ರಾಜಸ್ಥಾನಕ್ಕೆ ಮಣಿದ ಬಂಗಾಳ ದೆಹಲಿ ವಿರುದ್ಧ ಗೆದ್ದ ಬರೋಡಾ
ಮುಂಬೈ: ಹೆಚ್ಚು ಪರಿಣಾಮ ಬೀರಿದ ಗಜೇಂದ್ರ ಸಿಂಗ್ ಮತ್ತು ರಿತುರಾಜ್ ಸಿಂಗ್ರ ಉತ್ತಮ ದಾಳಿಯ ನೆರವಿನಿಂದ ರಾಜಸ್ಥಾನ ತಂಡ 14 ರನ್ಗಳಿಂದ ಬಂಗಾಳ ತಂಡವನ್ನು ಸೋಲಿಸಿ, ಸೈಯದ್ ಮುಷ್ತಾಕ್ ಅಲಿ
ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ 4 ಅಂಕಗಳನ್ನು ಕಲೆಹಾಕಿದೆ. ಬಾಂದ್ಲಾ ಕುರ್ಲಾ ಸಂಕೀರ್ಣದಲ್ಲಿ ಬುಧವಾರ ನಡೆದ 'ಬಿ' ಗುಂಪಿನ ಪಂದ್ಯದಲ್ಲಿ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ಗಳಿಸಿತು. ಆರಂಭಿಕ ಅಂಕಿತ ಲಂಬಾ 34 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 37 ರನ್ಗಳಿಸಿದ್ದು ತಂಡದ ಪರ ಉತ್ತಮ ಸಾಧನೆಯಾಯಿತು.
ಉಳಿದಂತೆ, ರಾಜೇಶ್ ಬಿಶ್ನೋಯಿ 36 ಮತ್ತು ದಿವ್ಯ ಪ್ರತಾಪ್ ಸಿಂಗ್ 30 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಬಂಗಾಳ ಪರ ಚುರುಕಿನ ದಾಳಿ ಸಂಘಟಿಸಿದ ಸೌರಶಿಶ್ ಲಹಿರಿ 3 ಹಾಗೂ ಸೌರವ್ ಮೊಂಡಲ್, ಸಂಜೀಬ್ ಸಾನ್ಯಾಲ್ ಮತ್ತು ಸಂದೀಪನ್ ದಾಸ್ ತಲಾ 2 ವಿಕೆಟ್ ಉರುಳಿಸಿದರು. ನಂತರ 138 ರನ್ಗಳ ಸಾಧಾರಣ ಗುರಿ ಬೆಂಬತ್ತಿದ ಬಂಗಾಳ ತಂಡಕ್ಕೆ 7 ವಿಕೆಟ್ ನಷ್ಟಕ್ಕೆ 123 ರನ್ಗಳಿಸಲಷ್ಟೇ ಸಾಧ್ಯವಾಯಿತು. ಆರಂಭಿಕ ವಿವೇಕ್ ಸಿಂಗ್ (48ರನ್, 40 ಎಸೆತ, 3 ಬೌಂಡರಿ, 3 ಸಿಕ್ಸರ್) ಹೋರಾಟ ನಡೆಸಿದರು.
ದೆಹಲಿಗೆ ಆಘಾತ ನೀಡಿದ ಬರೋಡಾ: ದಿನದ ಮತ್ತೊಂದು ಪಂದ್ಯದಲ್ಲಿ ಬರೋಡಾ 16 ರನ್ಗಳಿಂದ ದೆಹಲಿ ವಿರುದ್ದ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ಬರೋಡಾ 6 ವಿಕೆಟ್ಗೆ 131 ರನ್ ಗಳಿಸಿತು. ಉತ್ತರವಾಗಿ ದೆಹಲಿ ತಂಡಕ್ಕೆ 9 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಸಂಕ್ಷಿಪ್ತ ಸ್ಕೋರ್
ರಾಜಸ್ಥಾನ 20 ಓವರುಗಳಲ್ಲಿ 9 ವಿಕೆಟ್ಗೆ 137 (ಅಂಕಿತ್ ಲಂಬಾ 37, ರಾಜೇಶ್ ಬಿಶ್ನೋಯಿ 36, ದಿವ್ಯ ಪ್ರತಾಪ್ ಸಿಂಗ್ 30, ಸೌರಶಿಶ್ ಲಹಿರಿ 28ಕ್ಕೆ3, ಸೌರವ್ ಮೊಂಡಲ್ 23ಕ್ಕೆ2, ಸಂದೀಪನ್ ದಾಸ್ 22ಕ್ಕೆ2, ಸಂಜೀಬ್ ಸಾನ್ಯಾಲ್ 35ಕ್ಕೆ2). ಬಂಗಾಳ 20 ಓವರುಗಳಲ್ಲಿ 7 ವಿಕೆಟ್ಗೆ 123 (ವಿವೇಕ್ ಸಿಂಗ್ 48, ಗಜೇಂದ್ರ ಸಿಂಗ್ ಪರಿಹಾರ್ 14ಕ್ಕೆ3, ರಿತುರಾಜ್ ಸಿಂಗ್ 11ಕ್ಕೆ2).
ಬರೋಡಾ 20 ಓವರುಗಳಲ್ಲಿ 6 ವಿಕೆಟ್ಗೆ 131
(ಆದಿತ್ಯ ವಾಗ್ಮೋಡೆ 30, ಕೆ. ಶರ್ಮಾ 11ಕ್ಕೆ1)
ದೆಹಲಿ 20 ಓವರುಗಳಲ್ಲಿ 9 ವಿಕೆಟ್ಗೆ 115
(ಜಗ್ರಿತ್ ಆನಂದ್ 54, ಯೋಗೇಶ್ ನಗರ್ 31, ಲುಕ್ಮನ್ ಮೆರಿವಾಲ 23ಕ್ಕೆ5, ಮುನಾಫ್ ಪಟೇಲ್ 10ಕ್ಕೆ2, ಕೆ. ಪಾಂಡ್ಯಾ 17ಕ್ಕೆ2).