ಪ್ರಶಸ್ತಿ ಹಾದಿಯಲ್ಲಿ ಬಿಎಫ್ಸಿ
ಬೆಂಗಳೂರು: ಇದೇ ಮೊದಲ ಬಾರಿಗೆ ಐ-ಲೀಗ್ ಪಂದ್ಯಾವಳಿಗೆ ಪಾದಾರ್ಪಣೆ ಮಾಡಿದ ಬೆಂಗಳೂರು ಫುಟ್ಬಾಲ್ ಕ್ಲಬ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಇನ್ನೊಂದು ಪಂದ್ಯದಲ್ಲಿ ಜಯ ಕಾಣಬೇಕಿದೆ. ಪ್ರಸಕ್ತ ಋತುವಿನಲ್ಲಿ ಬಿಎಫ್ಸಿ ಕೊನೆಯ ಎರಡು ಪಂದ್ಯಗಳನ್ನಾಡಬೇಕಿದೆ. ಈಗ ಸೋಮವಾರ ಮಾರ್ಗೋವಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಂಪೋ ಎಸ್.ಸಿ ವಿರುದ್ಧ ಜಯ ಸಾಧಿಸಿದರೆ, ಅದು ಚಾಂಪಿಯನ್ ಆಗಲಿದೆ.
ಆ್ಯಶ್ಲೆ ವೆಸ್ಟ್ವುಡ್ ಅವರ ಗರಡಿಯಲ್ಲಿ ಪಳಗಿರುವ ಬಿಎಫ್ಸಿ 41 ಅಂಕಗಳನ್ನು ಹೊಂದಿದೆ. ಆದರೆ, ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳಲು ಇನ್ನೂ ಮೂರು ಅಂಕಗಳನ್ನು ಅದು ಗಳಿಸುವ ಅಗತ್ಯವಿದೆ.
ಡೆಂಪೋ ವಿರುದ್ಧ ಗೆದ್ದರೆ, ಆ ತಂಡ ಈಗ 44 ಅಂಕಗಳನ್ನು ಹೊಂದಲಿದೆ. ಎರಡನೇ ಸ್ಥಾನದಲ್ಲಿರುವ ಸಾಲ್ಗಾಂವ್ಕರ್ 38 ಅಂಕಗಳನ್ನು ಹೊಂದಿದ್ದು, ಕೇವಲ ಒಂದು ಪಂದ್ಯವನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ಈಸ್ಟ್ ಬೆಂಗಾಲ್ ತಂಡ 37 ಅಂಕಗಳನ್ನು ಹೊಂದಿದ್ದು, ಎರಡು ಪಂದ್ಯಗಳನ್ನು ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಬೆಂಗಳೂರು ತಂಡಕ್ಕೆ ಚಾಂಪಿಯನ್ ಪಟ್ಟ ತಪ್ಪಿಸಲು ಈ ಎರಡೂ ತಂಡಗಳಿಂದ ಕಷ್ಟಸಾಧ್ಯವಾಗಿ ಪರಿಣಮಿಸಿದೆ.
ಈಸ್ಟ್ ಬೆಂಗಾಲ್ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಸಿತ್ತು. ಆದರೆ, ಚರ್ಚಿಲ್ ಬ್ರದರ್ಸ್ ವಿರುದ್ಧ ಅನುಭವಿಸಿದ ಸೋಲು ಟ್ರೋಫಿ ಗೆಲ್ಲುವ ಕನಸನ್ನು ದೂರ ಉಳಿಸಿತು. ಆದಾಗ್ಯೂ, ಪ್ರಶಸ್ತಿ ಗೆಲ್ಲಲು ಅವರಿಗೆ ಇನ್ನೂ ಅವಕಾಶವಿದೆ.
ಈಸ್ಟ್ ಬೆಂಗಾಲ್ ಪ್ರಶಸ್ತಿ ಗೆಲ್ಲಬೇಕಾದರೆ, ಉಳಿದಿರುವ ತನ್ನ ಎರಡು ಪಂದ್ಯಗಳಲ್ಲಿ ಅದು ಗೆಲ್ಲಬೇಕು. ಅಲ್ಲದೆ, ಬೆಂಗಳೂರು ತಂಡ ತನ್ನ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಬೇಕು. ಆಗ ಮಾತ್ರ ಈಸ್ಟ್ ಬೆಂಗಾಲ್ ಪ್ರಶಸ್ತಿ ಹಾದಿ ಸುಗಮವಾಗಲಿದೆ.
25ನೇ ಸುತ್ತಿನಲ್ಲಿ ಏಪ್ರಿಲ್ 15ರಂದು ನಡೆದ ಪಂದ್ಯದಲ್ಲಿ ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾ ವಿರುದ್ಧ ಸೋಲನುಭವಿಸಿದ ಹಿನ್ನೆಲೆಯಲ್ಲಿ ಸಾಲ್ಗಾಂವ್ಕರ್ ಪ್ರಶಸ್ತಿ ಗೆಲ್ಲುವ ಅವಕಾಶದಿಂದ ವಂಚಿತವಾಯಿತು.