ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮೊದಲ ಸುತ್ತಿನಲ್ಲೇ ಸೈನಾಗೆ ದೊಡ್ಡ ಶಾಕ್

ಸಿಂಗಾಪುರ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲೇ ಸೈನಾ..

Srinivasa Murthy VN
Updated On : 10 Apr 2014, 2:39 am

ಸಿಂಗಾಪುರ: ಭಾರತದ ಆಗ್ರಮಾನ್ಯ ಶಟ್ಲರ್ ಸೈನಾ ನೆಹವಾಲ್ ವೈಫಲ್ಯ ಮುಂದುವರಿದಿದ್ದು, ಸಿಂಗಾಪುರ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ಭಾರಿ ಆಘಾತಕ್ಕೆ ಒಳಗಾಗಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನಿನ ಎರಿಕೊ ಹಿರೋಸೆ ಎದುರು 16-21, 21-15, 21-11 ಅಂಕಗಳ ಅಂತರದಲ್ಲಿ ವಿಶ್ವದ 8ನೇ ಶ್ರೇಯಾಂಕಿತೆ ಸೈನಾ ನೆಹವಾಲ್ ತಲೆಬಾಗಿಸಿದರು.
ಸಿಂಗಾಪುರ ಒಳಾಂಗಣ ಕೋರ್ಟ್‌ನಲ್ಲಿ ಸುಮಾರು ಒಂದು ಗಂಟೆ 2 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ 15ನೇ ಶ್ರೇಯಾಂಕಿತ ಎರಿಕೊ, ಒಟ್ಟಾರೆ ಏಳನೇ ಬಾರಿಯ ಮುಖಾಮುಖಿಯಲ್ಲಿ ಸೈನಾ ವಿರುದ್ಧ ನಾಲ್ಕನೇ ಬಾರಿಗೆ ಗೆಲವು ದಾಖಲಿಸಿ ತಮ್ಮ ಪ್ರಭುತ್ವ ಮುಂದುವರಿಸಿದರು.
ಮತ್ತೊಬ್ಬ ನಂಬಿಕಸ್ತ ಆಟಗಾರ್ತಿ ಪಿ.ವಿ. ಸಿಂಧು ಶುಭಾರಂಭ ಮಾಡಿದ್ದಾರೆ. ಇಂದೇ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು 21-9, 19-21, 22-20ರಿಂದ ಇಂಡೋನೇಷ್ಯಾದ ಮಿಲಿಸೆಂಟ್ ವಿರಾಂಟೊ ವಿರುದ್ಧ ಜಯಗಳಿಸಿ ಎರಡನೇ ಸುತ್ತು ಪ್ರವೇಶಿಸಿದರು.
ಉಳಿದಂತೆ, ಇತರೆ ಭರವಸೆಯ ಶಟ್ಲರ್‌ಗಳಾದ ಬಿ. ಸಾಯಿ ಪ್ರಣೀತ್, ಎಚ್.ಎಸ್. ಪ್ರಣಯ್ ಮತ್ತು ಪಿ.ಸಿ. ತುಳಸಿ ಅವರು ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ತಲುಪಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ 45ನೇ ಶ್ರೇಯಾಂಕಿತ ಆಟಗಾರ ಪ್ರಣೀತ್, ತಮ್ಮ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಮಲೇಷಿಯಾದ ಮೊಹಮ್ಮದ್ ಆರಿಫ್ ಅಬ್ದುಲ್ ಲತೀಫ್ ಅವರನ್ನು 21-13, 21-15 ನೇರ ಅಂಕಗಳಿಂದ ಮಣಿಸಿದರು.
ಎಚ್.ಎಸ್. ಪ್ರಣಯ್ ತಮ್ಮ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ 21-17, 14-21, 21-11ರಿಂದ ಥಾಯ್ಲೆಂಡ್‌ನ ಥಾಮಸಿನ್ ಸಿಟ್ಟಿಕೋಮ್ ಅವರನ್ನು ಪರಾಭವಗೊಳಿಸಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ಸಿ. ತುಳಸಿ ತಮ್ಮ ಮೊದಲ ಸುತ್ತಿನ ಸೆಣಸಿನಲ್ಲಿ ನ್ಯೂಜಿಲೆಂಡ್‌ನ ಅನ್ನಾ ರಾಂಕಿನ್ ಅವರನ್ನು 21-13, 21-16 ಅಂಕಗಳ ಅಂತರದಿಂದ ಮಣಿಸಿದರು.
ಭಾರತದ ಮತ್ತೊಬ್ಬ ಪ್ರತಿಭೆ ತಾನ್ವಿ ಲಾಡ್‌ರ ಸವಾಲು ಮಾತ್ರ ಮೊದಲ ಸುತ್ತಿನಲ್ಲಿಯೇ ಅಂತ್ಯಗೊಂಡಿದೆ. ಅಗ್ರಶ್ರೇಯಾಂಕಿತ ಆಟಗಾರ್ತಿ, ಒಲಿಂಪಿಕ್ ಚಾಂಪಿಯನ್ ಚೀನಾದ ಲೀ ಜೆರುಯಿ 21-6, 21-11 ಅಂಕಗಳಿಂದ ತಾನ್ವಿಯನ್ನು ಮಣಿಸಿ ಮುನ್ನಡೆ ಸಾಧಿಸಿದರು. ಇನ್ನು ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಜೋಡಿಗೆ ಜಯ ಲಭಿಸಿದೆ. ಭಾರತದ ಸವಾಲು ಮುನ್ನಡೆಸಿದ್ದ ಆಲ್ವಿನ್ ಫ್ರಾನ್ಸಿಸ್ ಮತ್ತು ಅರುಣ್ ವಿಷ್ಣು ತಮ್ಮ ಮೊದಲ ಸುತ್ತಿನ ಡಬಲ್ಸ್ ಮುಖಾಬಲದಲ್ಲಿ ಚೈನೀಸ್ ತೈಪೇನ ಜೂಯಿ ವೀ ಲಿಯಂಗ್ ಮತ್ತು ಕೌನ್ ಹಾವೊ ಲಿಯೊ ಜೋಡಿಯನ್ನು 21-15, 16-21, 22-20ರಿಂದ ಪರಾಭವಗೊಳಿಸಿ ಮುನ್ನಡೆದರು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಜ್ವಾಲಾ ಗುಟ್ಟಾ ಮತ್ತು ಜಿಷ್ಣು ಸಾನ್ಯಾಲ್ ಅರ್ಹತಾ ಹಂತದಲ್ಲಿಯೇ ಹಾಂಕಾಂಗ್‌ನ ಟಾಂಗ್ ಚನ್ ಮನ್ ಮತ್ತು ಝಾ ಕಾ ಚಾನ್ ಎದುರು 14-21, 18-21ರಿಂದ ಸೋಲನುಭವಿಸಿ ಹೊರನಡೆದರು.
ಈ ಮಧ್ಯೆ ಮುಂಬಯಿಯ ಆನಂದ್ ಪವಾರ್, ಮೊದಲ ಸುತ್ತಿನಲ್ಲಿಯೇ ಇಂಡೋನೇಶಿಯಾದ ಡಿಯೊನೈಸಿಯಸ್ ಹಯೊವ್ ರುಂಬಕಾ ವಿರುದ್ಧ 10-21, 15-21ರಿಂದ ತಲೆಬಾಗಿಸಿದರು. ಮತ್ತೊಂದು ಮಿಶ್ರಡಬಲ್ಸ್‌ನಲ್ಲಿ ಭಾರತದ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ತರುಣ್ ಕೋನಾ 15-21, 10-21ರಿಂದ ಸಿಂಗಾಪುರದ ಡ್ಯಾನಿ ಬಾವಾ ಕೃಷ್ಣಾಂಟಾ ಮತ್ತು ಯು ಯಾನ್ ವೆನೆಸ್ಸಾ ನಿಯೊ ಎದುರು ಸೋಲನುಭವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement