ಫೀಫಾ ರ್ಯಾಂಕಿಂಗ್: ಏಳು ಸ್ಥಾನ ಮೇಲೇರಿದ ಭಾರತ
ನವದೆಹಲಿ: ಭಾರತ ಫುಟ್ಬಾಲ್ ತಂಡ ಫೀಫಾ ರ್ಯಾಂಕಿಂಗ್ ಪಟ್ಟಿಯಲ್ಲಿ 7 ಸ್ಥಾನ ಮೇಲಕ್ಕೇರಿದೆ. ಕಳೆದ ಆಗಷ್ಟ್ನಿಂದ ರ್ಯಾಂಕಿಂಗ್ನಲ್ಲಿ ಕೊಂಚ ಚೇತರಿಸಿಕೊಂಡಿದ್ದು ಗುರುವಾರ ಬಿಡುಗಡೆ ಮಾಡಲಾಗಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ 145ನೇ ಸ್ಥಾನಕ್ಕೇರಿದೆ.
ಕಳೆದ ತಿಂಗಳು ಒಟ್ಟು 6 ಅಂಕಗಳನ್ನು ಗಳಿಸಿಕೊಡಿರುವ ಭಾರತ ತಂಡ 144 ಅಂಕಗಳೊಂದಿಗೆ 152ನೇ ಸ್ಥಾನದಿಂದ 145ಕ್ಕೇರಿದೆ. ಈ ಸಮಯದಲ್ಲಿ ಭಾರತ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡದಿದ್ದರೂ ರ್ಯಾಂಕಿಂಗ್ನಲ್ಲಿ ಚೇತರಿಸಿಕೊಳ್ಳುವ ಅವಕಾಶ ಅದಕ್ಕೆ ಸಿಕ್ಕಿದೆ.
ಇದರೊಂದಿಗೆ ವೀಯಟ್ನಾಮ್ ಬಿಟ್ಟರೆ, ಏಷ್ಯಾದಲ್ಲೇ ಅತಿ ಹೆಚ್ಚು ಅಂಕ ಪಡೆದ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ವೀಯಟ್ನಾಮ್ ಒಟ್ಟು 9 ಅಂಕಗಳನ್ನು ಪಡೆದಿದ್ದು 116ನೇ ಸ್ಥಾನದಲ್ಲಿದೆ. ಕಳೆದ ಆಗಸ್ಟ್ನಲ್ಲೇ ಭಾರತ ತಂಡ 145ನೇ ಸ್ಥಾನಕ್ಕೇರಿತ್ತು. 143ನೇ ಸ್ಥಾನಕ್ಕೇರಿದ್ದು ಭಾರತ ಇತ್ತೀಚೆಗೆ ಗಳಿಸಿದ ಉನ್ನತ ರ್ಯಾಂಕಿಂಗ್ ಸ್ಥಾನವಾಗಿದೆ.
5 ಸ್ಥಾನ ಮೇಲಕ್ಕೇರಿರುವ ಅಫ್ಘಾನಿಸ್ತಾನ 122ನೇ ಸ್ಥಾನದಲ್ಲಿದ್ದು, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೇ ಉನ್ನತ ರ್ಯಾಂಕಿಂಗ್ ಹೊಂದಿದೆ. ಅಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.