ಬಾಕ್ಸರ್ಗಳ ಉತ್ತಮ ಪ್ರದರ್ಶನ
ನವದೆಹಲಿ: ಭಾರತದ ಉದಯೋನ್ಮುಖ ಮಹಿಳಾ ಬಾಕ್ಸಿಂಗ್ ತಾರೆ ಜಮುನಾ ಬೊರೊ ಅವರು, ಬಲ್ಗೇರಿಯಾದಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಚಾಂಪಿಯನ್ಶಿಪ್ನ ಮಹಿಳೆಯರ ಬಾಕ್ಸಿಂಗ್ನಲ್ಲಿ ಪ್ರೀ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.
ಫೆದರ್ವೇಟ್ 75ಕೆಜಿ ವಿಭಾಗದ ಆರಂಭಿಕ ಪಂದ್ಯದಲ್ಲಿ ಬೊರೊ ಅವರು ಲೆಸೋಥೋ ನಸಿಕೆ ಮೊಫಾಲಾಲಿ ವಿರುದ್ಧ ಜಯ ಸಾಧಿಸುವ ಮೂಲಕ ಬೊರೊ ಪ್ರೀ ಕ್ವಾರ್ಟರ್ಗೆ ಲಗ್ಗೆ ಹಾಕಿದರು. ಆಕ್ರಮಣಕಾರಿ ದಾಳಿ ನಡೆಸಿದ ಭಾರತದ ಆಟಗಾರ್ತಿ ಪಂದ್ಯ ಆರಂಭವಾಗಿ ಕೇವಲ 2 ನಿಮಿಷಗಳಲ್ಲೇ ಎದುರಾಳಿ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಸಾಧಿಸಿದರು. ಅದೇ ರೀತಿಯ ಪ್ರದರ್ಶನವನ್ನು ಮುಂದುವರಿಸಿದ ಬೊರೊ ಲೆಸೋಥೋಗೆ ಯಾವುದೇ ಅವಕಾಶವನ್ನು ನೀಡದೇ ಪಂದ್ಯದಲ್ಲಿ ಗೆಲವು ಕಂಡುಕೊಂಡರು.
ಇದೇ ಮೊದಲ ಬಾರಿಗೆ ಮಹಿಳೆಯರು ಮತ್ತು ಪುರುಷರು ಇಬ್ಬರಿಗೂ ಯೂತ್ ಚಾಂಪಿಯನ್ಶಿಪ್ನಲ್ಲಿ ಅವಕಾಶ ನೀಡಲಾಗಿದೆ. ಪುರುಷರ ವಿಭಾಗದಲ್ಲೂ ಭಾರತದ ಬಾಕ್ಸರ್ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತದ ಸಂದೀಪ್ ಕುಮಾರ್ (60ಕೆಜಿ) ಅವರು ಲಟ್ವೀಯಾದ ರಾಲ್ಫ್ಸ್ ಆಸ್ಮಾನಿಸ್ ಅವರನ್ನು 3-0 ಅಂತರದಿಂದ ಪರಾಭವಗೊಳಿಸಿದರು. ಈಗ ಸಂದೀಪ್, ಚೆಕ್ ಗಣರಾಜ್ಯದ ಲೂಕಾಸ್ ಡೆಕೀಸ್ ಅವರನ್ನು ಎದುರಿಸಲಿದ್ದಾರೆ.
ಇದಕ್ಕೂ ಮುನ್ನ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದ ಗೌರವ್ ಸೋಲಂಕಿ (52ಕೆಜಿ) ಮತ್ತು ನೀಲ್ ಕಮಲ್ ಸಿಂಗ್ (75ಕೆಜಿ) ಅವರು ಮೊದಲ ಸುತ್ತಿನಲ್ಲಿ ಬೈ ಪಡೆದ ನಾಲ್ವರು ಭಾರತದ ಬಾಕ್ಸರ್ಗಳಲ್ಲಿ ಸೇರಿದ್ದಾರೆ. ಈ ಪಂದ್ಯಾವಳಿ, ಚೀನಾದ ನಾಂಜಿಂಗ್ನಲ್ಲಿ ಆಗಸ್ಟ್ 16ರಿಂದ 28ರವರೆಗೆ ನಡೆಯಲಿರುವ ಯೂತ್ ಒಲಿಂಪಿಕ್ಸ್ ಕ್ರೀಡಾಕೂಟದ ಅರ್ಹತಾ ಸುತ್ತಿನ ಪಂದ್ಯಾವಳಿಯಾಗಿದೆ.ಮಂಜೀತ್ (69ಕೆಜಿ) ಮಂಜು ಬೊಬಾರಿಯಾ (75ಕೆಜಿ) ಪಂದ್ಯಾವಳಿಯಲ್ಲಿ ಬೈ ಪಡೆದ ಭಾರತ ಇನ್ನಿಬ್ಬರು ಬಾಕ್ಸರ್ಗಳಾಗಿದ್ದಾರೆ.