ಜಯದ ಹಾದಿಗೆ ಅಭಿಜಿತ್
ದುಬೈ: ಕಳೆದ ಪಂದ್ಯದಲ್ಲಿ ಸ್ವಯಂಕೃತ ತಪ್ಪಿನಿಂದ ಅಚ್ಚರಿಯ ಸೋಲನುಭವಿಸಿದ್ದ ಭಾರತದ ಭರವಸೆಯ ಚೆಸ್ ಆಟಗಾರ ಅಭಿಜಿತ್ ಗುಪ್ತಾ, 16ನೇ ದುಬೈ ಓಪನ್ ಚೆಸ್ ಪಂದ್ಯಾವಳಿಯಲ್ಲಿ ಮತ್ತೆ ಗೆಲವಿನ ಲಯಕ್ಕೆ ಮರಳಿದ್ದಾರೆ.
ಭಾನುವಾರ ನಡೆದ ಆರನೇ ಸುತ್ತಿನ ಪಂದ್ಯದಲ್ಲಿ ಕಜಕಸ್ತಾನದ ಪವೆಲ್ ಕೊಟ್ಸುರ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಅಭಿಜಿತ್, ಗೆಲವು ದಾಖಲಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಪ್ರಶಸ್ತಿಯ ಬೇಟೆ ಮುಂದುವರಿಸಿದ್ದಾರೆ.
ಕಳೆದ ಸುತ್ತಿನಲ್ಲಿ ಫ್ರಾನ್ಸ್‌ನ ರೊಮೈನ್ ಎಡೌರ್ಡೊ ವಿರುದ್ಧ ನಿಯಂತ್ರಣ ಸಾಧಿಸಿದ್ದ ಅಭಿಜಿತ್, ಕಡೇಯ ಹಂತದಲ್ಲಿ ಆತುರದ ನಿರ್ಧಾರದಿಂದ ತಪ್ಪು ಕಾಯಿ ನಡೆಸಿದ್ದರು. ಪರಿಣಾಮ ಗೆಲವಿನ ಹೊಸ್ತಿಲಲ್ಲಿದ್ದ ಪಂದ್ಯವನ್ನು ಕೈಚೆಲ್ಲಿದ್ದರು. ಅಲ್ಲದೆ ಅಗ್ರಸ್ಥಾನದಿಂದ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದರು.
ಇನ್ನು ಕಳೆದ ಸುತ್ತಿನಲ್ಲಿ ಅಗ್ರಸ್ಥಾನಕ್ಕೇರಿದ್ದ ರೊಮೈನ್ ಎಡೌರ್ಡೊ, ಆರನೇ ಸುತ್ತಿನ ರಂದ್ಯದಲ್ಲಿ ಅರ್ಮೆನಿಯಾದ ವ್ಲಾಡ್ಮಿರ್ ಅಕೊಪೈನ್ ವಿರುದ್ಧ ಗೆಲವು ದಾಖಲಿಸಿದ್ದಾರೆ. ಈ ಮೂಲಕ 5.5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಇನ್ನು ಪಂದ್ಯಾವಳಿಯಲ್ಲಿ 5 ಅಂಕಗಳನ್ನು ಪಡೆದಿರುವ ಅಭಿಜಿತ್ ಗುಪ್ತಾ ಜಂಟಿ ದ್ವಿತೀಯ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಇನ್ನು ಪಂದ್ಯಾವಳಿಯಲ್ಲಿ ಭಾರತದ ಇತರೆ ಆಟಗಾರರಾದ ಗ್ರ್ಯಾಂಡ್‌ಮಾಸ್ಟರ್ ದೆಬಶಿಶ್ ದಾಸ್, ತಮ್ಮ ಪಂದ್ಯದಲ್ಲಿ ಎದುರಾಳಿ ಇಂಗ್ಲೆಂಡ್‌ನ ಗವೈನ್ ಜೋನ್ಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದರಾದೂ ಡ್ರಾಗೆ ತೃಪ್ತಿಪಟ್ಟರು. ಸಹಜ್ ಗ್ರೊವರ್ ಇರಾನ್‌ನ ದೊರ್ಸಾ ಡೆರಾಕ್ಷನಿ ವಿರುದ್ಧ ಗೆಲವು ದಾಖಲಿಸಿದರು. ಎಂ.ಆರ್ ಲಲಿತ್ ಬಾಬು ತಮ್ಮ ಎದುರಾಳಿ ಟಿಗ್ರಾನ್ ವಿರುದ್ಧ ಸೋಲನುಭವಿಸಿದರು.