ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪಂಜಾಬ್‌ಗೆ ಸಿಎಸ್‌ಕೆ ಸವಾಲು

Srinivasa Murthy VN
Updated On : 18 Apr 2014, 12:03 pm

ಅಬುಧಾಬಿ: ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ತಬ್ಬಿಬ್ಬಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಐಪಿಎಲ್ 7ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಲು ಸಿದ್ಧವಾಗಿದೆ.ಈಗಾಗಲೇ ಎರಡು ಬಾರಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿರುವ ಚೆನ್ನೈ, ಕಳೆದ ಮೂರು ಆವೃತ್ತಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಆದರೆ, ಕಳೆದ ಆವೃತ್ತಿಯಲ್ಲಿ ತನ್ನ ಆಡಳಿತ ಮಂಡಳಿಯ ಸದಸ್ಯರು ಮತ್ತು ಕೆಲ ಆಟಗಾರರ ಹೆಸರುಗಳು ಫಿಕ್ಸಿಂಗ್ ಪ್ರಕರಣದಲ್ಲಿ ಕೇಳಿಬಂದಿರುವ ಹಿನ್ನೆಲೆಯಲ್ಲಿ ತಂಡದ ಮೇಲೆ ಕರಿನೆರಳು ಬಿದ್ದಿದೆ.
ಆದರೆ, ಕ್ರೀಡಾಂಗಣದ ಹೊರಗಿನ ವಿಷಯಗಳು ತಂಡದ ಪ್ರದರ್ಶನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂಬುದು ತಂಡದ ಕೋಚ್ ಸ್ಟೆಫೆನ್ ಫ್ಲೆಮಿಂಗ್ ಅವರ ವಿಶ್ವಾಸವಾಗಿದೆ.
ಆದರೆ, ಈ ಋತುವಿನಲ್ಲಿ ಚೆನ್ನೈ ತಂಡ, ತನ್ನ ಇಬ್ಬರು ಪ್ರಮುಖ ಆಟಗಾರರಾದ ಆಸ್ಟ್ರೇಲಿಯಾದ ಮೈಕೆಲ್ ಹಸ್ಸಿ ಮತ್ತು ದಕ್ಷಿಣ ಆಫ್ರಿಕಾದ ಅಲ್ಬೀ ಮಾರ್ಕೆಲ್ ಅವರನ್ನು ಕಳೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕಳೆದುಕೊಂಡಿದೆ. ಅವರ ಸ್ಥಾನದಲ್ಲಿ ನ್ಯೂಜಿಲೆಂಡ್ ಬ್ರೆಂಡನ್ ಮೆಕಲಂ ಮತ್ತು ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಅವರು ಚೆನ್ನೈಗೆ ಆಸರೆಯಾಗುವ ನಿರೀಕ್ಷೆಗಳಿವೆ.
ಬೌಲಿಂಗ್ ವಿಭಾಗದಲ್ಲಿ ವೆಸ್ಟ್ ಇಂಡೀಸ್‌ನ ಸ್ಪಿನ್ನರ್ ಸ್ಯಾಮುಯಲ್ ಬದ್ರಿ ಅವರು ಚೆನ್ನೈ ಪರ ಉತ್ತಮ ಪ್ರದರ್ಶನ ನೀಡುವ ಪ್ರಮುಖ ಬೌಲರ್ ಎನಿಸಿದ್ದಾರೆ. ಅಲ್ಲದೆ, ಇತ್ತೀಚೆಗಷ್ಟೇ ನಡೆದ ಟಿ20 ವಿಶ್ವಕಪ್‌ನಲ್ಲಿ ಬದ್ರಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಇನ್ನೊಂದೆಡೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸಮತೋಲನದಿಂದ ಕೂಡಿದೆ. ಆಸ್ಟ್ರೇಲಿಯಾದ ಜಾರ್ಜ್ ಬೇಯ್ಲಿ ನಾಯಕತ್ವದ ತಂಡಕ್ಕೆ, ಭಾರತ ತಂಡದಿಂದ ಹೊರಗುಳಿದಿರುವ ವೀರೇಂದ್ರ ಸೆಹ್ವಾಗ್ ಯಾವ ರೀತಿ ಸಾಥ್ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಜಾನ್ಸನ್ ಪಂಜಾಬ್ ತಂಡಕ್ಕೆ ನೆರವಾಗಲಿದ್ದಾರೆ. ಇತ್ತೀಚೆಗೆ ಭಾರೀ ಫಾರ್ಮ್‌ನಲ್ಲಿರುವ ಮಿಚೆಲ್ ಜಾನ್ಸನ್ ಅವರನ್ನು ರು. 6.5 ಕೋಟಿ ಹಣ ನೀಡಿ ಖರೀದಿಸಲಾಗಿದೆ.ಇದರೊಂದಿಗೆ ಶಾನ್ ಮಾರ್ಷ್ ಅವರನ್ನು ಉಳಿಸಿಕೊಳ್ಳುವಲ್ಲಿ ತಂಡ ಯಶಸ್ವಿಯಾಗಿದೆ. ಮಾರ್ಷ್ ಫಿಟ್ ಆಗಿದ್ದು ತಂಡಕ್ಕೆ ಆಸರೆಯಾಗಲಿದ್ದಾರೆ.
ತಂಡಗಳು: ಚೆನ್ನೈ ಸೂಪರ್ ಕಿಂಗ್ಸ್: ಎಂ.ಎಸ್ ಧೋನಿ (ನಾಯಕ), ಸುರೇಶ್ ರೈನಾ, ಆರ್. ಅಶ್ವಿನ್, ರವೀಂದ್ರ ಜಡೇಜಾ, ಡ್ವೈನ್ ಬ್ರಾವೋ, ಫಫ್ ಡು ಪ್ಲೆಸಿಸ್, ಬ್ರೆಂಡನ್ ಮೆಕಲಂ, ಡ್ವೈನ್ ಸ್ಮಿತ್, ಆಶಿಶ್ ನೆಹ್ರಾ, ಮೋಹಿತ್ ಶರ್ಮಾ, ಸ್ಯಾಮುಯಲ್ ಬದ್ರಿ, ಬೆನ್ ಹಿಲ್ಫೆನ್ಹಾಸ್, ಮ್ಯಾಟ್ ಹೆನ್ರೀ, ಬಾಬಾ ಅಪರಾಜೀತ, ಮಿಥುನ್ ಮನ್ಹಾಸ್, ಈಶ್ವರ ಪಾಂಡೆ, ಪವನ್ ನೇಗಿ, ವಿಜಯ್ ಶಂಕರ್, ರೋನಿತ್ ಮೋರೆ, ಜೋಹಾನ್ ಹಾಸ್ಟಿಂಗ್ಸ್.
ಕಿಂಗ್ಸ್ ಇಲೆವೆನ್ ಪಂಜಾಬ್: ಜಾರ್ಜ್ ಬೇಯ್ಲಿ (ನಾಯಕ), ಡೇವಿಡ್ ಮಿಲ್ಲರ್, ಮನ್ ವೋಹ್ರಾ, ವೀರೇಂದ್ರ ಸೆಹ್ವಾಗ್, ಮಿಚೆಲ್ ಜಾನ್ಸನ್, ಚೇತೇಶ್ವರ ಪೂಜಾರ, ಶಾನ್ ಮಾರ್ಷ್, ವೃದ್ಧಿಮಾನ್ ಸಾಹಾ, ತಿಸರಾ ಪೆರೇರಾ, ಗ್ಲೆನ್ ಮೆಕ್ಸ್‌ವೆಲ್, ರಿಶಿ ಧವನ್, ಅನುರೀತ್ ಸಿಂಗ್, ಸಂದೀಪ್ ಶರ್ಮಾ, ಅಕ್ಷರ ಪಟೇಲ್, ಬೀಯರ್ನ್ ಹೆಂಡ್ರಿಕ್ಸ್, ಕರಣ್‌ವೀರ್ ಸಿಂಗ್, ಮುರಳಿ ಕಾರ್ತಿಕ್, ಶಿವಮ್ ಶರ್ಮಾ, ಶಾರ್ದೂಲ್ ಠಾಕೂರ್, ಎಲ್. ಬಾಲಾಜಿ,  ಪರ್ವಿಂದರ್ ಅವಾನಾ, ಗುರುಕೀರತ್ ಸಿಂಗ್ ಮನ್, ಮಂದೀಪ್ ಸಿಂಗ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement