ಕೆಎಸ್‌ಸಿಎ ಪ್ರಶಸ್ತಿ ಪ್ರದಾನ
ಬೆಂಗಳೂರು: ಕಳೆದ ಸಾಲಿನಲ್ಲಿ ಕೆಎಸ್‌ಸಿಎ ವತಿಯಿಂದ ಆಯೋಜಿಸಲಾಗಿದ್ದ ವಿವಿಧ ಹಂತಗಳ ಪಂದ್ಯಾವಳಿಗಳಲ್ಲಿ ಗೆಲವು ದಾಖಲಿಸಿದ ತಂಡ ಹಾಗೂ ಉತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಾಯಿತು. ತಂಡಗಳ ವಿಭಾಗದಲ್ಲಿ ಮೊದಲ ಡಿವಿಷನ್‌ನಲ್ಲಿ ಮೊದಲ ಲೀಗ್‌ನಲ್ಲಿ ಫ್ರೆಂಡ್ಸ್ ಯೂನಿಯನ್ ಕ್ರಿಕೆಟ್ ಕ್ಲಬ್, ಎರಡನೇ ಲೀಗ್‌ನಲ್ಲಿ ಮಲ್ಲೇಶ್ವರಮ್ ಜಿಮ್‌ಖಾನ, ತೃತೀಯ ಲೀಗ್‌ನಲ್ಲಿ ರಾಜಾಜಿನಗರ ಕ್ರಿಕೆಟರ್ಸ್ ಹಾಗೂ, ಕೆಎಸ್‌ಸಿಎ ಟಿ20 ಪಂದ್ಯಾವಳಿಯಲ್ಲಿ ಜವಹಾರ್ ಸ್ಫೋರ್ಟ್ಸ್ ಕ್ಲಬ್ ತಂಡಗಳು ಪ್ರಶಸ್ತಿ ಪಡೆದವು.
ಇನ್ನು ವೈಯಕ್ತಿಕ ವಿಭಾಗದ ಪ್ರಶಸ್ತಿಗಳಲ್ಲಿ, ಮೊದಲ ಡಿವಿಷನ್‌ನ ಮೊದಲ ಲೀಗ್‌ನಲ್ಲಿ ಶ್ರೇಯಸ್ ಗೋಪಾಲ್, ದ್ವಿತೀಯ ಲೀಗ್‌ನಲ್ಲಿ ಕ್ರಾಂತಿಕುಮಾರ್, ಮೂರನೇ ಲೀಗ್‌ನಲ್ಲಿ ಅಮಿತ್ ಚಂದ್ ಅತ್ಯುತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿ ಪಡೆದರು.
ಮಹಿಳೆಯರ ಕ್ರಿಕೆಟ್‌ನಲ್ಲಿ ಭಾರತ ರಾಷ್ಟ್ರೀಯ ತಂಡಕ್ಕೆ ಆಡಿದ ಕರುಣಾ ಜೈನ್, ಕಿರಿಯ ವಿಭಾಗದಲ್ಲಿ ರಾಜೇಶ್ವರಿ ಎಸ್ ಗಾಯಕವಾಡ್, ಟಿ20 ವಿಭಾಗದಲ್ಲಿ ವನಿತಾ ವಿ.ಆರ್ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರು.