ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಭಿಜಿತ್ ಕುಂಟೆ ಭರ್ಜರಿ ಆರಂಭ

Srinivasa Murthy VN
Updated On : 19 Apr 2014, 12:04 pm

ಶಾರ್ಜಾ: ಭಾರತೀಯ ಗ್ರ್ಯಾನ್‌ಮಾಸ್ಟರ್ ಅಭಿಜೀತ್ ಕುಂಟೆ 13ನೇ ಏಷ್ಯನ್ ಕಾಂಟಿನೆಂಟಲ್ ಚೆಸ್ ಚಾಂಪಿಯನ್‌ಶಿಪ್‌ಲ ಮೊದಲ ಸುತ್ತಿನ ಪಂದ್ಯದಲ್ಲಿ ರೋಚಕ ಗೆಲವು ದಾಖಲಿಸಿದ್ದಾರೆ. ಮಾಜಿ ರಾಷ್ಟ್ರೀಯ ಚಾಂಪಿಯನ್ ಅಭಿಜಿತ್ ಕುಂಟೆ ಅವರು ಐದನೇ ಕ್ರಮಾಂಕದ ಆಟಗಾರ ಚೀನಾದ ನೀ ಹೂವಾ ಅವರನ್ನು ಪರಾಭವಗೊಳಿಸಿದರು.
ಇತ್ತೀಚೆಗೆ ನಡೆದ ಕೋಲ್ಕತಾ ಇಂಟರ್‌ನ್ಯಾಷನಲ್ ಓಪನ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕುಂಟೆ, 41ನೇ ನಡೆಯಲ್ಲಿ ಚೀನಾ ಆಟಗಾರನ ವಿರುದ್ಧ ನಿಚ್ಚಳ ವಿಜಯ ಸಂಪಾದಿಸಿದರು.
ಶಾರ್ಜಾ ಚೆಸ್ ಕ್ಲಬ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಅಭಿಜಿತ್ ಕುಂಟೆ, ಪ್ರಾರಂಭದಿಂದಲೇ ಉತ್ತಮ ನಡೆಗಳನ್ನು ತೋರುವ ಮೂಲಕ ಎದುರಾಳಿ ಮುಂದೆ ಕಠಿಣ ಸವಾಲುಗಳನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು.
ಭಾರತದ ಇತರೆ ಭರವಸೆಯ ಆಟಗಾರರ ಪೈಕಿ ಮೂರನೇ ಶ್ರೇಯಾಂಕಿತ ಕೃಷ್ಣನ್ ಶಶಿಕಿರಣ್ ಅವರು ಉಜ್ಬೇಕಿಸ್ತಾನದ ಜೆಹೋಂಗೀರ್ ವಾಖಿಡೋವ್‌ರನ್ನು, ಸೂರ್ಯಶೇಖರ್ ಗಂಗೂಲಿ ಅವರು ಇರಾನ್‌ನ ಅಮಿರೇಝಾ ಪೌರಾಮೆಝಾನಲಿ ಹಾಗೂ ಅಭಿಜೀತ್ ಗುಪ್ತಾ ಅವರು ಮಂಗೋಲಿಯಾದ ಮುಂಖಗಲ್ ಗೋಂಬೋಸುರೆನ್‌ರನ್ನು ಸೋಲಿಸಿ ಶುಭಾರಂಭ ಮಾಡಿದ್ದಾರೆ.
ಉಳಿದಂತೆ, ಭಾರತದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಬಿ. ಆಧಿಬನ್, ಎಸ್.ಪಿ. ಸೇತುರಾಮನ್, ಜಿ.ಎನ್. ಗೋಪಾಲ್, ದೀಪ್ ಸೇನಗುಪ್ತಾ, ವೈಭವ್ ಸೂರಿ ಮತ್ತು ದೇಬಶಿಶ್ ದಾಶ್ ಕೂಡ ಮೊದಲ ಹೆಜ್ಜೆ ದಾಟಿದ್ದಾರೆ.
ಆದರೆ, ಮಾಜಿ ಏಷ್ಯನ್ ಚಾಂಪಿಯನ್ ಪರಿಮ್‌ರಾಜನ್ ನೇಗಿ, ಎಂ.ಆರ್. ಲಲಿತ್ ಬಾಬು ಮತ್ತು ವಿದಿತ್ ಗುಜರಾಥಿ ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲಿ ಡ್ರಾ ಫಲಿತಾಂಶಕ್ಕೆ ತೃಪ್ತರಾಗಿದ್ದಾರೆ. ಈ ಟೂರ್ನಿ ಒಟ್ಟು 9 ಸುತ್ತುಗಳನ್ನು ಒಳಗೊಂಡಿದೆ.
ಮಹಿಳೆಯರ ವಿಭಾಗದಲ್ಲಿ ಭಾರತದ ಉನ್ನತ ರ್ಯಾಂಕ್ ಆಟಗಾರ್ತಿ ಅಂತಾರಾಷ್ಟ್ರೀಯ ಮಾಸ್ಟರ್ ತಾನಿಯಾ ಸಚದೇವ್, ಮೊದಲ ಸುತ್ತಿನಲ್ಲಿ ಚೀನಾದ ಗು ಟಿಯಾನ್ಲು ವಿರುದ್ಧ ಜಯಗಳಿಸಿ ಶುಭಾರಂಭ ಮಾಡಿದ್ದಾರೆ.
ಭಾರತದ ಇತರೆ ಪ್ರಮುಖ ಆಟಗಾರ್ತಿಯರಾದ ಅಂತಾರಾಷ್ಟ್ರೀಯ ಮಾಸ್ಟರ್ ಈಶಾ ಕರ್ವಾಡೆ ಮತ್ತು ಮೇರಿ ಅನ್ನಾ ಗೋಮ್ಸ್ ಡ್ರಾ ಫಲಿತಾಂಶ ಪಡೆದಿದ್ದರೆ, ಜೂನಿಯರ್ ಬಾಲಕಿಯರ ವಿಶ್ವದ ಮಾಜಿ ಚಾಂಪಿಯನ್ ಸೌಮ್ಯ ಸ್ವಾಮಿನಾಥನ್ ಹಾಗೂ ಸ್ವಾತಿ ಘಾಟೆ ಗೆಲವಿನೊಂದಿಗೆ ಅಭಿಯಾನ ಆರಂಭಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement