ದುಬೈ ಓಪನ್: ತಪ್ಪಿನಿಂದ ಸೋತ ಗುಪ್ತಾ
ದುಬೈ: ಗ್ರ್ಯಾಂಡ್ಮಾಸ್ಟರ್ ಹಾಗೂ ಮಾಜಿ ಕಿರಿಯ ವಿಶ್ವ ಚಾಂಪಿಯನ್ ಅಭಿಜಿತ್ ಗುಪ್ತಾ ತಾವು ಎಸಗಿದ ತಪ್ಪಿನಿಂದ 16ನೇ ದುಬೈ ಓಪನ್ ಚೆಸ್ ಟೂರ್ನಿಯಲ್ಲಿ ಅಚ್ಚರಿಯ ರೀತಿಯಲ್ಲಿ ಸೋಲನುಭವಿಸಿದ್ದಾರೆ. ಶನಿವಾರ ನಡೆದ ಐದನೇ ಸುತ್ತಿನ ಪಂದ್ಯದಲ್ಲಿ ಅಭಿಜಿತ್ ಗುಪ್ತಾ, ತಮ್ಮ ಎದುರಾಳಿ ಫ್ರಾನ್ಸ್ನ ರೊಮೈನ್ ಎಡೌರ್ಡೊ ವಿರುದ್ಧ ಸೋಲನುಭವಿಸಿದ್ದಾರೆ. ಈ ಸೋಲಿನಿಂದ ಅಭಿಜಿತ್ ತಮ್ಮ ಅಗ್ರಸ್ಥಾನವನ್ನು ಕಳೆದುಕೊಂಡಿದ್ದಾರೆ. ಪಂದ್ಯದ ಬಹುತೇಕ ಹಂತದಲ್ಲಿ ನಿಯಂತ್ರಣ ಸಾಧಿಸಿದ್ದ ಅಭಿಜಿತ್, ದಿಢೀರನೆ ಕುಸಿತ ಕಂಡರು. ಈ ಕುಸಿತದಿಂದ ಪಂದ್ಯದಲ್ಲಿ ಮತ್ತೆ ಚೇತರಿಸಿಕೊಳ್ಳಲಾಗದೇ ಗುಪ್ತಾ ಸೋಲನುಭವಿಸಬೇಕಾಯಿತು. ಪಂದ್ಯದಲ್ಲಿ ಉತ್ತಮ ನಿಯಂತ್ರಣ ಸಾಧಿಸಿದ್ದ ಅಭಿಜಿತ್ ಗೆಲವಿನ ಆತುರದಲ್ಲಿ ತಪ್ಪುಕಾಯಿಯನ್ನು ಮುನ್ನಡೆಸಿದರು. ಈ ಅವಕಾಶವನ್ನು ಬಳಸಿಕೊಂಡ ಎಡೌರ್ಡೊ, ಪಂದ್ಯದಲ್ಲಿ ಗೆಲವು ದಾಖಲಿಸಿದರು. ಈ ಗೆಲವಿನಿಂದ ಎಡೌರ್ಡೊ 4.5ಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ಅಭಿಜಿತ್ ಗುಪ್ತಾ ಜತೆಗೆ ಅಗ್ರ ಶ್ರೇಯಾಂಕಿತ ಉಕ್ರೇನ್ನ ಅಂಟೊನ್ ಕರೊಬೊವ್, ಅರ್ಮೇನಿಯಾದ ವ್ಲಾಡ್ಮಿರ್ ಅಕೊಪೈನ್, ಫ್ರಾನ್ಸ್ನ ಆ್ಯಂಡ್ರೆ ತಲಾ 4 ಅಂಕಗಳನ್ನು ಪಡೆಯುವ ಮೂಲಕ ಜಂಟಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಪಂದ್ಯಾವಳಿಯಲ್ಲಿ ಇನ್ನು ನಾಲ್ಕು ಸುತ್ತುಗಳು ಬಾಕಿ ಉಳಿದಿದ್ದು, ಅಭಿಜಿತ್ ಪಾಲಿಗೆ ಮಹತ್ವದ್ದಾಗಿದೆ.