ಐಪಿಎಲ್ ಡೋಪಿಂಗ್ ಅಧಿಕಾರಿಯಾಗಿ ಚಂದ್ರನ್
ದುಬೈ: ಕ್ರೀಡಾ ವೈದ್ಯಕೀಯ ತಜ್ಞ ಡಾ. ಪಿಎಸ್ಎಂ ಚಂದ್ರನ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬಿಸಿಸಿಐನ ಡೋಪಿಂಗ್ ನಿಗ್ರಹ ಘಟಕದ ಅಧಿಕಾರಿಯಾಗಿ ಗುರುವಾರ ನೇಮಕ ಮಾಡಲಾಗಿದೆ. ದುಬೈನಲ್ಲಿ ನಡೆಯಲಿರುವ ಮೊದಲ ಹಂತದ ಐಪಿಎಲ್ ಪಂದ್ಯಾವಳಿಯಲ್ಲಿ ಡೋಪಿಂಗ್ ಪ್ರಕರಣಗಳ ಕುರಿತು ಅವರು ಕಾರ್ಯನಿರ್ವಹಿಸಲಿದ್ದಾರೆ.
ಬಿಸಿಸಿಐ ಮತ್ತು ಸ್ವೀಡನ್ನಲ್ಲಿರುವ ಅಂತಾರಾಷ್ಟ್ರೀಯ ಡೋಪಿಂಗ್ ಪರೀಕ್ಷಾ ಮತ್ತು ಆಡಳಿತ ಮಂಡಳಿ (ಐಡಿಟಿಎಂ) ಜಂಟಿಯಾಗಿ ಚಂದ್ರನ್ ಅವರನ್ನು ನೇಮಕ ಮಾಡಿವೆ.
'ದುಬೈ, ಶಾರ್ಜಾ ಹಾಗೂ ಅಬು ಧಾಬಿಯಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳಲ್ಲಿ ಭಾಗವಹಿಸುವ ಆಟಗಾರರ ಡೋಪಿಂಗ್ ಪರೀಕ್ಷೆಯನ್ನು ಅವರು ನಡೆಸಲಿದ್ದಾರೆ. ಇದೇ ಮೊದಲ ಬಾರಿಗೆ ಐಡಿಟಿಎಂ ಭಾರತೀಯ ವೈದ್ಯರೊಬ್ಬರನ್ನು ಡೋಪಿಂಗ್ ಸೇವೆಗೆ ನೇಮಕ ಮಾಡಿಕೊಂಡಿದೆ' ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.