ಐಪಿಎಲ್ ವೇಳೆಗೆ ಕೋರೆ ಆ್ಯಂಡರ್ಸನ್ ಫಿಟ್
ವೆಲ್ಲಿಂಗ್ಟನ್: ಕೈ ಬೆರಳಿಗೆ ಗಾಯ ಮಾಡಿಕೊಂಡಿರುವ ನ್ಯೂಜಿಲೆಂಡ್ ತಂಡದ ಸ್ಫೋಟಕ ಆಲ್ರೌಂಡರ್ ಕೋರೆ ಆ್ಯಂಡರ್ಸನ್, ಐಪಿಎಲ್ ವೇಳೆಗೆ ತಾವು ಸಂಪೂರ್ಣವಾಗಿ ಫಿಟ್ ಆಗುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್ನಲ್ಲಿ ವೇಗದ ಶತಕ ದಾಖಲಿಸಿರುವ ಕೋರೆ ಆ್ಯಂಡರ್ಸನ್ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಗಮನ ಸೆಳೆದ ಆಟಗಾರನಾಗಿದ್ದರು. ಅಲ್ಲದೆ ಮುಂಬೈ ಇಂಡಿಯನ್ಸ್, ಇವರನ್ನು 4.5 ಕೋಟಿಗೆ ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ.
ಕೈ ಬೆರಳಿಗೆ ಚಿಕ್ಕ ಗಾಯವಾಗಿದ್ದು, ದೊಡ್ಡ ಸಮಸ್ಯೆಯಾಗಿಲ್ಲ. ಇದು ಬೇಗನೆ ಗುಣಮುಖವಾಗುತ್ತಿದ್ದು, ಸಂತೋಷವಾಗಿದೆ ಎಂದು ಆ್ಯಂಡರ್ಸನ್ ನ್ಯೂಜಿಲೆಂಡ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಆ್ಯಂಡರ್ಸನ್ ಬಾಂಗ್ಲಾದೇಶದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಬಲಗೈನ ಕಿರುಬೆರಳು ಉಳುಕಿತ್ತು. ಹಾಗಾಗಿ ಆ್ಯಂಡರ್ಸನ್ ಐಪಿಎಲ್ ಪಂದ್ಯಾವಳಿಗೆ ಅಲಭ್ಯರಾಗುವರೇ ಎಂಬ ಆತಂಕ ಮೂಡಿತ್ತು. ಐಪಿಎಲ್ ಪಂದ್ಯಾವಳಿಗೆ ಕೇವಲ 8 ದಿನಗಳು ಮಾತ್ರ ಬಾಕಿ ಇದ್ದು, ಆ್ಯಂಡರ್ಸನ್ ಚೇತರಿಕೆ ಮುಂಬೈ ತಂಡಕ್ಕೆ ನೆಮ್ಮದಿ ತಂದಿದೆ.