ಟೆಕ್ಸಾಸ್ ಓಪನ್: ಸೆಮಿಫೈನಲ್ಗೆ ದೀಪಿಕಾ ಪಳ್ಳಿಕಲ್
ಹೌಸ್ಟನ್: ಪ್ರಯಾಸದ ಗೆಲವು ದಾಖಲಿಸುವಲ್ಲಿ ಯಶಸ್ವಿಯಾದ ಭಾರತದ ಅಗ್ರ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಟೆಕ್ಸಾಸ್ ಓಪನ್ ಸ್ಕ್ವಾಷ್ ಚಾಂಪಿಯನ್ಶಿಪ್ನ ಸೆಮಿಫೈನಲ್ಗೆ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಎಂಟರಘಟ್ಟದ ಪಂದ್ಯದಲ್ಲಿ ದೀಪಿಕಾ ಗುಯಾನದ ನಿಕೊಲೆಟ್ ಫರ್ನಾಂಡೀಸ್ ವಿರುದ್ಧ ಗೆಲವು ದಾಖಲಿಸಿದರು. ಪ್ರಮುಖ ಆಟಗಾರ್ತಿಯಾಗಿರುವ ದೀಪಿಕಾ, ಈ ಪಂದ್ಯದಲ್ಲಿ ಫರ್ನಾಂಡೀಸ್ರಿಂದ ಪ್ರಬಲ ಪೈಪೋಟಿ ಎದುರಿಸಬೇಕಾಯಿತು. ಹಾಗಾಗಿ 11-4, 11-6, 10-12, 10-12, 11-5 ಸೆಟ್ಗಳ ಅಂತರದಿಂದ ಪ್ರಯಾಸದ ಗೆಲವು ದಾಖಲಿಸಿದರು. ಈ ಮೂಲಕ ದೀಪಿಕಾ ಉಪಾಂತ್ಯದ ಸುತ್ತಿನಲ್ಲಿ ವಿಶ್ವದ 8ನೇ ರ್ಯಾಂಕಿಂಗ್ನ ಐರ್ಲೆಂಡ್ನ ಮ್ಯಾಡ್ಲೇನ್ ಪೆರ್ರಿ ವಿರುದ್ಧ ಸೆಣಸಲಿದ್ದಾರೆ. ಪಂದ್ಯದ ಆರಂಭದಲ್ಲಿ ಉತ್ತಮ ಆರಂಭ ಪಡೆದ ದೀಪಿಕಾ ಆರಂಭಿಕ ಎರಡು ಸೆಟ್ಗಳಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. ನಂತರ ಎರಡು ಸೆಟ್ಗಳಲ್ಲಿ ಹೋರಾಟ ನೀಡಿದ ಫರ್ನಾಂಡೀಸ್, ಮೇಲುಗೈ ಸಾಧಿಸಿ ಪಂದ್ಯದಲ್ಲಿ ಸಮಬಲ ಕಂಡುಕೊಂಡರು. ಹಾಗಾಗಿ ಪಂದ್ಯದ ಐದನೇ ಹಾಗೂ ಅಂತಿಮ ಸೆಟ್ ಮಹತ್ವದ ಪಾತ್ರ ವಹಿಸಿತ್ತು. ಅಂತಿಮ ಸೆಟ್ನಲ್ಲಿ ನಿಕೊಲೆಟ್ ವಿರುದ್ಧ ನಿಯಂತ್ರಣ ಕಂಡುಕೊಂಡ ಪಳ್ಳಿಕಲ್, ಗೆಲವಿನ ದಡ ಸೇರುವಲ್ಲಿ ಯಶಸ್ವಿಯಾದರು.