ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕ್ರೀಡಾ ಪ್ರತಿಭೆಗಳಿಗೆ ಸರ್ಕಾರಿ ಉದ್ಯೋಗ: ಜಿತೇಂದ್ರ ಸಿಂಗ್

Srinivasa Murthy VN
Updated On : 26 May 2013, 10:06 am

ನವದೆಹಲಿ: ಯುವ ಕ್ರೀಡಾಪ್ರತಿಭೆಗಳಿಗೆ ಸರ್ಕಾರಿ ಉದ್ಯೋಗ ಖಾತ್ರಿ ಹಾಗೂ ದೇಶದ ಪ್ರತಿ ಜಿಲ್ಲೆಯಲ್ಲೂ ಕ್ರೀಡಾ ಶಾಲೆ ನಿರ್ಮಿಸುವ ಎರಡು ಮಹತ್ತರ ಘೋಷಣೆಗಳನ್ನು ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಭಾನುವಾರ ಮಾಡಿದ್ದಾರೆ. ಭಾನುವಾರ ನಡೆದ ಸರ್ವ ರಾಜ್ಯಗಳ ಕ್ರೀಡಾ ಸಚಿವರ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವರು ಈ ಘೋಷಣೆ ಮಾಡಿದರು.
ಸುಮಾರು 11 ಸಾವಿರ ಕೋಟಿ ರು. ಮೌಲ್ಯದ ಯೋಜನೆ ಇದಾಗಿದ್ದು, ಇದನ್ನು 2012-17ರವರೆಗಿನ 12ನೇ ಪಂಚವಾರ್ಷಿಕ ಯೋಜನೆಯಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. 2020ರ ಒಲಿಂಪಿಕ್ಸ್‌ನಲ್ಲಿ ಭಾರತ ಉತ್ತಮ ಸಾಧನೆ ಮಾಡಬೇಕೆಂಬ ಪ್ರಧಾನಿಯವರ ಆಶಯದ ಮೇರೆಗೆ ಈ ಯೋಜನೆಯನ್ನು ಜಾರಿಗೊಳಿಸುತ್ತಿರುವುದಾಗಿಯೂ ಜಿತೇಂದ್ರ ಸಿಂಗ್ ತಿಳಿಸಿದರು.
ನೂರು ಸರ್ಕಾರಿ ಕೆಲಸ: ಯೋಜನೆಯಡಿ ಗುರುತಿಸಲ್ಪಡುವ ಪ್ರತಿಯೊಬ್ಬ ಕ್ರೀಡಾಪಟುವಿಗೂ ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಲಾಗುವುದು ಎಂದು ಹೇಳಿದ ಜಿತೇಂದ್ರ ಸಿಂಗ್, ಪ್ರತಿಯೊಂದು ಜಿಲ್ಲೆಯಿಂದ 100 ಬಾಲ ಪ್ರತಿಭೆಗಳಿಗೆ ಸರ್ಕಾರಿ ಉದ್ಯೋಗದ ಭರವಸೆ ನೀಡಲಾಗುವುದು ಎಂದರು. ಸರ್ಕಾರಿ ಉದ್ಯೋಗ ಪಡೆಯುವ ವಯಸ್ಸು ತಲುಪಿದ ನಂತರ ಅವರಿಗೆ ಉದ್ಯೋಗ ಸಿಗಲಿದೆ ಎಂದೂ ಅವರು ಸ್ಪಷ್ಟನೆ ನೀಡಿದರು.
ಜಿಲ್ಲಾವಾರು ಕ್ರೀಡಾಶಾಲೆ: ದೇಶದ ಪ್ರತಿ ಜಿಲ್ಲೆಯಲ್ಲಿಯೂ ನಿರ್ಮಿಸಲಾಗುವ ಕ್ರೀಡಾಶಾಲೆಯಲ್ಲಿ ವ್ಯಾಸಂಗಕ್ಕೆ ಉತ್ತಮ ಅವಕಾಶ ಹಾಗೂ ಉತ್ತಮ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಪಂಚಾಯತ್ ಯುವ ಕ್ರೀಡಾ ಹಾಗೂ ಖೇಲ್ ಅಭಿಯಾನ್ ಯೋಜನೆಗಳಡಿಯಲ್ಲಿ ಈ ಹೊಸ ಯೋಜನೆಯು ಕಾರ್ಯನಿರ್ವಹಿಸಲಿದೆ ಎಂದೂ ಜಿತೇಂದ್ರ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement