊಂಡಿದ್ದರು. ದಿನೇಶ್ ಕಾರ್ತಿಕ್ ಒಂದಷ್ಟು ಹೊತ್ತು ಚೆನ್ನೈ ಬೌಲರ್ಗಳನ್ನು ಸತಾಯಿಸಿದರಾದರೂ, ಕಡೆಗೆ 20 ರನ್ ಗಳಿಸಿ ಔಟಾದರು. ಆದರೆ ರಾಯುಡು ಮತ್ತು ಪೋಲಾರ್ಡ್ ಜೋಡಿ 5ನೇ ವಿಕೆಟ್ ಜೊತೆಯಾಟದಲ್ಲಿ 48 ರನ್ ಗಳಿಸುವ ಮೂಲಕ ಆರಂಭದ ಆಘಾತದಿಂದ ಚೇತರಿಸಿಕೊಳ್ಳುವಂತೆ ಮಾಡಿದರು. ರಾಯುಡು 36 ಎಸೆತಗಳಲ್ಲಿ 37 ರನ್ ಗಳಿಸಿದರೆ, ಭರ್ಜರಿ ಇನಿಂಗ್ಸ್ ಕಟ್ಟಿದ ಪೋಲಾರ್ಡ್ 32 ಎಸೆತಗಳಲ್ಲಿ 60 ರನ್ ಗಳಿಸಿ ಮುಂಬೈ 9 ವಿಕೆಟ್ಗೆ 148 ರನ್ ಗಳಿಸುವಲ್ಲಿ ನೆರವಾದರು.

ಸಚಿನ್ಗೆ ಲಾಸ್ಟ್ ಐಪಿಎಲ್
ಪ್ರಶಸ್ತಿ ಗೆದ್ದ ಖುಷಿಯಲ್ಲೇ ಇದು ಕಡೇ ಐಪಿಎಲ್ ಎಂದವರು ಸಚಿನ್ ತೆಂಡೂಲ್ಕರ್. ಐಪಿಎಲ್ - 6ನ ಆರಂಭದಲ್ಲಿ ನಾಯಕನಾಗಿದ್ದ ರಿಕಿ ಪಾಂಟಿಂಗ್ ಜೊತೆಗೆ ಪ್ರಶಸ್ತಿ ಸಿಕ್ಕ ಖುಷಿ ಹಂಚಿಕೊಂಡ ಮಾಸ್ಟರ್ ಬ್ಲಾಸ್ಟರ್ ಇದು ನನ್ನ ಕಡೇ ಐಪಿಎಲ್. ಪ್ರಶಸ್ತಿ ಬಂದದ್ದು ತುಂಬಾ ಖುಷಿಯಾಗಿದೆ ಎಂದು ಹೇಳಿದರು. ವಿಶೇಷವೆಂದರೆ ಸಚಿನ್ ಮತ್ತು ರಿಕಿ ಪಾಂಟಿಂಗ್ ಈ ಪಂದ್ಯದಲ್ಲಿ ಆಡಿರಲಿಲ್ಲ.

 ಬಹುಮಾನ ಮೊತ್ತ
ಚಾಂಪಿಯನ್ಸ್     10 ಕೋಟಿ
ರನ್ನರ್ ಅಪ್ 7.5 ಕೋಟಿ
3ನೇ    3.75 ಕೋಟಿ
4ನೇ    3.75 ಕೋಟಿ

ಸ್ಕೋರ್ ಬೋರ್ಡ್
ಮುಂಬೈ: 148/9 (20 ಓವರ್)

ಸ್ಮಿತ್ ಎಲ್ಬಿ ಶರ್ಮಾ 4(4), ತಾರೆ ಬಿ ಮಾರ್ಕೆಲ್ 0(1), ಕಾರ್ತಿಕ್ ಬಿ ಮೋರಿಸ್ 21(26), ರೋಹಿತ್ ಶರ್ಮಾ  ಸಿ ಮತ್ತು ಬಿ ಮಾರ್ಕೆಲ್ 2(5), ರಾಯುಡು ಬಿ ಬ್ರಾವೋ 37(36), ಪೋಲಾರ್ಡ್ ನಾಟೌಟ್ 60(32), ಹರ್ಭಜನ್ ಸಿ ಹಸ್ಸಿ  ಬಿ ಬ್ರಾವೋ 14(8), ಆರ್. ಧವನ್  ರನೌಟ್ 3(3), ಜಾನ್ಸನ್ ಸಿ ಧೋನಿ ಬಿ ಬ್ರಾವೋ 1(2), ಮಾಲಿಂಗ  ಸಿ ಧೋನಿ ಬಿ ಬ್ರಾವೋ 0(2), ಓಜಾ ನಾಟೌಟ್ 1(1), ಇತರೆ 5

ಬೌಲಿಂಗ್: ಮೋಹಿತ್ ಶರ್ಮಾ  2-0 -8 -1, ಮಾರ್ಕೆಲ್ 3-0 -12-2, ಮೋರಿಸ್ 4-0-25-1, ಅಶ್ವಿನ್ 3-0-22-0, ಜಡೇಜಾ 2-0-19-0, ಬ್ರಾವೋ  4-0-42-4

ಚೆನ್ನೈ: 125/9  (20 ಓವರ್)
ಮೈಕ್ ಹಸ್ಸಿ ಬಿ ಮಾಲಿಂಗ 1(2), ಮುರಳಿ, ವಿಜಯ್ ಸಿ ಶರ್ಮಾ ಬಿ ಜಾನ್ಸನ್ 20(18), ಸುರೇಶ್ ರೈನಾ  ಸಿ ಸ್ಮಿತ್ ಬಿ ಮಾಲಿಂಗ  0(1), ಬದ್ರಿನಾಥ್ ಸಿ ಕಾರ್ತಿಕ್ ಬಿ ಜಾನ್ಸನ್ 0(3), ಬ್ರಾವೋ ಸಿ ಜಾನ್ಸನ್ ಬಿ ಧವನ್  15(16), ಜಡೇಜಾ  ಸಿ ಪೋಲಾರ್ಡ್ ಬಿ ಹರ್ಭಜನ್ 0(2), ಧೋನಿ  ನಾಟೌಟ್  63(45), ಮಾರ್ಕೆಲ್ ಬಿ ಓಜಾ 10(10), ಮೋರಿಸ್  ಸಿ ಕಾರ್ತಿಕ್ ಬಿ ಹರ್ಭಜನ್  0(1), ಅಶ್ವಿನ್ ಸಿ(ಸಬ್)ಎ.ಆರ್. ಪಟೇಲ್ ಬಿ ಪೋಲಾರ್ಡ್ 9(18), ಮೋಹಿತ್ ಶರ್ಮಾ   ನಾಟೌಟ್ 0(2), ಇತರೆ  9

ಬೌಲಿಂಗ್:
ಮಾಲಿಂಗ 4-0-22-2, ಜಾನ್ಸನ್ 4-0-19-2, ಓಜಾ 4-0-28-1, ಆರ್. ಧವನ್ 1-0-6-1, ಹರ್ಭಜನ್  3-0-14-2, ಪೋಲಾರ್ಡ್ 4-0-34-1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement