ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸಂಧು ಕೊರಳಿಗೆ ಚಿನ್ನದ ಹಾರ

ಮಾನವ್‌ಜೀತ್ ಸಿಂಗ್ ಸಂಧು ಅದ್ಭುತ ಪ್ರದರ್ಶನ ನೀಡುವ ಮೂಲಕ ಐಎಸ್‌ಎಸ್‌ಎಫ್ ಶಾಟ್‌ಗನ್ ವಿಶ್ವಕಪ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಹಾರ ಹಾಕಿಕೊಂಡಿದ್ದಾರೆ.

Srinivasa Murthy VN
Updated On : 12 Apr 2014, 11:14 am

ನವದೆಹಲಿ: ಭಾರತದ ಖ್ಯಾತ ಗುರಿಕಾರ ಮಾನವ್‌ಜೀತ್ ಸಿಂಗ್ ಸಂಧು ಅದ್ಭುತ ಪ್ರದರ್ಶನ ನೀಡುವ ಮೂಲಕ ಅಮೆರಿಕದ ಟಕ್ಸಾನ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ಶಾಟ್‌ಗನ್ ವಿಶ್ವಕಪ್ ಚಾಂಪಿಯನ್‌ಶಿಪ್‌ನ ಪುರುಷರ ಟ್ಯ್ರಾಪ್ ವಿಭಾಗದಲ್ಲಿ ಚಿನ್ನದ ಹಾರ ಕೊರಳಿಗೆ ಹಾಕಿಕೊಂಡಿದ್ದಾರೆ.
ರಾಜೀವ್‌ಗಾಂಧಿ ಖೇಲ್ ರತ್ನ ಪುರಸ್ಕಾರ ಸಮ್ಮಾನಿತ ಮಾನವ್‌ಜೀತ್ ಅವರು ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಮೈಕೆಲ್ ಡೈಮಂಡ್‌ರನ್ನು ಹಿಂದಕ್ಕೆ ನೂಕಿ ಈ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ.
ವಿಶ್ವದ ಮಾಜಿ ನಂಬರ್ ಒನ್ 37ರ ಭಾರತೀಯ ಆಟಗಾರ ಅರ್ಹತಾ ಹಂತದಲ್ಲಿ 121 ಅಂಕ ಮತ್ತು ಫೈನಲ್ಸ್‌ನಲ್ಲಿ 13 ಅಂಕ ಸಂಪಾದಿಸುವ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದರು.
1996ರ ಅಟ್ಲಾಂಟಾ ಮತ್ತು 2009ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಚಾಂಪಿಯನ್ ಆಗಿದ್ದ ಮೈಕೆಲ್ ಡೈಮಂಡ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿಯೂ ಒಟ್ಟಾರೆ 5 ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಆದರೆ, ಈ ಶಾಟ್‌ಗನ್ ವಿಶ್ವಕಪ್‌ನಲ್ಲಿ ಅವರು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲರಾಗುವುದರೊಂದಿಗೆ ಚಿನ್ನದ ಪದಕದ ಹಾರದಿಂದ ದೂರ ಸರಿದರು. ಅವರು ಅರ್ಹತಾ ಹಂತದಲ್ಲಿ 119 ಮತ್ತು ಫೈನಲ್ಸ್‌ನಲ್ಲಿ 9 ಅಂಕಗಳನ್ನು ಸಂಪಾದಿಸಲಷ್ಟೇ ಶಕ್ತರಾದರು.
ಈ ಮಧ್ಯೆ ಸೆಮಿಫೈನಲ್‌ನಲ್ಲಿ ಮಾನವ್‌ಜೀತ್ 15 ಗುರಿಗಳಲ್ಲಿ 14ರಲ್ಲಿ ಅಂಕ ಸಂಪಾದಿಸಿದರು. ಈ ಮುನ್ನ ನಾಲ್ಕು ವರ್ಷಗಳ ಹಿಂದೆ ಅವರು ವಿಶ್ವಕಪ್ ಹಂತದ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು.
ಕಳೆದ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದ ಅವರು 16ನೇ ಸ್ಥಾನಕ್ಕೆ ತೃಪ್ತಿಗೊಂಡಿದ್ದರು. ಆ ಮೂಲಕ ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಫೈನಲ್ ತಲುಪಲೂ ಸಹ ವಿಫಲರಾಗಿದ್ದರು. ಇದೀಗ ಚಿನ್ನದ ಪದಕ ಗೆದ್ದ ಸಾಧನೆ ಮಾಡಿರುವ ಮಾನವ್‌ಜೀತ್ ಸಿಂಗ್ ಸಂಧುಗೆ ಮುಂದಿನ 2016ರ ರಿಯೊ ಒಲಿಂಪಿಕ್ಸ್‌ಗಾಗಿ ಸ್ಫೂರ್ತಿ ತುಂಬಿದಂತಾಗಿದೆ.
ಮಹಿಳೆಯರ ವಿಭಾಗದಲ್ಲಿ ಭಾರತದ ಶ್ರೇಯಾಸಿ ಸಿಂಗ್ ಗಮನ ಸೆಳೆಯಲು ವಿಫಲರಾಗಿ 6ನೇ ಸ್ಥಾನಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.
ಡಬಲ್ ಟ್ರ್ಯಾಪ್ ಸ್ಪರ್ಧೆಗಳು ಏಪ್ರಿಲ್ 13-14ರಂದು ನಡೆಯಲಿದ್ದು, ಅಲ್ಲಿ ಭಾರತದ ಪರ ರಂಜನ್ ಸೋಧಿ, ಮೋಧ್ ಅಸಬ್ ಮತ್ತು ಅಂಕುರ್ ಮಿತ್ತಲ್ ಪಾಲ್ಗೊಳ್ಳಲಿದ್ದಾರೆ.
ಈ ವರ್ಷ ಶಾಟ್‌ಗನ್ ವಿಭಾಗದಲ್ಲಿ ಒಟ್ಟು ನಾಲ್ಕು ಪಂದ್ಯಾವಳಿಗಳು ನಡೆಯಲಿದ್ದು, ಇದು ಮೊದಲನೇಯದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement