ಅಂತಿಮ ಸುತ್ತಿನಲ್ಲಿ ಸೋತ ಗುಪ್ತಾ
ದುಬೈ: ಗ್ರ್ಯಾಂಡ್ಮಾಸ್ಟರ್ ಮತ್ತು ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ಅಭಿಜೀತ್ ಗುಪ್ತಾ ಅವರು, 16ನೇ ದುಬೈ ಅಂತಾರಾಷ್ಟ್ರೀಯ ಓಪನ್ ಚೆಸ್ ಪಂದ್ಯಾವಳಿಯ ಅಂತಿಮ ಮತ್ತು 9ನೇ ಸುತ್ತಿನಲ್ಲಿ ಸೋಲನುಭವಿಸುವ ಮೂಲಕ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಈ ಸೋಲಿನಿಂದ ಗುಪ್ತಾ ಅವರಿಗೆ ಅಗ್ರ ಮೂರರಲ್ಲೂ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಬುಧವಾರ ಮುಕ್ತಾಯಗೊಂಡ ಪಂದ್ಯಾವಳಿಯುದ್ದಕ್ಕೂ ಸಮರ್ಥ ಹೋರಾಟ ನೀಡಿದ್ದ ಗುಪ್ತಾ ಫೈನಲ್ನಲ್ಲಿ ಕೈಚೆಲ್ಲಿದರು. ಇದರೊಂದಿಗೆ 6.5 ಅಂಕಗಳೊಂದಿಗೆ 4ನೇ ಸ್ಥಾನ ಪಡೆದುಕೊಂಡರು. ಇನ್ನು ಅಂತಿಮ ಸುತ್ತಿನಲ್ಲಿ ಅಗ್ರ ಶ್ರೇಯಾಂಕ ಪಡೆದ ಉಕ್ರೇನ್ನ ಅಂತೋನ್ ಕೊರೋಬೋವ್ ಅವರನ್ನು ಸೋಲಿಸಿದ ಫ್ರಾನ್ಸ್ನ ರೋಮೈನ್ ಎಡೋರ್ಡ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಫ್ರಾನ್ಸ್ನ ಗ್ರ್ಯಾಂಡ್ ಮಾಸ್ಟರ್ ಅವರು 8 ಅಂಕಗಳನ್ನು ಪಡೆಯುವ ಮೂಲಕ ಅಗ್ರಸ್ಥಾನ ತಮ್ಮದಾಗಿಸಿಕೊಂಡರು.
ಗುಪ್ತಾ ಅವರೊಂದಿಗೆ ಭಾರತದ ಇತರ ಆಟಗಾರರಾದ ಎಂ.ಆರ್ ಲಲಿತ್ ಬಾಬು ಮತ್ತು ಎಂ. ಶ್ಯಾಮ್ ಸುಂದರ್ ಅವರು ತಲಾ 6 ಅಂಕ ಪಡೆಯುವ ಮೂಲಕ 10ನೇ ಸ್ಥಾನ ಪಡೆದುಕೊಂಡಿದ್ದಾರೆ.