ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಇತಿಹಾಸದ ಮೆಲುಕು

ಐಪಿಎಲ್ ಟಿ-20 ಕ್ರಿಕೆಟ್‌ನ ಟೂರ್ನಿಯ ಏಳರ ಹಂಗಾಮ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.

Srinivasa Murthy VN
Updated On : 15 Apr 2014, 1:49 am

ಐಪಿಎಲ್ ಟಿ-20 ಕ್ರಿಕೆಟ್‌ನ ಟೂರ್ನಿಯ ಏಳರ ಹಂಗಾಮ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆರಂಭದ ಒಂದಿಷ್ಟು ಪಂದ್ಯಗಳು ಯುಎಇನಲ್ಲಿನ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಬರುವ ಬುಧವಾರ ಅಬುಧಾಬಿಯಲ್ಲಿ (ಏಪ್ರಿಲ್ 16ರಂದು) 2014ರ ಆವೃತ್ತಿಗೆ ಚಾಲನೆ ದೊರೆಯಲಿದೆ. ಐಪಿಎಲ್ ಒಂದು ಕ್ರಾಂತಿಯನ್ನೇ ಮಾಡಿದೆ. ಅನೇಕರ ಭವಿಷ್ಯ ರೂಪಿಸಿದೆ. ಆದರೆ, ಈಗ ಐಪಿಎಲ್‌ನಲ್ಲಿ ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್, ತಂಡದ ಫ್ರಾಂಚೈಸಿಗಳೇ ನೇರವಾಗಿ ಇಂತಹದರಲ್ಲಿ ಭಾಗಿಯಾಗಿರುವ ಪ್ರಕರಣಗಳು ಬೆಳಕಿಗೆ ಬಂದಾಗಿನಿಂದ ಅಸಹ್ಯ ಹುಟ್ಟಿಸಿದೆ. ಈ ಕಳಂಕದಿಂದ ಐಪಿಎಲ್ ಹೊರಬರುವುದು ಅಗತ್ಯ. ಈಗಾಗಲೇ ಫಿಕ್ಸಿಂಗ್ ಕುರಿತಂತೆ ವ್ಯಾಪಕ ತನಿಖೆ ನಡೆಯುತ್ತಿದ್ದು, ಅದು ನಿಷ್ಪಕ್ಷಪಾತವಾಗಿ, ಪಾರದರ್ಶಕತೆಯಿಂದ ನಡೆದು ನಿಜವಾದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕಿದೆ. ಈಗಾಗಲೇ ಆರು ಆವೃತ್ತಿಗಳು ಕಳೆದು ಹೋಗಿವೆ. ಮುಂದಿನ ಏಳನೇ ಆವೃತ್ತಿಯ ವಿಶ್ಲೇಷಣೆಗೆ ಮುನ್ನ ಇತಿಹಾಸದ ಕುರಿತು ಸ್ವಲ್ಪ ಮೆಲುಕು ಹಾಕುವ ಪ್ರಯತ್ನ ಇಲ್ಲಿದೆ.

ರಾರಾಜಿಸಿದ ಆರ್‌ಆರ್
ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಎಲ್ಲರ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದ ರಾಜಸ್ಥಾನ ರಾಯಲ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಎಲ್ಲರ ಗಮನ ಸೆಳೆದಿತ್ತು. ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 11ರಲ್ಲಿ ಗೆಲವು ಹಾಗೂ ಕೇವಲ 3ರಲ್ಲಿ ಸೋಲನುಭವಿಸಿದ್ದ ರಾಜಸ್ಥಾನ ತಂಡ, ಅಗ್ರಸ್ಥಾನ ಪಡೆದಿತ್ತು. ನಂತರ ಸೆಮಿಫೈನಲ್ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಹಾಗೂ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲವು ದಾಖಲಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು. ಈ ಆವೃತ್ತಿಯಲ್ಲಿ ಆರ್‌ಆರ್ ತಂಡದ ಆಲ್ರೌಂಡರ್ ಶೇನ್ ವ್ಯಾಟ್ಸನ್ 472 ರನ್ ಹಾಗೂ 17 ವಿಕೆಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಡೆಕ್ಕನ್ 'ಚಾರ್ಜರ್ಸ್‌'
ಮೊದಲ ಆವೃತ್ತಿಯಲ್ಲಿ ಕಡೇಯ ಸ್ಥಾನ ಪಡೆದಿದ್ದ ಡೆಕ್ಕನ್ ಚಾರ್ಜರ್ಸ್ ತಂಡ, 2ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದು ಪಂದ್ಯಾವಳಿಯ ರೋಚಕತೆಗೆ ಸಾಕ್ಷಿಯಾಗಿತ್ತು. ಈ ಆವೃತ್ತಿ ಲೋಕ ಸಭೆ ಚುನಾವಣೆ ಕಾರಣ ದ.ಆಫ್ರಿಕಾಕ್ಕೆ ಸ್ಥಳಾಂತರವಾಗಿತ್ತು. ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 7 ಗೆಲವು, 7 ಸೋಲಿನಿಂದ 14 ಅಂಕಗಳನ್ನು ಪಡೆದುಕೊಂಡು ನಾಲ್ಕನೇ ಸ್ಥಾನ ಪಡೆದು ಉಪಾಂತ್ಯಕ್ಕೆ ತಲುಪಿತ್ತು. ನಂತರ ಉಪಾಂತ್ಯದ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಹಾಗೂ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆಲವು ದಾಖಲಿಸಿ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಪಂದ್ಯಾವಳಿಯಲ್ಲಿ 495 ರನ್ ಗಳಿಸಿದ್ದ ಆ್ಯಡಮ್ ಗಿಲ್‌ಕ್ರಿಸ್ಟ್ ಸರಣಿ ಶ್ರೇಷ್ಠ ಆಟಗಾರನಾದರು.

ಚೆನ್ನೈ 'ಸೂಪರ್ ಕಿಂಗ್ಸ್‌'
ಚೊಚ್ಚಲ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿ ಪ್ರಶಸ್ತಿ ವಂಚಿತವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಮೂರನೇ ಆವೃತ್ತಿಯಲ್ಲಿ ಪ್ರಶಸ್ತಿ ಪಡೆಯಲು ಯಶಸ್ವಿಯಾಯಿತು. ಲೀಗ್ ಸುತ್ತಿನಲ್ಲಿ ಆಡಿದ 14 ಪಂದ್ಯಗಳಿಂದ ಪಂದ್ಯಗಳಲ್ಲಿ 7 ಗೆಲವು, 7 ಸೋಲಿನಿಂದ 14 ಅಂಕಗಳನ್ನು ಪಡೆದಿದ್ದ ಸಿಎಸ್‌ಕೆ ಮೂರನೇ ಸ್ಥಾನದೊಂದಿಗೆ ನಾಕೌಟ್ ಹಂತಕ್ಕೆ ಪ್ರವೇಶಿಸಿತ್ತು. ನಂತರ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಗಿದ್ದ ಡೆಕ್ಕನ್ ಚಾರ್ಜರ್ಸ್ ವಿರುದ್ಧ, ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪ್ರಾಬಲ್ಯ ಮೆರೆದು. ಐಪಿಎಲ್ ಕಿರೀಟ ಧರಿಸಿತ್ತು. ಈ ಆವೃತ್ತಿಯಲ್ಲಿ ಉತ್ತಮ ಬ್ಯಾಟಿಂಗ್ ಮಾಡಿ 618 ರನ್ ದಾಖಲಿಸಿದ್ದ ಸಚಿನ್ ತೆಂಡೂಲ್ಕರ್ ಸರಣಿ ಶ್ರೇಷ್ಠ ಎನಿಸಿದರು.

ಮುಂದುವರಿದ 'ಕಿಂಗ್ಸ್ ದರ್ಬಾರ್‌'
ನಾಲ್ಕನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದ ಸಿಎಸ್‌ಕೆ, ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಈ ಟ್ರೋಫಿಯನ್ನು ಎರಡು ಬಾರಿ ಗೆದ್ದ ಮೊದಲ ತಂಡವಾಗಿ ಹೊರಹೊಮ್ಮಿತು. ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಗೆಲವು ಹಾಗೂ 5 ಸೋಲಿನಿಂದ 18 ಅಂಕ ಪಡೆದು ಎರಡನೇ ಸ್ಥಾನಕ್ಕೇರಿತು. ನಂತರ ಉಪಾಂತ್ಯದಲ್ಲಿ ಹಾಗೂ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ಗೆಲವು ದಾಖಲಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಸಿಂಹಾಸನವನ್ನು ಅಲಂಕರಿಸಿತು. ಈ ಆವೃತ್ತಿಯಲ್ಲಿ ಎಲಿಮಿನೇಟರ್ ಪರಿಚಯಿಸಿದ್ದರಿಂದ ಆರ್‌ಸಿಬಿ ಉಪಾಂತ್ಯದಲ್ಲಿ ಸೋತರೂ ನಂತರ ಫೈನಲ್‌ಗೆ ಪ್ರವೇಶಿಸಿತ್ತು. ಈ ಆವೃತ್ತಿಯಲ್ಲಿ 608 ರನ್ ಹಾಗೂ 8 ವಿಕೆಟ್ ಪಡೆದಿದ್ದ ಕ್ರಿಸ್ ಗೇಯ್ಲ್ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.

ಕೋಲ್ಕತ್ತಾ ನೈಟ್ 'ರೈಡರ್ಸ್‌'
ಪ್ರಶಸ್ತಿ ಹಿಡಿಯಲು ಮೊದಲ ಆವೃತ್ತಿಯಿಂದ ಪ್ರಯತ್ನ ನಡೆಸುತ್ತಿದ್ದ ಕೆಕೆಆರ್ ತಂಡ ಐದನೇ ಆವೃತ್ತಿಯಲ್ಲಿ ಯಶಸ್ವಿಯಾಯಿತು. ಗೌತಮ್ ಗಂಭೀರ್ ನಾಯಕತ್ವದಲ್ಲಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಈ ಬಾರಿ 9 ತಂಡಗಳು ಭಾಗವಹಿಸಿದ್ದರಿಂದ ಪ್ರತಿ ತಂಡ ಲೀಗ್ ಹಂತದಲ್ಲಿ 16 ಪಂದ್ಯವನ್ನಾಡಿತು. ಈ ಹಂತದಲ್ಲಿ ಕೆಕೆಆರ್ 10 ಗೆಲವು, 5 ಸೋಲಿನಿಂದ 21 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿತ್ತು. ನಂತರ ಉಪಾಂತ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಹಾಗೂ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಗಿದ್ದ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲವು ದಾಖಲಿಸಿ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಯಿತು. ಪಂದ್ಯಾವಳಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಸುನಿಲ್ ನಾರಾಯಣ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮುಂಬೈ ಇಂಡಿಯನ್ಸ್ ಆಧಿಪತ್ಯ
ಐಪಿಎಲ್‌ನಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿಯ ದಾಹವನ್ನು ನೀಗಿಸಿಕೊಂಡಿದ್ದು, ಆರನೇ ಆವೃತ್ತಿಯಲ್ಲಿ. ಲೀಗ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಮುಂಬೈ, 16 ಪಂದ್ಯಗಳಿಂದ 11 ಗೆಲವು ಹಾಗೂ 5 ಸೋಲನುಭವಿಸಿ 22 ಅಂಕಗಳನ್ನು ದಾಖಲಿಸಿ ದ್ವಿತೀಯ ಸ್ಥಾನದಲ್ಲಿತ್ತು. ನಂತರ ಮೊದಲ ಕ್ವಾಲಿಫೈಯರ್‌ನಲ್ಲಿ ಸಿಎಸ್‌ಕೆ ವಿರುದ್ಧ ಸೋಲನುಭವಿಸಿತ್ತಾದರೂ, ಎಲಿಮಿನೇಟರ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲವು ದಾಖಲಿಸಿತು. ನಂತರ ಫೈನಲ್ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಜಯದ ನಗೆ ಬೀರುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿತು. ಪಂದ್ಯಾವಳಿಯಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ಶೇನ್ ವ್ಯಾಟ್ಸನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಅಂಕಿ ಅಂಶ
ಅತಿ ಹೆಚ್ಚು ರನ್ ದಾಖಲಿಸಿದ ಆಟಗಾರರು

ಆಟಗಾರ    ಪಂದ್ಯ    ರನ್    ಸರಾಸರಿ
ಸುರೇಶ್ ರೈನಾ    99    2802    35.02
ರೋಹಿತ್ ಶರ್ಮಾ    97    2513    32.63
ಕ್ರಿಸ್ ಗೇಯ್ಲ್    59    2512    52.33
ಗೌತಮ್ ಗಂಭೀರ್    88    2471    31.67
ಸಚಿನ್ ತೆಡೂಲ್ಕರ್    78    2334    34.83

ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರು
ಆಟಗಾರ    ಪಂದ್ಯ    ವಿಕೆಟ್    ಸರಾಸರಿ
ಲಸಿತ್ ಮಾಲಿಂಗ    73    103    17.95
ಅಮಿತ್ ಮಿಶ್ರಾ    76    95    20.25
ಆರ್.ಪಿ ಸಿಂಗ್    78    87    25.59
ಪ್ರಗ್ಯಾನ್ ಓಜಾ    79    85    22.69
ವಿನಯ್ ಕುಮಾರ್    77    84    25.67

ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು
ಆಟಗಾರ    ಪಂದ್ಯ    ಸಿಕ್ಸರ್
ಕ್ರಿಸ್ ಗೇಯ್ಲ್    59    180
ಸುರೇಶ್ ರೈನಾ    99    115
ರೋಹಿತ್ ಶರ್ಮಾ    97    110
ಯೂಸುಫ್ ಪಠಾಣ್    91    95
ಆ್ಯಡಂ ಗಿಲ್‌ಕ್ರಿಸ್ಟ್    80    92

ಗರಿಷ್ಠ ವೈಯಕ್ತಿಕ ಮೊತ್ತ
ಆಟಗಾರ    ತಂಡ    ಗರಿಷ್ಠ    ಎದುರಾಳಿ    ವರ್ಷ
ಕ್ರಿಸ್ ಗೇಯ್ಲ್    ಆರ್‌ಸಿಬಿ    175ಶ್ರೀ    ಪುಣೆ     2013
ಬ್ರೆಂಡನ್ ಮೆಕಲಂ    ಕೆಕೆಆರ್    158ಶ್ರೀ    ಆರ್‌ಸಿಬಿ    2008
ಕ್ರಿಸ್ ಗೇಯ್ಲ್    ಆರ್‌ಸಿಬಿ    128ಶ್ರೀ    ಡೇರ್‌ಡೆವಿಲ್ಸ್    2012
ಮುರಳಿ ವಿಜಯ್    ಸಿಎಸ್‌ಕೆ    127ಶ್ರೀ    ಆರ್‌ಆರ್    2010
ಪೌಲ್ ವಾಲ್ತಟಿ    ಪಂಜಾಬ್    120ಶ್ರೀ    ಸಿಎಸ್‌ಕೆ    2011

ಅತ್ಯುತ್ತಮ ಬೌಲಿಂಗ್ ಇನಿಂಗ್ಸ್
ಆಟಗಾರ    ತಂಡ    ಶ್ರೇಷ್ಠ    ಎದುರಾಳಿ    ವರ್ಷ
ಸೊಹೆಲ್ ತನ್ವೀರ್    ಆರ್‌ಆರ್    14ಕ್ಕೆ6    ಸಿಎಸ್‌ಕೆ    2008
ಅನಿಲ್ ಕುಂಬ್ಳೆ    ಆರ್‌ಸಿಬಿ    5ಕ್ಕೆ5    ಆರ್‌ಆರ್    2009
ಇಶಾಂತ್ ಶರ್ಮಾ    ಡೆಕ್ಕನ್    12ಕ್ಕೆ5    ಟಸ್ಕರ್ಸ್    2011
ಲಸಿತ್ ಮಾಲಿಂಗ    ಮುಂಬೈ    13ಕ್ಕೆ5    ಡೇರ್‌ಡೆವಿಲ್ಸ್    2011
ರವೀಂದ್ರ ಜಡೇಜಾ    ಸಿಎಸ್‌ಕೆ    16ಕ್ಕೆ5    ಡೆಕ್ಕನ್    2012

ತಂಡಗಳ ಗರಿಷ್ಠ ಮೊತ್ತ
ತಂಡ    ಮೊತ್ತ    ಎದುರಾಳಿ        ವರ್ಷ
ಆರ್‌ಸಿಬಿ    263/5    ಪುಣೆ ವಾರಿಯರ್ಸ್    2013
ಸಿಎಸ್‌ಕೆ    246/5    ರಾಜಸ್ಥಾನ ರಾಯಲ್ಸ್    2010
ಸಿಎಸ್‌ಕೆ    240/5    ಪಂಜಾಬ್        2008
ಕಿಂಗ್ಸ್ ಇಲೆವೆನ್    232/2    ಆರ್‌ಸಿಬಿ        2011
ಡೇರ್‌ಡೆವಿಲ್ಸ್    231/4    ಪಂಜಾಬ್        2011

ತಂಡಗಳ ಕನಿಷ್ಠ ಮೊತ್ತ
ತಂಡ    ಮೊತ್ತ    ಎದುರಾಳಿ    ವರ್ಷ    ಸ್ಥಳ
ರಾಜಸ್ಥಾನ ರಾಯಲ್ಸ್    58    ಆರ್‌ಸಿಬಿ    2009    ಕೇಪ್‌ಟೌನ್
ಕೆಕೆಆರ್        67    ಮುಂಬೈ    2008    ಮುಂಬೈ
ಕೊಚ್ಚಿ ಟಸ್ಕರ್ಸ್        74    ಡೆಕ್ಕನ್     2011    ಕೊಚ್ಚಿ
ಸಿಎಸ್‌ಕೆ        79    ಮುಂಬೈ     2013    ಮುಂಬೈ
ಡೇರ್‌ಡೆವಿಲ್ಸ್        80    ಸನ್‌ರೈಸರ್ಸ್    2013    ಹೈದರಾಬಾದ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement