ಹಗರಣಗಳ ವಿಚಾರಣೆಗೆ ವಿಶೇಷ ಘಟಕ
ನವದೆಹಲಿ: ಕ್ರೀಡೆಯಲ್ಲಿ ಫಿಕ್ಸಿಂಗ್ ಸೇರಿದಂತೆ ಇತರೆ ಕಾನೂನುಬಾಹೀರ ಪ್ರಕರಣಗಳನ್ನು ತನಿಖೆ ನಡೆಸುವ ನಿಟ್ಟಿನಲ್ಲಿ ಸಿಬಿಐ, ಕ್ರೀಡಾ ಭದ್ರತಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದೆ.
ಕ್ರೀಡಾ ಸಂಸ್ಥೆಗಳು ಹಾಗೂ ಕಾನೂನು ಸಂಸ್ಥೆಗಳ ಸಹಯೋಗದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ನಡೆಯುವ ಕಳ್ಳಾಟದ ಪ್ರಕರಣವನ್ನು ತನಿಖೆ ನಡೆಸುವುದು, ಫಿಕ್ಸಿಂಗ್‌ನಂತಹ ಕಾನೂನು ಬಾಹೀರ ಪ್ರಕ್ರಿಯೆಯನ್ನು ತಡೆಯುವುದು, ಈ ಕ್ರೀಡಾ ಭದ್ರತಾ ಘಟಕದ ಪ್ರಮುಖ ಉದ್ದೇಶವಾಗಿದೆ ಎಂದು ಸಿಬಿಐ ನಿರ್ದೇಶಕರಾಗಿರುವ ರಂಜಿತ್ ಸಿನ್ಹಾ ತಿಳಿಸಿದ್ದಾರೆ.
ಪ್ರಸ್ತುತ ಅಮೆರಿಕಾದಲ್ಲಿ ಫೆಡರಲ್ ಬ್ಯೂರೊ ಆಫ್ ಇನ್‌ವೆಟಿಗೇಶನ್(ಎಫ್‌ಬಿಐ), ಆಸ್ಟ್ರೇಲಿಯಾದಲ್ಲಿ ಫೆಡರಲ್ ಪೊಲೀಸ್ ಮತ್ತು ಯೂರೋಪ್‌ನ ಕೆಲವು ರಾಷ್ಟ್ರಗಳಲ್ಲಿ ಕ್ರೀಡೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ಘಟಕವನ್ನು ಸ್ಥಾಪಿಸಲಾಗಿದೆ. ಈ ಕ್ರಮದಿಂದ ಭಾರತವೂ ಸಹ ಕ್ರೀಡೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ಘಟಕವನ್ನು ಸ್ಥಾಪಿಸಿದಂತಾಗುತ್ತದೆ ಎಂದು ತಿಳಿಸಿದರು.