ಈಜಿನಿಂದ ಮೀನು ದೂರವಾಯಿತೇ?
ಸೊಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು, ಭವಿಷ್ಯದ ಸ್ಪರ್ಧೆಗಳಲ್ಲಿ ಥೋರ್ಪ್ ಅನುಮಾನ.
ಸಿಡ್ನಿ: ಆಸ್ಟ್ರೇಲಿಯಾತ ಖ್ಯಾತ ಈಜುಪಟು ಐಯಾನ್ ಥೋರ್ಪ್ ತೀವ್ರವಾದ ಸೊಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಆತ ಭವಿಷ್ಯದ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅನುಮಾನ ಎಂದು ಆತನ ಮ್ಯಾನೇಜರ್ ಜೇಮ್ಸ್ ಎರ್ಸ್ಕಿನ್ ತಿಳಿಸಿದ್ದಾರೆ.
ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆನಂತರ ಈ ಸೊಂಕು ತಗುಲಿದ್ದು, ತೀವ್ರವಾಗಿದೆ. ಆದರೆ ಜೀವಕ್ಕೆ ಯಾವುದೇ ತೊಂದರೆಗಳಿಲ್ಲ. ಆದರೆ ಭವಿಷ್ಯದ ಸ್ಪರ್ಧೆಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಅವರು ಇನ್ನು ಮುಂದೆ ಸ್ಪರ್ಧಿಸದಿರಬಹುದು ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಎಡಭುಜದ ಸಮಸ್ಯೆಗೆ ಸಿಲುಕಿದ್ದು, ಮೂರು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ಸೊಂಕು ತೀವ್ರವಾಗಿರುವ ಹಿನ್ನಲೆಯಲ್ಲಿ ಇನ್ನು ಮುಂದೆ ಥೋರ್ಪ್ ಈಜುಕೊಳದಿಂದ ದೂರವಾಗುವ ಸಾಧ್ಯತೆಗಳು ಹೆಚ್ಚಾಗಿದೆ.
ಈ ಸೊಂಕಿನಿಂದ ಥೋರ್ಪ್ ತನ್ನ ಎಡಗೈ ಕಳೆದುಕೊಳ್ಳಬಹುದು ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಎರ್ಸ್ಕಿನ್ ಈ ವರದಿಯನ್ನು ತಳ್ಳಿ ಹಾಕಿದ್ದಾರೆ.
ಆಸ್ಟ್ರೇಲಿಯಾದ ಖ್ಯಾತ ಈಜುಗಾರನಾಗಿದ್ದ ಐಯಾನ್ ಥೋರ್ಪ್ 11 ಬಾರಿ ವಿಶ್ವ ಚಾಂಪಿಯನ್ಶಿಪ್ಗಳಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದರು.