ಬಿಸಿಸಿಐ ಅರ್ಜಿ ವಿಚಾರಣೆ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಪಂದ್ಯಾವಳಿಯಲ್ಲಿನ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ವಿಚಾರಣೆ ನಡೆಸಿದ ಮುಕುಲ್ ಮುದ್ಗಲ್ ಸಮಿತಿ ಸುಪ್ರೀಂ ಕೋರ್ಟ್ಗೆ ನೀಡಿರುವ ಎನ್.ಶ್ರೀನಿವಾಸನ್ ಹಾಗೂ ಮಹೇಂದ್ರ ಸಿಂಗ್ ಧೋನಿ ನಡುವಣ ಮಾತುಕತೆಯ ಧ್ವನಿಮುದ್ರಿಕೆಯನ್ನು ನೀಡುವಂತೆ ಬಿಸಿಸಿಐ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಏ.16ರಂದು ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಈ ಅರ್ಜಿಯನ್ನು ಬಿಹಾರ ಕ್ರಿಕೆಟ್ ಸಂಸ್ಥೆ ಪ್ರಶ್ನಿಸಿದ್ದು, ಶ್ರೀನಿವಾಸನ್ ಹಾಗೂ ಧೋನಿ ನಡುವಣ ಮಾತುಕತೆ ಕ್ರಿಕೆಟ್ನ ಹೊರತಾಗಿಯ ವ್ಯವಹಾರದ್ದಾಗಿದೆ. ಹಾಗಾಗಿ ಬಿಸಿಸಿಐ ಶ್ರೀನಿವಾಸನ್ ಹಾಗೂ ಧೋನಿಯ ಪರವಾಗಿ ಧ್ವನಿಮುದ್ರಿಕೆ ಕೇಳುವಂತಿಲ್ಲ ಎಂದು ಬಿಸಿಎ ಪರ ಹಿರಿಯ ವಕೀಲರಾದ ಅಜೀತ್ ಸಿನ್ಹಾ ವಾದಿಸಿದ್ದಾರೆ.
ಒಂದುವೇಳೆ ಬಿಸಿಸಿಐಗೆ ಧ್ವನಿಮುದ್ರಿಕೆ ನೀಡಿದ್ದೇ ಆದರೆ, ಬಿಹಾರ ಕ್ರಿಕೆಟ್ ಸಂಸ್ಥೆಗೂ ಸಹ ನೀಡಬೇಕು ಎಂದರು. ಈ ಕುರಿತು ಮಾತನಾಡಿದ ಬಿಸಿಸಿಐನ ಸಿಎ ಸುಂದರಮ್, ಧ್ವನಿಮುದ್ರಿಕೆಯ ಹೊರತಾಗಿ ಈ ವಿಷಯದ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.