ಸ್ವಪ್ನಿಲ್ ಅರ್ಧಶತಕ, ಗೋವಾಗೆ ಜಯ
ರಾಜ್‌ಕೋಟ್: ಆರಂಭಿಕ ಬ್ಯಾಟ್ಸ್‌ಮನ್ ನಾಯಕ ಸ್ವಪ್ನಿಲ್ ಅಸ್ನೋಡ್‌ಕರ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಗೋವಾ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಹರಿಯಾಣ ತಂಡದ ವಿರುದ್ಧ ನಿಚ್ಚಳ ಗೆಲವು ದಾಖಲಿಸಿದೆ.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗೋವಾ ಎದುರಾಳಿಯನ್ನು ಮೊದಲು ಬ್ಯಾಟಿಂಗ್‌ಗೆ ಆಮಂತ್ರಿಸಿತು. ಆದರೆ, ಈ ಅವಕಾಶವನ್ನು ಬಳಸಿಕೊಳ್ಳದ ಹರಿಯಾಣ 9 ವಿಕೆಟ್ ನಷ್ಟಕ್ಕೆ 116 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು.
ಮಧ್ಯಮ ಕ್ರಮಾಂಕದ ಆಟಗಾರ ಜೋಗಿಂದರ್ ಶರ್ಮಾ 29 ಎಸೆತಗಳಲ್ಲಿ 5 ಬೌಂಡರಿಗಳಿದ್ದ 29 ರನ್‌ಗಳಿಸಿದ್ದೇ ಉತ್ತಮ ಬ್ಯಾಟಿಂಗ್ ಸಾಧನೆಯಾಯಿತು.
ಉಳಿದಂತೆ ರಾಹುಲ್ ದಲಾಲ್ 25 ರನ್‌ಗಳಿಸಿದರು. ಆದರೆ ಇತರೆ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲುವಲ್ಲಿ ವಿಫಲರಾದರು.
ಗೋವಾ ತಂಡದ ಪರ ಲಕ್ಷಯ್ ಗರ್ಗ್ 3 ವಿಕೆಟ್ ಪಡೆದು ಗಮನ ಸೆಳೆದರು.
ಉತ್ತರವಾಗಿ ಗೋವಾ ತನ್ನ ಸರದಿಯಲ್ಲಿ ಇನ್ನೂ ಎರಡು ಓವರುಗಳು ಉಳಿದಿರುವಂತೆಯೇ ಕೇವಲ 2 ವಿಕೆಟ್ ಒಪ್ಪಿಸಿ 117 ರನ್‌ಗಳಿಸಿ ಗೆಲವಿನ ಕೇಕೆ ಹಾಕಿತು. ಗುರಿ ಸೇರಲು ಗೋವಾ ಹೆಚ್ಚು ಶ್ರಮಪಡಲಿಲ್ಲ.
ಆರಂಭಿಕ ಸ್ವಪ್ನಿಲ್ ಅಸ್ನೋಡ್‌ಕರ್ ಕೇವಲ 59 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ ಅಜೇಯ 70 ರನ್‌ಗಳಿಸಿ ಗೋವಾ ತಂಡಕ್ಕೆ ನಿರೀಕ್ಷಿತ ಗೆಲವು ತಂದುಕೊಟ್ಟರು. ಎದುರಾಳಿ ಬೌಲರ್‌ಗಳು ಸಮರ್ಥವಾಗಿ ಎದುರಿಸಿ ರನ್ ಗಳಿಸಿದ ಅಸ್ನೋಡ್‌ಕರ್ ಉತ್ತಮ ಹೊಡೆಗಳನ್ನು ಬಾರಿಸಿದರು.
ಗುಜರಾತ್‌ಗೆ ಗೆಲವು
ಇಲ್ಲಿಯೇ ನಡೆದ ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಗುಜರಾತ್ ತಂಡ 6 ವಿಕೆಟ್‌ಗಳಿಂದ ಜಾರ್ಖಂಡ್ ಪಡೆಯನ್ನು ಮಣಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ 20 ಓವರುಗಳಲ್ಲಿ 8 ವಿಕೆಟ್‌ಗೆ 108 ರನ್‌ಗಳಿಸಿತು.
ಉತ್ತರವಾಗಿ ಗುಜರಾತ್ 18.1 ಓವರುಗಳಲ್ಲಿ 4 ವಿಕೆಟ್‌ಗೆ 110 ಬಾರಿಸಿ ಗೆಲವಿನ ನಗೆ ಬೀರಿತು.
ಸಂಕ್ಷಿಪ್ತ ಸ್ಕೋರ್:
ಹರಿಯಾಣ 20 ಓವರುಗಳಲ್ಲಿ 9 ವಿಕೆಟ್‌ಗೆ 116 (ಜೋಗಿಂದರ್ ಶರ್ಮಾ 29, ರಾಹುಲ್ ದಲಾಲ್ 25, ಲಕ್ಷಯ್ ಗರ್ಗ್ 31ಕ್ಕೆ3, ಗೌರೇಶ್ ಗಾವಸ್ 28ಕ್ಕೆ2). ಗೋವಾ 18 ಓವರುಗಳಲ್ಲಿ 2 ವಿಕೆಟ್‌ಗೆ 117 (ಸ್ವಪ್ನಿಲ್ ಅಸ್ನೋಡಕರ್ ಅಜೇಯ 70, ಸೂರಜ್ ಡೋಂಗ್ರೆ 29).
ಜಾರ್ಖಂಡ್ 20 ಓವರುಗಳಲ್ಲಿ 8 ವಿಕೆಟ್‌ಗೆ 108 (ಕುಮಾರ್ ದೇವಬ್ರತ್ 25, ಸರ್ಫರಾಜ್ ಅಶ್ರಫ್ 16, ಕೆ. ಠಾಕೂರ್ 19ಕ್ಕೆ3, ಗಜ 18ಕ್ಕೆ2). ಗುಜರಾತ್ 18.1 ಓವರುಗಳಲ್ಲಿ 4 ವಿಕೆಟ್‌ಗೆ 110 (ಸ್ಮಿತ್ ಪಟೇಲ್ ಅಜೇಯ 46, ರಾಜ್‌ದೀಪ್ ದರ್ಬಾರ್ 25, ಸಮರ್ ಖಾದ್ರಿ 16ಕ್ಕೆ3).