ಭಾರತ ಭರ್ಜರಿ ಆರಂಭ
ನವದೆಹಲಿ: ಭಾರತದ ಆಟಗಾರರು ಮೊದಲ ಪಂದ್ಯದಲ್ಲಿಯೇ ಲೀಡೆನ್ ಹಾಕಿ ಕ್ಲಬ್ ತಂಡದ ವಿರುದ್ಧ ಅಮೋಘ ಜಯ ದಾಖಲಿಸುವುದರೊಂದಿಗೆ ಯೂರೋಪಿಯನ್ ಹಾಕಿ ಪ್ರವಾಸವನ್ನು ಅತ್ಯಂತ ಭರ್ಜರಿಯಾಗಿಯೇ ಆರಂಭಿಸಿದ್ದಾರೆ.
ಡಚ್ ರಾಷ್ಟ್ರೀಯ ಕ್ಲಬ್ ತಂಡವಾದ ಲೀಡೆನ್ ವಿರುದ್ಧ ನಡೆದ ಪ್ರವಾಸದ ಮೊದಲ ಪಂದ್ಯದಲ್ಲಿ ಭಾರತದ ಆಟಗಾರರು 7-0 ಗೋಲುಗಳಿಂದ ಸರಳ ಗೆಲವು ದಾಖಲಿಸಿದರು.
ಹಾಲೆಂಡ್ನ ಹಾಗ್ನಲ್ಲಿ ಮೇ 31ರಿಂದ ಜೂನ್ 15ರ ವರೆಗೆ ನಡೆಯಲಿರುವ ಎಫ್ಐಎಚ್ ಪುರುಷರ ವಿಶ್ವಕಪ್ ಹಾಕಿ ಚಾಂಪಿಯನ್ಶಿಪ್ಗಾಗಿ ಸಿದ್ಧತೆ ಮಾಡಿಕೊಳ್ಳಲು ಯೂರೋಪ್ ಪ್ರವಾಸ ಕೈಗೊಂಡಿರುವ ಸರ್ದಾರ್ ಸಿಂಗ್ ನಾಯಕತ್ವದ ಭಾರತೀಯ ಪಡೆ ಶುರುವಿನಲ್ಲಿಯೇ ಉತ್ತಮ ಸಫಲತೆ ಧಕ್ಕಿಸಿಕೊಂಡಂತಾಗಿದೆ.
ಭಾರತದ ಪರ ಆಕಾಶ್ದೀಪ್ ಸಿಂಗ್ ಪ್ರಥಮಾರ್ಧದ 18ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ಶುಭಾರಂಭಕ್ಕೆ ಕಾರಣರಾದರು. ನಂತರದಲ್ಲಿ ನಿಕ್ಕಿನ್ ತಿಮ್ಮಯ್ಯ 21ನೇ ನಿಮಿಷದಲ್ಲಿ ಗೋಲು ಬಾರಿಸುವುದರೊಂದಿಗೆ ವಿರಾಮದ ವೇಳೆಗೆ ಭಾರತ ತಂಡ 2-0 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು.
ಮೊದಲ ಅವಧಿಯ ಹೋರಾಟದಲ್ಲಿ ಭಾರತ ಸಂಪೂರ್ಣ ತನ್ನ ಪ್ರಭುತ್ವ ಸ್ಥಾಪಿಸಿತು. ಎದುರಾಳಿಯ ದಾಳಿಯನ್ನು ಸಮರ್ಥವಾಗಿ ತಡೆಯುವಲ್ಲಿ ರಕ್ಷಣಾ ವಿಭಾಗ ಸಫಲವಾಯಿತು. ಮತ್ತೊಂದೆಡೆ ದಾಳಿಯಲ್ಲೂ ತವರಿನ ಆಟಗಾರರು ಸೈ ಎನಿಸಿದರು.
ಇನ್ನು ಉತ್ತರಾರ್ಧದ ಆಟದಲ್ಲಿ ರೂಪಿಂದರ್ ಪಾಲ್ ಸಿಂಗ್ ಪಂದ್ಯದ 38ನೇ ಮತ್ತು 39ನೇ ನಿಮಿಷಗಳಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 4-0ಗೆ ಹಿಗ್ಗಿಸಿದರು. ಈ ಎರಡೂ ಗೋಲುಗಳನ್ನು ಅವರು ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ಗಳಿಸಿದ್ದು ವಿಶೇಷವಾಗಿತ್ತು.
ಉಳಿದಂತೆ, ರಮಣ್ದೀಪ್ ಸಿಂಗ್ (43ನೇ ನಿಮಿಷ) ತಂಡದ ಪರ ಐದನೇ ಗೋಲು ದಾಖಲಿಸಿದರೆ, ವಿ. ರಘುನಾಥ್ 45ನೇ ನಿಮಿಷ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಹಾಗೂ ಯುವರಾಜ್ ವಾಲ್ಮೀಕಿ 53ನೇ ನಿಮಿಷಗಳಲ್ಲಿ ಗೋಲು ಗಳಿಸಿ ತಂಡಕ್ಕೆ ನಿರಾಯಾಸ ಗೆಲವು ತಂದುಕೊಟ್ಟರು.
ಈ ಮಧ್ಯೆ ಎರಡನೇ ಅವಧಿಯ ಆಟದಲ್ಲಿ ಲೀಡೆನ್ ಕ್ಲಬ್ ತಂಡಕ್ಕೆ ಗೋಲುಗಳಿಸುವ ಅತ್ಯುತ್ತಮ ಅವಕಾಶವೊಂದು ಒದಗಿಬಂದಿತ್ತು. ಆದರೆ, ಬದಲಿ ಗೋಲ್ಕೀಪರ್ ಆಗಿ ಬಂದಿದ್ದ ಹರ್ಜೋತ್ ಸಿಂಗ್ ಉತ್ತಮ ತಡೆಯೊಡ್ಡಿ ಎದುರಾಳಿಯ ಅವಕಾಶವನ್ನು ಹಾಳುಗೆಡವಿದರು.