ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬರೋಡಾ, ಕೇರಳ ಗೆಲವಿನ ನಗೆ

Srinivasa Murthy VN
Updated On : 11 Apr 2014, 10:46 am

ಮುಂಬೈ: ಬರೋಡಾ ಮತ್ತು ಕೇರಳ ತಂಡಗಳು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಅಖಿಲ ಭಾರತ ಆಹ್ವಾನಿತ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಎದುರಾಳಿಗಳ ವಿರುದ್ಧ ನಿಚ್ಚಳ ಗೆಲವು ದಾಖಲಿಸಿದ್ದು, ಫೈನಲ್‌ಗೆ ಪ್ರವೇಶಿಸುವ ಉತ್ತಮ ಅವಕಾಶವನ್ನು ಹೊಂದಿವೆ.
ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿ ಶುಕ್ರವಾರ ನಡೆದ 'ಬಿ' ಗುಂಪಿನ ಸೂಪರ್ ಲೀಗ್ ಪಂದ್ಯದಲ್ಲಿ ಬಂಗಾಳ ತಂಡ ಟಾಸ್ ಗೆದ್ದು ಕ್ಷೇತ್ರರಕ್ಷಣೆ ಆಯ್ದುಕೊಂಡಿತು.
ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಕೇರಳ 8 ವಿಕೆಟ್‌ಗೆ 101 ರನ್‌ಗಳ ಅಲ್ಪ ಮೊತ್ತ ಗಳಿಸಿತು. ಮಧ್ಯಮ ಕ್ರಮಾಂಕದಲ್ಲಿ ರೋಹನ್ ಪ್ರೇಮ್ (51ರನ್, 50 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕ ಗಳಿಸಿದರು.
ಆದರೆ, ಸಾಧಾರಣ ಗುರಿ ಬೆಂಬತ್ತಿದ ಬಂಗಾಳ ಕೇವಲ 82 ರನ್‌ಗಳಿಗೆ ನಾಟಕೀಯ ಪತನ ಕಾಣುವುದರೊಂದಿಗೆ ಕೇರಳಕ್ಕೆ ಅದ್ಧೂರಿ ಜಯ ದೊರಕಿದಂತಾಯಿತು. ಮುಖ್ಯವಾಗಿ ತಂಡದ ಪರ ಅತ್ಯುತ್ತಮ ದಾಳಿ
ನಡೆಸಿದ ಉನ್ನಿಕೃಷ್ಣನ್ ಮನುಕೃಷ್ಣನ್ 4 ಓವರುಗಳಲ್ಲಿ ಕೇವಲ 6 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಕೇರಳಕ್ಕೆ 19 ರನ್‌ಗಳಿಂದ ಅಚ್ಚರಿಯ ಗೆಲವು ತಂದುಕೊಟ್ಟರು.
ಬರೋಡಾಗೆ ರಾಜಸ್ಥಾನ ಸುಲಭ ತುತ್ತು
ವಾಂಖೆಡೆ ಕ್ರೀಡಾಂಗಣದಲ್ಲಿ ಇಂದೇ ನಡೆದ ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಬರೋಡಾ 10 ವಿಕೆಟ್‌ಗಳಿಂದ ರಾಜಸ್ಥಾನ ವಿರುದ್ಧ ನಿರಾಯಾಸ ಗೆಲವು ಸಾಧಿಸಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 19.3 ಓವರುಗಳಲ್ಲಿ 103 ರನ್‌ಗಳ ಅಲ್ಪ ಮೊತ್ತಕ್ಕೆ ಆಲೌಟಾಯಿತು.
ಮೂರನೇ ಕ್ರಮಾಂಕದಲ್ಲಿ ಆಡಿದ ಪುನೀತ್ ಯಾದವ್ 28 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 34 ರನ್‌ಗಳಿಸಿದ್ದೇ ಉತ್ತಮ ವೈಯಕ್ತಿಕ ಮೊತ್ತದ ಗಳಿಕೆಯಾಯಿತು.
ಬರೋಡಾ ದಾಳಿಯಲ್ಲಿ ಮಿಂಚಿದ ಎಡಗೈ ಸ್ಪಿನ್ನರ್ ರಿಶಿ ಅರೋಟೆ ಮತ್ತು ಲುಕ್ಮನ್ ಮೆರಿವಾಲಾ ತಲಾ 3 ವಿಕೆಟ್ ಪಡೆದರು. ಉತ್ತರವಾಗಿ 103 ರನ್‌ಗಳ ಗುರಿ ಬೆಂಬತ್ತಿದ ಬರೋಡಾ ಇನ್ನೂ 3.5 ಓವರುಗಳು ಉಳಿದಿರುವಂತೆಯೇ ಒಂದೂ ವಿಕೆಟ್ ಕಳೆದುಕೊಳ್ಳದೇ 105 ರನ್‌ಗಳಿಸಿ ಜಯದ ಕೇಕೆ ಹಾಕಿತು.
ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೇದಾರ್ ದೇವಧರ್ (ಅಜೇಯ 45, 42 ಎಸೆತ, 5 ಬೌಂಡರಿ) ಮತ್ತು ಆದಿತ್ಯ ವಾಗ್ಮೋಡೆ (ಅಜೇಯ 50, 54 ಎಸೆತ, 5 ಬೌಂಡರಿ) ವಿಕೆಟ್ ಬಿಟ್ಟುಕೊಡದೆ ಬರೋಡಾಕ್ಕೆ ಗೆಲವಿನ ಕೇಕೆ ಹಾಕಿಸಿದರು. ಈ ಗೆಲವಿನೊಂದಿಗೆ ಕೇರಳ ಮತ್ತು ಬರೋಡಾ ತಂಡಗಳು ತಲಾ 4 ಅಂಕಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡವು.
ನಾಳಿನ ಪಂದ್ಯದಲ್ಲಿ ಬರೋಡಾ ತಂಡ ತನಗೆ ಎದುರಾಗಲಿರುವ ಕೇರಳ ವಿರುದ್ಧ ಗೆಲವು ದಾಖಲಿಸಿದರೆ, ಏಪ್ರಿಲ್ 14ರಂದು ನಡೆಯಲಿರುವ ಫೈನಲ್ ಸೆಣಸಿಗೆ ಅರ್ಹತೆ ಪಡೆದುಕೊಳ್ಳಲಿದೆ. ರನ್ ಸರಾಸರಿಯಲ್ಲಿ ಬರೋಡಾ (೤1.405) ಮೊದಲ ಸ್ಥಾನದಲ್ಲಿದ್ದರೆ, ಕೇರಳ (೤0.515) ಮತ್ತು ರಾಜಸ್ಥಾನ (-0.219) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

ಸಂಕ್ಷಿಪ್ತ ಸ್ಕೋರ್
ಕೇರಳ 20 ಓವರುಗಳಲ್ಲಿ 8 ವಿಕೆಟ್‌ಗೆ 101( ರೋಹನ್ ಪ್ರೇಮ್ 51, ಪ್ರೀತಂ ಚಕ್ರವರ್ತಿ 9ಕ್ಕೆ2, ಸೌರಶಿಶ್ ಹಿರಿ 11ಕ್ಕೆ2). ಬಂಗಾಳ 16.5 ಓವರುಗಳಲ್ಲಿ 82 (ಅವಿಲಿನ್ ಘೋಷ್ 27, ಪಂಕಜ್ ಶಾ 27, ಮನುಕೃಷ್ಣನ್ 6ಕ್ಕೆ4, ಕೆ. ರಾಕೇಶ್ 14ಕ್ಕೆ2, ಪಿ. ಪ್ರಶಾಂತ್ 18ಕ್ಕೆ2).
ರಾಜಸ್ಥಾನ 19.3 ಓವರುಗಳಲ್ಲಿ 103 (ಪುನೀತ್ ಯಾದವ್ 34, ಆರ್. ಅರೋಟೆ 29ಕ್ಕೆ3, ಎಲ್. ಮೆರಿವಾಲ 12ಕ್ಕೆ3, ಎಚ್. ಪಾಂಡೆ 15ಕ್ಕೆ2). ಬರೋಡಾ 16.1 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೆ 105 (ಕೆ.ದೇವಧರ್ ಅಜೇಯ 45, ಎ. ವಾಘ್ಮೋಡೆ ಅಜೇಯ 50).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement