'ಸರಣಿ ಆಡದಿದ್ದರೆ ಪಾಕಿಸ್ತಾನ ದಿವಾಳಿ'
ಕರಾಚಿ: ಇತ್ತೀಚಿನ ದಿನಗಳಲ್ಲಿ ಪ್ರಮುಖ ದೇಶಗಳ ವಿರುದ್ಧ ತವರಿನಲ್ಲಿ ದ್ವಿಪಕ್ಷೀಯ ಸರಣಿಯನ್ನು ಆಯೋಜಿಸುವಲ್ಲಿ ವಿಫಲವಾಗಿರುವ ಪಾಕಿಸ್ತಾನ ಕ್ರಿಕೆಟ್ ಸಮಿತಿ, ಮುಂದಿನ ಎರಡು ವರ್ಷಗಳಲ್ಲಿ ಪ್ರಮುಖ ದೇಶಗಳ ಜತೆಗೆ ಪೂರ್ಣ ಪ್ರಮಾಣದ ಸರಣಿ ಆಯೋಜಿಸದಿದ್ದರೆ ದಿವಾಳಿಯಾಗುತ್ತೇವೆ ಎಂದು ತಿಳಿಸಿದೆ.
ಈ ಕುರಿತು ಮಾತನಾಡಿರುವ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ, ನಾವು ಮುಂದಿನ ಎಂಟು ವರ್ಷಗಳಲ್ಲಿ ಭಾರತ ಸೇರಿದಂತೆ ಎಲ್ಲಾ ಪ್ರಮುಖ ರಾಷ್ಟ್ರಗಳ ವಿರುದ್ಧ ತವರಿನಲ್ಲಿ ಪೂರ್ಣ ಪ್ರಮಾಣದ ಸರಣಿಯನ್ನು ಆಯೋಜಿಸುವ ಅವಕಾಶ ನೀಡಬೇಕು ಎಂಬ ಷರತ್ತಿನ ಆಧಾರದ ಮೇಲೆ ನಾವು ಐಸಿಸಿ ಅಧಿಕಾರ ಹಂಚಿಕೆ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆವು. ಪಿಸಿಬಿ ಇನ್ನು ಹೆಚ್ಚು ದಿನಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿಯಲು ಸಾಧ್ಯವಿಲ್ಲ. ಹಾಗಾಗಿ ದ್ವಿಪಕ್ಷಿಯ ಸರಣಿ ಆಯೋಜನೆ ಅವಶ್ಯಕವಾಗಿದೆ ಎಂದು ತಿಳಿಸಿದ್ದಾರೆ.
ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ನಾವು ಸರಿಯಾದ ಪ್ರಮಾಣದಲ್ಲಿ ಪ್ರಮುಖ ತಂಡಗಳ ವಿರುದ್ಧ ತವರಿನಲ್ಲಿ ಸರಣಿ ಆಯೋಜಿಸದಿದ್ದರೆ, ನಾವು ದಿವಾಳಿಯಾಗಲಿದ್ದೇವೆ. ಅದರಲ್ಲೂ ಭಾರತದ ವಿರುದ್ಧದ ಸರಣಿ ನಮ್ಮ ಪಾಲಿಗೆ ಹೆಚ್ಚು ಮಹತ್ವದ್ದಾಗಿದೆ ಎಂದರು.
2015ರಲ್ಲಿ ಭಾರತ-ಪಾಕ್ ಸರಣಿ?
ಈ ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವಣ ಪೂರ್ಣಪ್ರಮಾಣದ ಸರಣಿಯನ್ನು 2015ರಲ್ಲಿ ಯುಎಇಯಲ್ಲಿ ಆಯೋಜಿಸುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ವರಿದಿಗಳಿಂದ ತಿಳಿದುಬಂದಿದೆ.
ಆದರೆ ಈ ಕುರಿತು ಇನ್ನು ಯಾವುದೇ ರೀತಿಯ ಅಂತಿಮ ನಿರ್ಧಾರ ಇನ್ನಷ್ಟೇ ಕೈಗೊಳ್ಳಬೇಕಿದೆ. ಆದರೆ ಮುಂದಿನ ವರ್ಷ ಉಭಯ ತಂಡಗಳ ನಡುವೆ ಸರಣಿ ಬಹುತೇಕ ಖಚಿತವಾಗಿದೆ.
2014ರಲ್ಲಿ ಭಾರತ ಹಾಗೂ ಪಾಕ್ ನಡುವೆ ಪೂರ್ಣ ಪ್ರಮಾಣದಲ್ಲಿ ಸರಣಿಯನ್ನು ಆಯೋಜಿಸುವುದು ಬಹುತೇಕ ಕಷ್ಟವಾಗಿದೆ. ನಾವು 2015ರಲ್ಲಿ ಸರಣಿ ಆಯೋಜನೆಗೆ ಚಿಂತನೆ ನಡೆಸಿದ್ದೇವೆ. ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿನ ಸರಣಿ ಹಾಗೂ ವಿಶ್ವಕಪ್ ಪಂದ್ಯಾವಳಿ ನಡುವೆ ಕಾಲಾವಕಾಶವಿದ್ದು, ಈ ವೇಳೆ ಪಂದ್ಯಾವಳಿಯನ್ನು ಆಯೋಜಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.