ವಿವಾದಗಳ ಸುತ್ತ...
ಐಪಿಎಲ್ ಪಂದ್ಯಾವಳಿ ವಿಶ್ವದಾದ್ಯಂತ ಖ್ಯಾತಿ ಪಡೆದಿದೆಯಾದರೂ, ಅದೇರೀತಿ ಪಂದ್ಯಾವಳಿಯಲ್ಲಿನ ವಿವಾದಗಳಿಗೂ ಹೆಸರು ಮಾಡಿದೆ.
ಐಪಿಎಲ್ ಪಂದ್ಯಾವಳಿ ಚುಟುಕು ಕ್ರಿಕೆಟ್ನ ರೋಚಕತೆಗೆ ವಿಶ್ವದಾದ್ಯಂತ ಖ್ಯಾತಿ ಪಡೆದಿದೆಯಾದರೂ, ಅದೇರೀತಿ ಪಂದ್ಯಾವಳಿಯಲ್ಲಿನ ವಿವಾದಗಳಿಗೂ ಹೆಸರು ಮಾಡಿದೆ. ಆರು ಆವೃತ್ತಿಗಳು ಮುಗಿದು, ಏಳನೇ ಆವೃತ್ತಿಯ ಹೊಸ್ತಿಲಲ್ಲಿದ್ದೇವೆ. ಈ ವೇಳೆ ಆರಂಭದಿಂದ ಇಲ್ಲಿಯವರೆಗೆ ಕಂಡು ಬಂದಿರುವ ಅಗ್ರ ಹತ್ತು ವಿವಾದಗಳ ಮೆಲುಕು ಹಾಕೋಣ.
ಲಲಿತ್ ಮೋದಿ ವಜಾ
2010ರಲ್ಲಿ ಐಪಿಎಲ್ಗೆ ಜೀವ ನೀಡಿದ ಲಲಿತ್ ಮೋದಿಯವರನ್ನು ಐಪಿಎಲ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದು, ಮತ್ತೊಂದು ವಿವಾದವನ್ನು ಸೃಷ್ಟಿಸಿತ್ತು. ಐಪಿಎಲ್ನಲ್ಲಿ ಆರ್ಥಿಕ ಅವ್ಯವಹಾರ ನಡೆಸಿದ್ದು, ಬೆಳಕಿಗೆ ಬಂದಿದ್ದರಿಂದ ಬಿಸಿಸಿಐ, ಮೋದಿಯವರ ತಲೆದಂಡಕ್ಕೆ ಮುಂದಾಯಿತು.
ಶ್ರೀಕಾಂತ್ಗೆ ಬಜ್ಜಿ ಕಪಾಳ ಮೋಕ್ಷ
ಇನ್ನು 2008ರಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಣ ಪಂದ್ಯದಲ್ಲಿ ಹರ್ಭಜನ್ ಸಿಂಗ್, ಪಂಜಾಬ್ ತಂಡದ ಶ್ರೀಶಾಂತ್ ಕಪಾಳಕ್ಕೆ ಹೊಡೆಯುವ ಮೂಲಕ ವಿವಾದ ಸೃಷ್ಟಿಸಿದ್ದರು. ಹಾಗಾಗಿ ಹರ್ಭಜನ್ ಸಿಂಗ್ ಅವರಿಗೆ 11 ಪಂದ್ಯಗಳ ನಿಷೇಧ ಹೇರಲಾಗಿತ್ತು.
ಚೆನ್ನೈನಲ್ಲಿ ಲಂಕಾ ಆಟಗಾರರಿಗೆ ನಿಷೇಧ
ಶ್ರೀಲಂಕಾದಲ್ಲಿನ ತಮಿಳರ ಮೇಲೆ ಅಲ್ಲಿನ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂಬ ಹಿನ್ನೆಲೆಯಲ್ಲಿ 2013ರ ಆವೃತ್ತಿಯಲ್ಲಿ ಶ್ರೀಲಂಕಾ ತಂಡದ ಆಟಗಾರರನ್ನು ಚೆನ್ನೈನಲ್ಲಿ ನಡೆದ ಯಾವುದೇ ಪಂದ್ಯದಲ್ಲಿ ಭಾಗವಹಿಸಲು ಅವಕಾಶ ನೀಡಲಿಲ್ಲ. ಶ್ರೀಲಂಕಾದ 13 ಆಟಗಾರರು ಚೆನ್ನೈನ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ.
ರೇವ್ ಪಾರ್ಟಿ ವಿವಾದ
2012ರಲ್ಲಿ ಪುಣೆ ವಾರಿಯರ್ಸ್ ತಂಡದ ಆಟಗಾರರಾಗಿದ್ದ ರಾಹುಲ್ ಶರ್ಮಾ ಹಾಗೂ ವೇಯ್ನ್ ಪಾರ್ನೆಲ್ ಮುಂಬೈನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದಿದ್ದು, ಡ್ರಗ್ಸ್ ಸೇವನೆಯ ಆರೋಪವನ್ನು ಎದುರಿಸಬೇಕಾಯಿತು. ನಂತರ ನ್ಯಾರೊಟಿಕ್ ಪರೀಕ್ಷೆ ನಡೆಸಲಾಯಿತಾದರೂ ಆಟಗಾರರು ಪಾರಾದರು.
ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್
2013ನೇ ಸಾಲಿನ ಆವೃತ್ತಿಯಲ್ಲಿ ದೆಹಲಿ ಪೊಲೀಸರು ಸ್ಪಾಟ್ ಫಿಕ್ಸಿಂಗ್ ಅನುಮಾನದ ಮೇಲೆ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರನ್ನು ಬಂಧಿಸಿದ ನಂತರ ಹೊರಬಿದ್ದ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣ ಕೇವಲ ಐಪಿಎಲ್ಗೆ ಮಾತ್ರವಲ್ಲದೇ ಈಡಿ ಕ್ರೀಡೆಗೆ ಒಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ನಂತರ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯ ಫಿಕ್ಸಿಂಗ್ ಅನುಮಾನ, ಗುರುನಾಥ್ ಮೇಯಪ್ಪನ್, ವಿಂದೂ ದಾರಾ ಸಿಂಗ್ ಬೆಟ್ಟಿಂಗ್ ಪ್ರಕರಣ, ಶ್ರೀಶಾಂತ್, ಅಜಿತ್ ಚಾಂಡಿಲಾ, ಅಂಕಿತ್ ಚೌಹಾಣ್ ಅವರ ಬಂಧನ ಹಾಗೂ ಕ್ರಿಕೆಟ್ನಿಂದ ನಿಷೇಧ ಎಲ್ಲವೂ ಐಪಿಎಲ್ ಪಂದ್ಯಾವಳಿಗಿಂತ ಹೆಚ್ಚಿನ ಸುದ್ದಿ ಮಾಡಿದ್ದು, ನಿರಾಶಾದಾಯಕವಾಯಿತು.
ಶಾರುಖ್ಗೆ ವಾಂಖೆಡೆ ನಿರ್ಬಂಧ
2012ರಲ್ಲಿ ಕೋಲ್ಕತಾ ನೈಟ್ರೈಡರ್ಸ್ ತಂಡದ ಮಾಲೀಕ ಹಾಗೂ ಬಾಲಿವುಡ್ ನಟ ಶಾರುಖ್ ಖಾನ್ ಮುಂಬೈನ ವಾಂಖೆಡೆ ಕ್ರೀಡಾಂಗಣದ ಸಿಬ್ಬಂದಿಯೊಂದಿಗೆ ಜಗಳವಾಡಿ ಕೈ ಮಿಲಾಯಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದರು. ಆನಂತರ ವಾಂಖೆಡೆ ಕ್ರೀಡಾಂಗಣದ ಸಿಬ್ಬಂದಿ ಒತ್ತಡದಿಂದ ಮುಂಬೈ ಕ್ರಿಕೆಟ್ ಸಂಸ್ಥೆ ಶಾರುಖ್ ಖಾನ್ ಅವರನ್ನು ಐದು ವರ್ಷಗಳ ಕಾಲ ವಾಂಖೆಡೆ ಕ್ರೀಡಾಂಗಣಕ್ಕೆ ಯಾವುದೇ ಪಂದ್ಯ ವೀಕ್ಷಿಸಲು ಆಗಮಿಸದಂತೆ ನಿಷೇಧ ಹೇರಿತು.
ಕೆಕೆಆರ್ನಿಂದ ಹೊರಬಿದ್ದ ಗಂಗೂಲಿ
ಆರಂಭಿಕ ಮೂರು ಆವೃತ್ತಿಗಳಲ್ಲಿ ಕೆಕೆಆರ್ ತಂಡದ ಐಕಾನ್ ಆಟಗಾರರಾಗಿದ್ದ ಸೌರವ್ ಗಂಗೂಲಿ ಅವರನ್ನು ತಂಡದಿಂದ ಕೈ ಬಿಡಲಾಯಿತು. ಇದು ಸೌರವ್ ಗಂಗೂಲಿ ಅವರ ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಹಾಗಾಗಿ ತಂಡಕ್ಕೆ ತವರಿನಲ್ಲೇ ಅಭಿಮಾನಿಗಳಿಂದ ಸಂಪೂರ್ಣ ಬೆಂಬಲ ಸಿಗಲಿಲ್ಲ.
ಕಣ್ಮರೆಯಾದ ಕೊಚ್ಚಿ ಟಸ್ಕರ್ಸ್
ಬಿಸಿಸಿಐ ಜತೆಗಿನ ಫ್ರಾಂಚೈಸಿ ಒಡೆತನದ ಒಪ್ಪಂಧದ ನಿಯಮವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕೊಚ್ಚಿ ಟಸ್ಕರ್ಸ್ ತಂಡವನ್ನು ಐಪಿಎಲ್ನಿಂದ ತೆಗೆದು ಹಾಕಲಾಯಿತು. ಬಿಸಿಸಿಐ ಕೇಳಿದ ಬ್ಯಾಂಕ್ ಗ್ಯಾರೆಂಟಿ ಮೊತ್ತವನ್ನು ಪಾವತಿ ಮಾಡುವಲ್ಲಿ ವಿಫಲವಾಗಿತ್ತು. 2011ರ ಸೆಪ್ಟೆಂಬರ್ನಲ್ಲಿ ರದ್ದುಗೊಳಿಸಲಾಯಿತು.
ಲೈಂಗಿಕ ದೌರ್ಜನ್ಯದಲ್ಲಿ ಲ್ಯೂಕ್
2011ರಲ್ಲಿ ಆರ್ಸಿಬಿ ತಂಡಕ್ಕೆ ಸೇರ್ಪಡೆಯಾದ ಲ್ಯೂಕ್ ಪೊಮರ್ಸ್ಬ್ಯಾಚ್,ಅಮೆರಿಕಾ ಮೂಲಕ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಅಡಿಯಲ್ಲಿ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದು, ವಿವಾದ ತೀವ್ರ ಸ್ವರೂಪ ಪಡೆಯಿತು.
ಜಡೇಜಾಗೆ ಒಂದು ಆವೃತ್ತಿ ನಿಷೇಧ
ರವೀಂದ್ರ ಜಡೇಜಾ ಅವರನ್ನು 2010ರ ಆವೃತ್ತಿಯಲ್ಲಿ ನಿಷೇಧದ ಶಿಕ್ಷೆ ನೀಡಲಾಗಿತ್ತು. ಆರಂಭಿಕ 2 ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಜಡೇಜಾ ನಂತರ ಆರ್ಆರ್ ತಂಡಕ್ಕೆ ಮಾಹಿತಿ ನೀಡದೇ, ಮತ್ತೊಂದು ತಂಡಕ್ಕೆ ಸೇರಲು ಮುಂದಾಗಿದ್ದರಿಂದ ಜಡೇಜಾಗೆ 1 ಆವೃತ್ತಿ ನಿಷೇಧಿಸಲಾಯಿತು.