ಗುಜರಾತ್, ಗೋವಾಗೆ ಜಯ
ರಾಜ್ಕೋಟ್: ಪರಿಣಾಮಕಾರಿ ಆಲ್ರೌಂಡ್ ಪ್ರದರ್ಶನ ನೀಡಿದ ಪ್ರಿಯಾಂಕ್ ಪಾಂಚಾಲ್ರ ನೆರವಿನಿಂದ ಗುಜರಾತ್ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಉತ್ತರಪ್ರದೇಶ ವಿರುದ್ಧ ರೋಚಕ ಗೆಲವು ಸಾಧಿಸಿದೆ.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶುಕ್ರವಾರ ನಡೆದ ಸೂಪರ್ ಲೀಗ್ ಹಂತದ 'ಎ' ಗುಂಪಿನ ಪಂದ್ಯದಲ್ಲಿ ಗುಜರಾತ್ 34 ರನ್ಗಳಿಂದ ಉತ್ತರಪ್ರದೇಶವನ್ನು ಸೋಲಿಸಿತು.
ಟಾಸ್ ಗೆದ್ದು ಬ್ಯಾಟ್ ಮಾಡಿದ ಗುಜರಾತ್ 20 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 184 ರನ್ಗಳ ಬೃಹತ್ ಮೊತ್ತ ಪೇರಿಸಿತು.
ಆರಂಭಿಕ ಪಾಂಚಾಲ್ ಕೇವಲ 52 ಎಸೆತಗಳಲ್ಲಿ 12 ಬೌಂಡರಿ ಒಳಗೊಂಡ 77 ರನ್ಗಳಿಸಿ ತಂಡದ ಅತ್ಯುತ್ತಮ ಮೊತ್ತಕ್ಕೆ ನೆರವಾದರು. ಕಠಿಣ ಗುರಿ ಬೆಂಬತ್ತಿದ ಉತ್ತರಪ್ರದೇಶ ತಂಡಕ್ಕೆ 20 ಓವರುಗಳಲ್ಲಿ 150 ರನ್ಗಳಿಸಲಷ್ಟೇ ಶಕ್ತವಾಯಿತು.
ಗೋವಾ ಗೆಲವಿನ ನಗೆ: ಇಂದೇ ನಡೆದ ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಗೋವಾ 58 ರನ್ಗಳಿಂದ ಜಾರ್ಖಂಡ್ ವಿರುದ್ಧ ಗೆಲವಿನ ನಗೆ ಬೀರಿತು.
ಟಾಸ್ ಗೆದ್ದು ಬ್ಯಾಟ್ ಮಾಡಿದ ಗೋವಾ 4 ವಿಕೆಟ್ಗೆ 172 ರನ್ಗಳಿಸಿತು. ಆರಂಭಿಕರಾದ ಸ್ವಪ್ನಿಲ್ ಅಸ್ನೋಡಕರ್ (57ರನ್, 47 ಎಸೆತ, 6 ಬೌಂಡರಿ, 1 ಸಿಕ್ಸರ್) ಮತ್ತು ಸಗುನ್ ಕಾಮತ್ (40ರನ್, 26 ಎಸೆತ, 1 ಬೌಂಡರಿ, 3 ಸಿಕ್ಸರ್) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಜಾರ್ಖಂಡ್ 8 ವಿಕೆಟ್ಗೆ 114 ರನ್ಗಳಿಸಲಷ್ಟೇ ಸಾಧ್ಯವಾಯಿತು.
ಸಂಕ್ಷಿಪ್ತ ಸ್ಕೋರ್
ಗುಜರಾತ್ 20 ಓವರುಗಳಲ್ಲಿ 4 ವಿಕೆಟ್ಗೆ 184 (ಪ್ರಿಯಾಂಕ್ ಪಾಂಚಾಲ್ 77, ರಾಜ್ದೀಪ್ ದರ್ಬಾರ್ 35). ಉತ್ತರಪ್ರದೇಶ 20 ಓವರುಗಳಲ್ಲಿ 150 (ಮುಕುಲ್ ದಾಗರ್ 58, ಅಕ್ಷದೀಪ್ ನಾಥ್ 27, ಪ್ರವೀಣ್ಕುಮಾರ್ 26, ಪಾಂಚಾಲ್ 19ಕ್ಕೆ4, ರುಜುಲ್ ಭಟ್ 15ಕ್ಕೆ3).
ಗೋವಾ 20 ಓವರುಗಳಲ್ಲಿ 4 ವಿಕೆಟ್ಗೆ 172 (ಸ್ವಪ್ನಿಲ್ ಅಸ್ನೋಡಕರ್ 57, ಸಗುನ್ ಕಾಮತ್ 40). ಜಾರ್ಖಂಡ್ 20 ಓವರುಗಳಲ್ಲಿ 8 ವಿಕೆಟ್ಗೆ 114 (ಕುಶಾಲ್ ಸಿಂಗ್ 42, ಶಿವ್ ಗೌತಮ್ 30, ಗೌರೀಶ್ ಗವಾಸ್ 18ಕ್ಕೆ3, ದರ್ಶನ್ ಮಿಸಾಲ್ 15ಕ್ಕೆ2).