ಮುಂಬೈ ಕ್ರಿಕೆಟ್‌ಗೆ ಮತ್ತೆ ಶ್ರಮಿಸುವೆ
ಮುಂಬೈ: ಮುಂಬೈ ಕ್ರಿಕೆಟ್‌ಗೆ ನಾನು ಮತ್ತೆ ಕೊಡುಗೆ ನೀಡಬಯಸುತ್ತೇನೆ ಎಂದು ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ದೇಶೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ನೋಡಲು ಬಿಡುವಿಲ್ಲದ ಕಾರಣ ಮುಂಬೈ ಕ್ರಿಕೆಟ್ ಆಯ್ಕೆ ಸಮಿತಿಯಿಂದ ಹಿಂದೆ ಸರಿದಿದ್ದ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಹೀಗಾಗಿಯೇ, ಮುಂಬೈ ಕ್ರಿಕೆಟ್ ಸಂಸ್ಥೆಯ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಪ್ರಸ್ತಾಪವನ್ನು ಸಂದೀಪ್ ಪಾಟೀಲ್ ಒಪ್ಪಿಕೊಂಡಿದ್ದಾರಂತೆ.
'ದೀರ್ಘ ಕಾಲದಿಂದ ನಾನು ಮುಂಬೈ ಕ್ರಿಕೆಟ್ ಸಂಸ್ಥೆಯೊಂದಿಗೆ ಇದ್ದೇನೆ. ಆದರೆ, ಕಳೆದ ವರ್ಷ ಟೀಂ ಇಂಡಿಯಾ ಆಯ್ಕೆ ಸಮಿತಿ ಸೇರಿದ್ದರಿಂದ ಬಿಡುವಿಲ್ಲದ ಕಾರಣ ನಾನು ಹಿಂದೆ ಸರಿದಿದ್ದೆ. ಆದರೆ, ಈ ವರ್ಷ ನಾನು ಕೆಲ ಪಂದ್ಯಗಳನ್ನು ನೋಡುವ ವಿಶ್ವಾಸ ಹೊಂದಿದ್ದೇನೆ. ಹೀಗಾಗಿ ಮುಂಬೈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದೇನೆ' ಎಂದಿದ್ದಾರೆ ಪಾಟೀಲ್.
ಸಂದೀಪ್ ಅವರು ಮುಂಬೈನ ಹಿರಿಯರ ಮತ್ತು 25 ವರ್ಷದೊಳಗಿನ ತಂಡದ ನಾಲ್ವರು ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಮಿಲಿದ್ ರೆಜೆ, ಸಂಜಯ್ ಶೆಟ್ಟಿ ಮತ್ತು ನಿಶೀತ್ ಶೆಟ್ಟಿ ಅವರು ಆಯ್ಕೆ ಸಮಿತಿಯಲ್ಲಿದ್ದಾರೆ. 'ನಾನು ಇಷ್ಟು ಬೆಳೆದಿರುವುದಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆ ಕಾರಣ. ಹೀಗಾಗಿ ನಾನು ಮುಂಬೈ ಕ್ರಿಕೆಟ್ ಸಂಸ್ಥೆಯನ್ನು ಮತ್ತೆ ಹಳಿಗೆ ತರಲು ಬಯಸುತ್ತೇನೆ. ಇದನ್ನು ಒಂದು ಸವಾಲಾಗಿ ಸ್ವೀಕರಿಸುತ್ತೇನೆ'ಎಂದಿದ್ದಾರೆ. ಕಳೆದ ರಣಜಿ ಋತುವಿನಲ್ಲಿ ಮುಂಬೈ ತಂಡ ಉತ್ತಮ ಸಾಧನೆ ಮಾಡುವಲ್ಲಿ ವೈಫಲ್ಯ ಕಂಡಿತ್ತು. ತನ್ನ ಸಾಂಪ್ರದಾಯಿಕ ಎದುರಾಳಿ ಮಹಾರಾಷ್ಟ್ರ ತಂಡದ ವಿರುದ್ಧ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ಅದು ಪಂದ್ಯಾವಳಿಯಿಂದ ಹೊರಬಿದ್ದಿತ್ತು. ಅಲ್ಲದೆ, ವಿಜಯ್ ಹಜಾರೆ ಏಕದಿನ ಸರಣಿ ಮತ್ತು ಟಿ20 ಪಂದ್ಯಾವಳಿಗಳಲ್ಲೂ ಮುಂಬೈ ತಂಡ ಹೇಳಿಕೊಳ್ಳುವಂತಹ ಸಾಧನೆ ಮಾಡಿರಲಿಲ್ಲ.