ಗೆದ್ದ ಗುಪ್ತಾ, ಬಾಬು ಡ್ರಾ
ದುಬೈ: ಉನ್ನತ ರ್ಯಾಂಕಿಂಗ್ ಹೊಂದಿರುವ ಭಾರತದ ಅಭಿಜೀತ್ ಗುಪ್ತಾ ಜಯ ಸಾಧಿಸುವ ಮೂಲಕ ದುಬೈ ಅಂತಾರಾಷ್ಟ್ರೀಯ ಓಪನ್ ಚೆಸ್ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದ್ದಾರೆ. ಗುಪ್ತಾ ಅವರು ಸೂಡಾನ್‌ನ ಓಸ್ಮಾನ್ ಅಬ್ಡೆಲ್ಗಾಡಿರ್ ಅವರನ್ನು ಪರಾಭವಗೊಳಿಸಿದರು.
ಇನ್ನು ಭಾರತದ ಗ್ರ್ಯಾಡ್‌ಮಾಸ್ಟರ್ ಎಂ.ಆರ್ ಲಲಿತ್ ಬಾಬು ಅವರು ಮೊದಲ ಸುತ್ತಿನಲ್ಲಿ ಮೋಲ್ಡೋವಾದ ಎಲೇನಾ ಪಾರ್ಟಿಕ್ ವಿರುದ್ಧ ಡ್ರಾ ಸಾಧಿಸಿದ್ದಾರೆ.
ಬಿಳಿ ಕಾಯಿಗಳೊಂದಿಗೆ ಆಡಿದ ಗುಪ್ತಾ ಅವರು ಪಂದ್ಯದ ಆರಂಭದಲ್ಲೇ ಮುನ್ನಡೆ ಪಡೆದುಕೊಂಡರು. ನಂತರ ಸರಳ ಕಾರ್ಯತಂತ್ರ ಅಳವಡಿಸಿಕೊಳ್ಳುವ ಮೂಲಕ ಎದುರಾಳಿ ಮೇಲೆ ಸವಾರಿ ಮಾಡಿದರು. ಹೀಗಾಗಿ ಅವರಿಗೆ ಜಯ ಸಾಧಿಸಲು ಸುಲಭವಾಗಿ ಪರಿಣಮಿಸಿತು.
ಲಲಿತ್ ಬಾಬು ಅವರು ಆರಂಭದಿಂದಲೇ ಪ್ಯಾರ್ಟಕ್ ವಿರುದ್ಧ ಕಠಿಣ ಸವಾಲು ಎದುರಿಸಿದರು. ನಂತರ ಬಾಬು ಸಹ ತೀವ್ರ ಪೈಪೋಟಿ ನಡೆಸುವ ಮೂಲಕ ಉಭಯ ಆಟಗಾರರೂ ಸಮಬಲದ ಹೋರಾಟ ನಡೆಸಿದರು.
ಒಂದು ಹಂತದಲ್ಲಿ ಬಾಬು ಮನ್ನಡೆ ಕಂಡುಕೊಳ್ಳುವ ಅವಕಾಶ ಹೊಂದಿದ್ದರು. ಆದರೆ, ಅಗ ಸಹ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದ ಪಾರ್ಟಿಕ್ ಅವರು ರಕ್ಷಣಾತ್ಮಕ ಆಟ ಪ್ರದರ್ಶಿಸಿದರು. ನಂತರ ಇಬ್ಬರೂ ಆಟಗಾರರಿಗೆ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವುದು ಖಚಿತಪಟ್ಟಿತು. ಹೀಗಾಗಿ ತಲಾ ಅರ್ಧ ಅಂಕಕ್ಕೆ ಇಬ್ಬರೂ ತೃಪ್ತಿಪಟ್ಟರು.
ಭಾರತದ ಇತರ ಆಟಗಾರರ ಪೈಕಿ, ಶಿವ ಮಹಾದೇವನ್ ಅವರು ರಷ್ಯಾದ ಗ್ರ್ಯಾಂಡ್‌ಮಾಸ್ಟರ್ ಸೆರ್ಜಿ ವೋಲ್ಕೋವಾ ಅವರ ವಿರುದ್ಧ ಡ್ರಾ ಸಾಧಿಸಿದರು. ಮಹಾದೇವನ್ ಅವರಿಗೆ ಒಂದು ಹಂತದಲ್ಲಿ ಜಯದ ಅವಕಾಶ ದೊರಕಿತ್ತು. ಅದರೆ, ಸ್ವಲ್ಪದರಲ್ಲೇ ಅವರು ಆ ಅವಕಾಶವನ್ನು ಕೈಚೆಲ್ಲಿದರು. ದೆಬಾಶಿಶ್ ದಾಸ್ ಅವರು ಭಾರತದ ಇನ್ನೊಬ್ಬ ಆಟಗಾರ ಹರ್ಷಲ್ ಶಾಹಿ ವಿರುದ್ಧ ಜಯ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು.