ಕದನ ಕಲಿಗಳು
ಐಪಿಎಲ್ನಲ್ಲಿ ಹೆಚ್ಚು ಮನರಂಜನೆ ನೀಡುವ ತಂಡ ಎಂಬ ಖ್ಯಾತಿ ಪಡೆದಿರುವ ಆರ್ಸಿಬಿ, ಮತ್ತೊಮ್ಮೆ ಅಭಿಮಾನಿಗಳಿಗೆ ಮೈನವಿರೇಳಿಸುವಂತಹ ಪ್ರದರ್ಶನ ನೀಡಲು ಸಜ್ಜಾಗಿದೆ.
ಐಪಿಎಲ್ನಲ್ಲಿ ಹೆಚ್ಚು ಮನರಂಜನೆ ನೀಡುವ ತಂಡ ಎಂಬ ಖ್ಯಾತಿ ಪಡೆದಿರುವ ಆರ್ಸಿಬಿ, ಮತ್ತೊಮ್ಮೆ ಅಭಿಮಾನಿಗಳಿಗೆ ಮೈನವಿರೇಳಿಸುವಂತಹ ಪ್ರದರ್ಶನ ನೀಡಲು ಸಜ್ಜಾಗಿದೆ. ತಂಡ ಇದುವರೆಗೂ ಪ್ರಶಸ್ತಿ ಗೆಲ್ಲದಿದ್ದರೂ, ತಮ್ಮ ರೋಚಕ ಪಂದ್ಯಗಳಿಂದ ಅಭಿಮಾನಿಗಳ ಮನಸೂರೆ ಮಾಡಿದೆ.
ಈ ಬಾರಿ ತಮ್ಮ ಪ್ರಶಸ್ತಿಯ ದಾಹವನ್ನು ನೀಗಿಸಿಕೊಳ್ಳುವ ಅಂಬಲದೊಂದಿಗೆ ಕಣಕ್ಕಿಳಿಯುತ್ತಿರುವ ಆರ್ಸಿಬಿ, ಮತ್ತೆ ಅಭಿಮಾನಿಗಳಿಗೆ ತಮ್ಮ ಆಟದ ಮೂಲಕ ರೋಚಕ ಕ್ಷಣಗಳನ್ನು ಅನುಭವಿಸುವ ಅವಕಾಶ ನೀಡುವ ನಿರೀಕ್ಷೆ ಇದೆ. ಹಾಗಾಗಿ ಈ ಬಾರಿ ತಂಡದ ಕೆಲ ಪ್ರಮುಖ ಆಟಗಾರರ ಕಿರು ಪರಿಚಯ ನೀಡುವ ಪ್ರಯತ್ನ ಇಲ್ಲಿದೆ.
ವಿರಾಟ್ ಕೊಹ್ಲಿ
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ಈ ಬಾರಿಯೂ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ಇವರ ಆಕ್ರಮಣಕಾರಿ ಮನೋಭಾವ ತಂಡ ಉತ್ತಮ ಪ್ರದರ್ಶನ ನೀಡಲು ಪ್ರೇರೆಪಿಸುತ್ತದೆ. ಇನ್ನು ಬ್ಯಾಟಿಂಗ್ನಲ್ಲಿ ರನ್ ಹೊಳೆ ಹರಿಸುವ ಮೂಲಕ ತಂಡದ ಆಧಾರವಾಗಲಿದ್ದಾರೆ.
ಎಬಿ ಡಿವಿಲಿಯರ್ಸ್
ಐಪಿಎಲ್ನ ಮತ್ತೋರ್ವ ಆಕರ್ಷಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಸಹ ಉತ್ತಮ ಮ್ಯಾಚ್ ವಿನ್ನರ್ ಆಗಿದ್ದು, ತಂಡವನ್ನು ಏಕಾಂಗಿಯಾಗಿ ಜಯದತ್ತಕೊಂಡೊಯ್ಯುವ ಸಾಮರ್ಥರ್ಯ ಹೊಂದಿದ್ದಾರೆ. ಅವರ ವಿಭಿನ್ನ ಶೈಲಿಯ ಹೊಡೆತಗಳು ಎದುರಾಳಿ ತಂಡಕ್ಕೆ ಗೊಂದಲ ಮೂಡಿಸಿದರೆ, ಅಭಿಮಾನಿಗಳನ್ನು ರಜಿಸುತ್ತದೆ.
ಆಲ್ಬಿ ಮಾರ್ಕೆಲ್
ದಕ್ಷಿಣ ಆಫ್ರಿಕಾ ತಂಡದ ಆಲ್ರೌಂಡರ್ ಆಲ್ಬಿ ಮಾರ್ಕೆಲ್ ಈ ಬಾರಿ ಆರ್ಸಿಬಿ ತಂಡಕ್ಕೆ ಆಗಮಿಸಿರುವುದು ತಂಡದ ಆಲ್ರೌಂಡ್ ವಿಭಾಗಕ್ಕೆ ಹೆಚ್ಚಿನ ಬಲ ತುಂಬಿದೆ. ಆರು ಆವೃತ್ತಿಯಲ್ಲಿ ಸಿಎಸ್ಕೆ ತಂಡದ ಪರ ಸಾಕಷ್ಟು ಉತ್ತಮ ಪ್ರದರ್ಶನ ನೀಡಿದ್ದು, ಅದೇ ಪ್ರದರ್ಶನ ಮುಂದುವರಿಸಿದರೆ, ತಂಡದ ಬಲ ಇಮ್ಮಡಿಗೊಳ್ಳಲಿದೆ.
ಯುವರಾಜ್ ಸಿಂಗ್
ಈ ಬಾರಿ ಆರ್ಸಿಬಿ ತಂಡ ಹರಾಜು ಪ್ರಕ್ರಿಯೆಯಲ್ಲಿ ತಮ್ಮ ಹಠ ಬಿಡದೇ ತಂಡಕ್ಕೆ ಸೇರಿಸಿಕೊಂಡಿರುವ ಆಟಗಾರ. ಭಾರತ ತಂಡ ಅತ್ಯುತ್ತಮ ಮ್ಯಾಚ್ ಫಿನಿಷರ್ ಆಗಿರುವ ಯುವರಾಜ್ ಆಲ್ರೌಂಡರ್ ಆಗಿದ್ದು, ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ರವಿ ರಾಮ್ಪಾಲ್
ವೆಸ್ಟ್ ಇಂಡೀಸ್ನ ಮಧ್ಯಮ ವೇಗದ ಬೌಲರ್ ರವಿ ರಾಮ್ಪಾಲ್, ಅತ್ಯುತ್ತಮ ಟಿ20 ಬೌಲರ್ ಆಗಿದ್ದು, ಕಳೆದ ಬಾರಿ ತಂಡಕ್ಕೆ ಮಹತ್ವದ ಕಾಣಿಕೆ ನೀಡಿದ್ದಾರೆ. ಬ್ಯಾಟಿಂಗ್ನಲ್ಲೂ ಸ್ವಲ್ಪ ನಿಯಂತ್ರಣ ಸಾಧಿಸಿರುವ ರಾಮ್ಪಾಲ್ ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ತಂಡಕ್ಕೆ ಆಧಾರವಾಗುವ ಸಾಮರ್ಥ್ಯ ಹೊಂದಿದ್ದಾರೆ.
ಮುತ್ತಯ್ಯ ಮುರಳಿಧರನ್
ಸ್ಪಿನ್ ದಂತಕತೆ ಮುತ್ತಯ್ಯ ಮುರಳಿಧರನ್ ಈ ಬಾರಿಯೂ ಆರ್ಸಿಬಿ ತಂಡಕ್ಕೆ ಮರಳಿದ್ದು, ಸ್ಪಿನ್ ವಿಭಾಗದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ. ಮುರಳಿ ಒಂದುವೇಳೆ ತಂಡದಲ್ಲಿ ಆಡದಿದ್ದರೂ ತಂಡದಲ್ಲಿರುವ ಯುವ ಸ್ಪಿನ್ನರ್ಗಳಿಗೆ ಉತ್ತಮ ಮಾರ್ಗದರ್ಶಕರಾಗಿ ಮಹತ್ವದ ಪಾತ್ರ ನಿರ್ವಹಿಸುವ ನಿರೀಕ್ಷೆ ಇದೆ.
ಪಾರ್ಥೀವ್ ಪಟೇಲ್
ಕಳೆದ ಕೆಲ ಆವೃತ್ತಿಗಳಲ್ಲಿ ಸನ್ರೈಸರ್ಸ್ ತಂಡದ ಪರ ಆಡಿದ್ದ ಪಾರ್ಥೀವ್, ಶಿಖರ್ ಧವನ್ ಜತೆ ತಂಡಕ್ಕೆ ಉತ್ತಮ ಆರಂಭ ನೀಡಿ ಗಮನ ಸೆಳೆದಿದ್ದರು. ಅಲ್ಲದೆ ಮಧ್ಯಮ ಕ್ರಮಾಂಕದಲ್ಲೂ ಇವರು ಆಡುವ ಸಾಮರ್ಥ್ಯ ಹೊಂದಿರುವುದು ತಂಡಕ್ಕೆ ನೆರವಾಗಲಿದೆ.
ವಿಜಯ್ ಜೋಲ್
ಭಾರತ 19 ವರ್ಷದೊಳಗಿನ ತಂಡದ ನಾಯಕನಾಗಿರುವ ವಿಜಯ್ ಜೋಲ್, ಈ ಹಿಂದೆಯೂ ಆರ್ಸಿಬಿ ತಂಡದಲ್ಲಿದ್ದರು. ಇತ್ತೀಚಿನ ದಿನಗಳಲ್ಲಿ ಉತ್ತಮ ಫಾರ್ಮ್ನಲ್ಲಿರುವ ಜೋಲ್, ಕ್ರಿಸ್ ಗೇಯ್ಲ್ ಜತೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ.
ಮಿಚೆಲ್ ಸ್ಟಾರ್ಕ್
ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್, ಉತ್ತಮ ವೇಗದ ಬೌಲರ್ ಆಗಿದ್ದು, ತಂಡದ ಬೌಲಿಂಗ್ ವಿಭಾಗದ ಅಸ್ತ್ರವಾಗಲಿದ್ದಾರೆ. ಬಿಗ್ಬ್ಯಾಷ್ನಂತಹ ಪ್ರಮುಖ ಟಿ20 ಪಂದ್ಯಾವಳಿಯಲ್ಲಿ ಆಡಿರುವ ಅನುಭವ ಆರ್ಸಿಬಿ ತಂಡಕ್ಕೆ ನೆರವಾಗಲಿದೆ. ಅಲ್ಲದೆ ಇವರು ಸಹ ಬ್ಯಾಟಿಂಗ್ ಮಾಡುವ ಸಾಮರ್ಥ್ಯಹೊಂದಿದ್ದೂ, ಎರಡೂ ವಿಭಾಗದಲ್ಲೂ ತಂಡಕ್ಕೆ ಕಾಣಿಕೆ ನೀಡಬಹುದು.
ವರುಣ್ ಎರಾನ್
ಭಾರತ ತಂಡದ ಭರವಸೆಯ ವೇಗದ ಬೌಲರ್ ಆಗಿರುವ ವರುಣ್ ಎರಾನ್, ಈ ಹಿಂದೆ ಡೆಲ್ಲಿ ಡೇರ್ಡೆವಿಲ್ಸ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ತಂಡದಲ್ಲಿ ಹೆಚ್ಚಿನ ಮಂದಿ ಭಾರತದ ಆಟಗಾರರು ಇರಲೇಬೇಕಾದ ಹಿನ್ನಲೆಯಲ್ಲಿ ಬೌಲಿಂಗ್ ವಿಭಾಗಕ್ಕೆ ಪ್ರಮುಖವಾಗಲಿದ್ದಾರೆ.
ಶದಾಬ್ ಜಕಾಟಿ
ಎಡಗೈ ಸ್ಪಿನ್ನರ್ ಆಗಿರುವ ಶದಾಬ್ ಜಕಾಟಿ, ಸಿಎಸ್ಕೆ ತಂಡದ ಪರ ಕೆಲವು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಬಾರಿಯಿಂದ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದು, ಹಿರಿಯ ಸ್ಪಿನ್ನರ್ ಡೇನಿಯಲ್ ವೆಟೋರಿ ಸ್ಥಾನ ತುಂಬುವ ಜವಾಬ್ದಾರಿ ಅವರ ಮೇಲಿದೆ.
ಅಬು ನಚಿಮ್ ಅಹ್ಮದ್
ಮಧ್ಯಮ ವೇಗದ ಬೌಲರ್ ಆಗಿರುವ ನಚಿಮ್, ಚೆಂಡನ್ನು ಎರಡೂ ಕಡೆಯೂ ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಜತೆಗೆ ಹೆಚ್ಚಿನ ವೇಗವನ್ನು ಹೊಂದಿದ್ದಾರೆ ಕಳೆದ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದ ನಚಿಮ್ ಉತ್ತಮ ಪ್ರದರ್ಶನ ನೀಡಿದ್ದರು. ಹಾಗಾಗಿ ತಂಡಕ್ಕೆ ಆಧಾರ ನಿಲ್ಲುವ ನಿರೀಕ್ಷೆ ಇವರ ಮೇಲಿದೆ.
ಹರ್ಷದ್ ಪಟೇಲ್
ರಣಜಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮಧ್ಯಮ ವೇಗದ ಬೌಲರ್ ಹರ್ಷದ್ ಪಟೇಲ್, ಈ ಬಾರಿಯು ತಂಡಕ್ಕೆ ಮರಳಿದ್ದಾರೆ. ಆರ್ಸಿಬಿ ತಂಡದ ಭಾರತೀಯ ಬೌಲರ್ಗಳ ಅಸ್ತ್ರಗಳಲ್ಲಿ ಒಬ್ಬರಾಗಿದ್ದು, ತಂಡಕ್ಕೆ ಉತ್ತಮ ಕಾಣಿಕೆ ನೀಡುವ ಜವಾಬ್ದಾರಿ ಇವರ ಮೇಲಿದೆ. ಅಲ್ಲದೆ ಈ ಹಿಂದಿನ ಆವೃತ್ತಿಗಳಲ್ಲಿ ಹರ್ಷದ್ ಆರ್ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ.
ಕ್ರಿಸ್ ಗೇಯ್ಲ್
ಕಳೆದ ಮೂರು ಆವೃತ್ತಿಗಳಲ್ಲಿ ಆರ್ಸಿಬಿ ತಂಡದ ಯಶಸ್ಸಿನ ಭಾಗವಾಗಿರುವ ವೆಸ್ಟ್ ಇಂಡೀಸ್ನ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಯ್ಲ್. ಈ ಬಾರಿಯೂ ಅದೇ ಮಿಂಚಿನ ಪ್ರದರ್ಶನದೊಂದಿಗೆ ಅಭಿಮಾನಿಗಳನ್ನು ರಂಜಿಸುವ ನಿರೀಕ್ಷೆಗಳಿವೆ. ಗೇಯ್ಲ್ ಅಬ್ಬರಿಸಿದರೆ ಎದುರಾಳಿ ತಂಡ ತಲೆ ಬಾಗಲೇಬೇಕು.
ಅಶೋಕ್ ದಿಂಡಾ
ದಿಂಡಾ ಆರ್ಸಿಬಿ ತಂಡದ ಮತ್ತೊಬ್ಬ ವೇಗದ ಬೌಲರ್ ಆಗಿದ್ದು, ಪ್ರಸಕ್ತ ರಣಜಿ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಹಿಂದೆ ಕೆಕೆಆರ್, ಪುಣೆ ವಾರಿಯರ್ಸ್ ತಂಡಗಳ ಪರ ಆಡಿದ್ದ ದಿಂಡಾ, ತಂಡಕ್ಕೆ ನೆರವಾಗುವ ಸಾಮರ್ಥ್ಯ ಹೊಂದಿದ್ದಾರೆ.
ಸಂದೀಪ್ ವಾರಿಯರ್
ಕಳೆದ ರಣಜಿ ಋತುವಿನಲ್ಲಿ ಗಮನಾರ್ಹ ಬೌಲಿಂಗ್ ಪ್ರದರ್ಶನ ನೀಡಿರುವ ಸಂದೀಪ್, ಈ ಹಿಂದೆಯೂ ಆರ್ಸಿಬಿ ತಂಡದ ಭಾಗವಾಗಿದ್ದರು. ಇಲ್ಲಿಯವರೆಗೂ ಹೆಚ್ಚಿನ ಪಂದ್ಯಗಳಲ್ಲಿ ಆಡದಿದ್ದರೂ, ಈ ಬಾರಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ.
ನಿಕ್ ಮ್ಯಾಡಿನ್ಸನ್
ಆಸ್ಟ್ರೇಲಿಯಾದ ಯುವ ಬ್ಯಾಟ್ಸ್ಮನ್ ಆಗಿರುವ ನಿಕ್ ಮ್ಯಾಡಿನ್ಸನ್, ಆಯ್ಕೆ ಗಮನ ಸೆಳೆದಿದೆ. ಬಿಗ್ಬ್ಯಾಷ್ನಂತಹ ಟಿ20 ಪಂದ್ಯಾವಳಿಯಲ್ಲಿ ಆಡಿದ ಅನುಭವ ಹೊಂದಿರುವ ನಿಕ್, ಪ್ರದರ್ಶನ ಕುತೂಹಲ ಮೂಡಿಸಿದೆ.
ಉಳಿದಂತೆ.....
ಬ್ಯಾಟ್ಸ್ಮನ್ಗಳಾದ ತನ್ಮಯ್ ಮಿಶ್ರಾ, ಯೋಗೆಶ್ ಟಕವಾಲೆ, ಸಚಿನ್ ರಾಣಾ ಮತ್ತು ಯುಜ್ವೆಂದ್ರ ಚಾಹಲ್ ಸಹ ಆರ್ಸಿಬಿ ತಂಡದಲ್ಲಿರುವಪ್ರತಿಭಾನ್ವಿತ ಆಟಗಾರರಾಗಿದ್ದಾರೆ.