ದೀಪಿಕಾ ಪಳ್ಳಿಕಲ್ ಕ್ವಾರ್ಟರ್ಫೈನಲ್ಗೆ, ಜೋಶ್ನಾ ಚಿನ್ನಪ್ಪ ಮನೆಗೆ
ಹೌಸ್ಟನ್ (ಅಮೆರಿಕ): ಭಾರತದ ಸ್ಕ್ವಾಶ್ ರಂಗದ ಚೆಲುವೆ ದೀಪಿಕಾ ಪಳ್ಳಿಕಲ್ ಅಮೆರಿಕದ ಹೌಸ್ಟನ್ನಲ್ಲಿ ನಡೆಯುತ್ತಿರುವ ಟೆಕ್ಸಾಸ್ ಓಪನ್ ಸ್ಕ್ವಾಶ್ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ಫೈನಲ್ ತಲುಪಿದ್ದಾರೆ.
ಒಟ್ಟು 50 ಸಾವಿರ ಡಾಲರ್ ಬಹುಮಾನ ಮೊತ್ತದ ಈ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ದೀಪಿಕಾ ಪಳ್ಳಿಕಲ್ 12-10, 11-8, 11-5 ಅಂಕಗಳಿಂದ ಅರ್ಹತಾ ಸುತ್ತಿನಿಂದ ಬಂದ ಆಸ್ಟ್ರೇಲಿಯಾದ ಡೋನಾ ಉರಕ್ಹಾರ್ಟ್ ಅವರನ್ನು ಪರಾಭವಗೊಳಿಸಿದರು.
ಚೆನ್ನೈ ಮೂಲದ ದೀಪಿಕಾ, ಮೂರು ಗೇಮ್ಗಳಲ್ಲಿ ಉತ್ತಮ ಆಟ ಪ್ರದರ್ಶಿಸುವ ಮೂಲಕ ಕೇವಲ 36 ನಿಮಿಷಗಳ ಆಟದಲ್ಲಿಯೇ ಗೆಲವು ದಾಖಲಿಸಿದರು.
22ರ ದೀಪಿಕಾ ಕ್ವಾರ್ಟರ್ಫೈನಲ್ ಸುತ್ತಿನಲ್ಲಿ ವಿಶ್ವದ 19ನೇ ಕ್ರಮಾಂಕದ ಆಟಗಾರ್ತಿ ನಿಕೋಲೆಟ್ ಫರ್ನಾಂಡೀಸ್ ಅವರನ್ನು ಎದುರಿಸಲಿದ್ದಾರೆ. ಗಯಾನಾದ ನಿಕೋಲೆಟ್ ತಮ್ಮ ಪಂದ್ಯದಲ್ಲಿ ಹಾಂಕಾಂಗ್ನ ಐದನೇ ಶ್ರೇಯಾಂಕಿತ ಆಟಗಾರ್ತಿ ಅನ್ನೀ ಅವು ಅವರನ್ನು 12-10, 10-12, 11-6, 8-11, 11-8 ಅಂಕಗಳಿಂದ ಮಣಿಸಿ ಮುನ್ನಡೆ ಸಾಧಿಸಿದ್ದಾರೆ.
ಇದೇ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಭಾರತದ ಮತ್ತೊಬ್ಬ ಅಗ್ರಮಾನ್ಯ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಮಾತ್ರ ಮೊದಲ ಸುತ್ತಿನಲ್ಲಿಯೇ ಆಘಾತ ಅನುಭವಿಸಿದ್ದಾರೆ. ವಿಶ್ವದ 21ನೇ ಕ್ರಮಾಂಕದ ಜೋಶ್ನಾ, 7-11, 5-11, 5-11 ಅಂಕಗಳಿಂದ 16ನೇ ಕ್ರಮಾಂಕದ ಆಸ್ಟ್ರೇಲಿಯಾದ ರಾಕೆಲ್ ಗ್ರಿನಾಮ್ ಎದುರು ಸೋಲನುಭವಿಸಿದರು.