ರಾಯಲ್ ಗರ್ಜನೆ ಹೆದರೋಡಿದ ಡೆವಿಲ್ಸ್
ಸಂಘಟಿತ ಬೌಲಿಂಗ್ ಹಾಗೂ ಯುವರಾಜ್ ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ಗೆ ಬೆದರಿದ ಡೆಲ್ಲಿ ಡೇರ್ಡೆವಿಲ್ಸ್ ತಂಡ ಸೋಲನುಭವಿಸಿದೆ.
ಶಾರ್ಜಾ: ಸಂಘಟಿತ ಬೌಲಿಂಗ್ ಹಾಗೂ ಯುವರಾಜ್ ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ಗೆ ಬೆದರಿದ ಡೆಲ್ಲಿ ಡೇರ್ಡೆವಿಲ್ಸ್ ತಂಡ ಐಪಿಎಲ್ 7ನೇ ಆವೃತ್ತಿಯಲ್ಲಿ ಆರ್ಸಿಬಿ ವಿರುದ್ಧ ಸೋಲನುಭವಿಸಿದೆ. ಈ ಗೆಲವಿನೊಂದಿಗೆ ಆರ್ಸಿಬಿ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ.
ಗುರುವಾರ ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡ ಪಂದ್ಯದಲ್ಲಿ 20 ಎಸೆತ ಬಾಕಿ ಇರುವಂತೆಯೇ ಡೆಲ್ಲಿ ವಿರುದ್ಧ 8 ವಿಕೆಟ್ಗಳ ಗೆಲವು ಸಾಧಿಸಿತು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ ಆರ್ಸಿಬಿ ತಂಡ ಸಂಘಟಿತ ಬೌಲಿಂಗ್ ದಾಳಿ ನಡೆಸುವಲ್ಲಿ ಯಶಸ್ವಿಯಾಯಿತು. ಹಾಗಾಗಿ ಡೆಲ್ಲಿ ಡೇರ್ಡೆವಿಲ್ಸ್ ತಂಡ 20 ಓವರ್ಗಳಲ್ಲಿ 4 ವಿಕೆಟ್ಗೆ 145 ರನ್ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಆರ್ಸಿಬಿ ತಂಡ 16.4 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 146 ರನ್ ದಾಖಲಿಸಿತು.
ಗೇಯ್ಲ್ ಅಲಭ್ಯ: ಈ ಪಂದ್ಯ ಆರ್ಸಿಬಿಯ ಮೊದಲ ಪಂದ್ಯವಾಗಿದ್ದರಿಂದ ಎಲ್ಲರ ನಿರೀಕ್ಷೆ ಗೇಯ್ಲ್ ಮೇಲೆ ನೆಟ್ಟಿತ್ತು. ಆದರೆ ಟಾಸ್ ವೇಳೆ ನಾಯಕ ವಿರಾಟ್ ಕೊಹ್ಲಿ ತಂಡದಲ್ಲಿರುವ ವಿದೇಶಿ ಆಟಗಾರರ ಹೆಸರನ್ನು ಪ್ರಕಟಿಸಿದಾಗ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಏಕೆಂದರೆ ಕೊಹ್ಲಿ ಹೇಳಿದ ನಾಲ್ವರು ವಿದೇಶಿ ಆಟಗಾರರ ಪಟ್ಟಿಯಲ್ಲಿ ಗೇಯ್ಲ್ ಹೆಸರಿರಲಿಲ್ಲ.
ಆನಂತರ ಡೆಲ್ಲಿ ಇನಿಂಗ್ಸ್ ವೇಳೆ ವೀಕ್ಷಕ ವಿವರಣೆಗಾರರೊಂದಿಗೆ ಮಾತನಾಡಿದ ಆರ್ಸಿಬಿ ತಂಡದ ಬೌಲಿಂಗ್ ಕೋಚ್ ಆ್ಯಲನ್ ಡೊನಾಲ್ಡ್, ಗೇಯ್ಲ್ ಸ್ವಲ್ಪ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವುದಾಗಿ ತಿಳಿಸಿದರು. ಗೇಯ್ಲ್ ಅಭ್ಯಾಸದ ವೇಳೆ ಈ ಸಮಸ್ಯೆ ಎದುರಿಸಿದ್ದು, ಮುಂದಿನ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.
ಕುಸಿದ ಡೆವಿಲ್ಸ್: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಡೇರ್ಡೆವಿಲ್ಸ್ ತಂಡ ಬೃಹತ್ ಮೊತ್ತವನ್ನು ಕಲೆಹಾಕುವ ನಿಟ್ಟಿನಲ್ಲಿ ಕಣಕ್ಕಿಳಿಯಿತು. ಆದರೆ ಆರಂಭಿಕ ಬ್ಯಾಟ್ಸ್ಮನ್ಗಳು ತರಗೆಲೆಗಳಂತೆ ವಿಕೆಟ್ ಉದುರಿದ್ದು, ತಂಡ ಆರಂಭಿಕ ಕುಸಿತ ಕಾಣಲು ಕಾರಣವಾಯಿತು.
ಆರಂಭಿಕರಾಗಿ ಕಣಕ್ಕಿಳಿದ ಮಾಯಾಂಕ್ ಅಗರ್ವಾಲ್ (6) ಹಾಗೂ ಮುರಳಿ ವಿಜಯ್ (18) ತಂಡಕ್ಕೆ ಕೇವಲ 15 ರನ್ಗಳ ಆರಂಭ ನೀಡಿದರು. ನಂತರ ಬಂದ ದಿನೇಶ್ ಕಾರ್ತಿಕ್ (0), ಮನೋಜ್ ತಿವಾರಿ (1) ಬಂದ ವೇಗದಲ್ಲೇ ಪೆವಿಲಿಯನ್ ಸೇರಿಕೊಂಡಿದ್ದು, ಡೆಲ್ಲಿ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತು.
ಆರಂಭಿಕ ನಾಲ್ವರು ಬ್ಯಾಟ್ಸ್ಮನ್ಗಳು 35 ರನ್ಗಳಾಗುವಷ್ಟರಲ್ಲಿ ಪೆವಿಲಿಯನ್ ಸೇರಿದ್ದರಿಂದ ತಂಡದ ರನ್ ವೇಗ ಕುಂಟುತ್ತಾ ಸಾಗಿತು.
ಟೇಲರ್-ಡುಮಿನಿ ಹೋರಾಟ: ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿರುವಾಗ ಜತೆಯಾದ ಜೆ.ಪಿ ಡುಮಿನಿ ಹಾಗೂ ರಾಸ್ ಟೇಲರ್ 4ನೇ ವಿಕೆಟ್ಗೆ ಮುರಿಯದ 110 ರನ್ ಜತೆಯಾಟ ನೀಡುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು.
ಡುಮಿನಿ (67ರನ್, 48ಎಸೆತ ,4ಬೌಂಡರಿ, 3ಸಿಕ್ಸರ್) ಅಜೇಯ ಅರ್ಧಶತಕ ಹಾಗೂ ರಾಸ್ ಟೇಲರ್ (43ರನ್, 39 ಎಸೆತ, 3 ಬೌಂಡಿರ) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡ 145ರ ಗೌರವಾನ್ವಿತ ಮೊತ್ತ ದಾಖಲಿಸಲು ನೆರವಾದರು.
ಅಬ್ಬರಿಸಿದ ಯುವಿ: ಡೆಲ್ಲಿ ನೀಡಿದ ಮೊತ್ತವನ್ನು ಬೆನ್ನಟ್ಟಿದ ಆರ್ಸಿಬಿ ತಂಡಕ್ಕೆ ನೆರವಾಗಿದ್ದು, ಯುವರಾಜ್ ಸಿಂಗ್ (ಅಜೇಯ 52, 29 ಎಸೆತ, 3 ಬೌಂಡರಿ, 5 ಸಿಕ್ಸರ್) ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ನಾಯಕ ವಿರಾಟ್ ಕೊಹ್ಲಿ (ಅಜೇಯ 49, 38 ಎಸೆತ, 2 ಬೌಂಡರಿ 3 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್.
ಆರಂಭಿಕ ಮ್ಯಾಡಿನ್ಸನ್ ಬೇಗನೆ ಪೆವಿಲಿಯನ್ ಸೇರಿಕೊಂಡರೂ, ಪಾರ್ಥೀವ್ ಪಟೇಲ್ 37 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ನಂತರ 3ನೇ ವಿಕೆಟ್ಗೆ ಜತಂಯಾದ ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ 84 ರನ್ಗಳ ಜತೆಯಾಟ ನೀಡಿ ತಂಡವನ್ನು ಗೆಲವಿನ ದಡ ಸೇರಿಸಿದರು.
ಸ್ಕೋರ್ ವಿವರ
ಡೆಲ್ಲಿ ಡೇರ್ಡೆವಿಲ್ಸ್ 20 ಓವರ್ಗೆ 4 ವಿಕೆಟ್ಗೆ 145
ಮಾಯಾಂಕ್ ಅಗರ್ವಾಲ್ ಸಿ ಕೊಹ್ಲಿ ಬಿ ಸ್ಟಾರ್ಕ್ 6 (10), ಮುರಳಿ ವಿಜಯ್ ಬಿ ಚಾಹಲ್ 18 (20), ದಿನೇಶ್ ಕಾರ್ತಿಕ್ ಸಿ ಪಟೇಲ್ ಬಿ ಮಾರ್ಕೆಲ್ 0 (1), ಮನೋಜ್ ತಿವಾರಿ ಸಿ ಪಟೇಲ್ ಬಿ ಎರಾನ್ 1 (3), ಜೆ.ಪಿ ಡುಮಿನಿ ಅಜೇಯ 67 (48), ರಾಸ್ ಟೇಲರ್ ಅಜೇಯ 43 (39)
ಇತರೆ (ವೈಡ್ 9, ನೊಬಾಲ್ 1) ಒಟ್ಟು 10.
ವಿಕೆಟ್ ಪತನ: 1-15, 2-16, 3-17, 4-35.
ಬೌಲಿಂಗ್ ವಿವರ:
ಮಿಚೆಲ್ ಸ್ಟಾರ್ಕ್ 4-0-33-1,
ಆಲ್ಬಿ ಮಾರ್ಕೆಲ್ 3-0-18-1
ವರುಣ್ ಎರಾನ್ 3-1-9-1
ಯುಜ್ವೆಂದ್ರ ಚಾಹಲ್ 4-0-18-1
ಅಶೋಕ್ ದಿಂಡಾ 4-0-51-0
ಯುವರಾಜ್ ಸಿಂಗ್ 2-0-16-0
ರಾಯಲ್ ಚಾಲೆಂಜರ್ಸ್ ಬೆಂಗಳೂರು 16.4 ಓವರ್ಗೆ 2 ವಿಕೆಟ್ಗೆ 146
ಪಾರ್ಥೀವ್ ಪಟೇಲ್ ಬಿ ಶರ್ಮಾ 37 (28), ಮ್ಯಾಡಿನ್ಸನ್ ಸಿ ಕಾರ್ತಿಕ್ ಬಿ ಶಮಿ 4 (6), ವಿರಾಟ್ ಕೊಹ್ಲಿ ಅಜೇಯ 49 (38), ಯುವರಾಜ್ ಸಿಂಗ್ ಅಜೇಯ 52 (29)
ಇತರೆ (ವೈಡ್ 3, ನೊಬಾಲ್ 1) ಒಟ್ಟು 4.
ವಿಕೆಟ್ ಪತನ: 1-6, 2-62.
ಬೌಲಿಂಗ್ ವಿವರ:
ಜೆ.ಪಿ ಡುಮಿನಿ 2-0-10-0
ಮೊಹ್ಮದ್ ಶಮಿ 4-0-30-1
ವೇಯ್ನ್ ಪಾರ್ನೆಲ್ 3-0-19-0
ನದೀಮ್ 2.4-0-32-0
ರಾಹುಲ್ ಶರ್ಮಾ 3-0-33-1
ನಿಶಾಮ್ 2-0-22-0
ಇಂದಿನ ಪಂದ್ಯಗಳು
ಚೆನ್ನೈ ಸೂಪರ್ ಕಿಂಗ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್
(ಸ್ಥಳ-ಅಬುಧಾಬಿ, ಸಮಯ- ಸಂಜೆ 4 ಗಂಟೆ)
ರಾಜಸ್ಥಾನ ರಾಯಲ್ಸ್-ಸನ್ರೈಸರ್ಸ್ ಹೈದರಾಬಾದ್
(ಸ್ಥಳ-ಅಬುಧಾಬಿ, ಸಮಯ- ರಾತ್ರಿ 8 ಗಂಟೆ)