ಕೆಕೆಆರ್ ಭಯದಲ್ಲಿ ಡೇರ್ ಡೆವಿಲ್ಸ್
ದುಬೈ: ಐಪಿಎಲ್ 7ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲವು ದಾಖಲಿಸಿ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಕೆಕೆಆರ್ ತಂಡಕ್ಕೆ, ಆರ್‌ಸಿಬಿ ವಿರುದ್ಧ ಹೀನಾಯ ಸೋಲನುಭವಿಸಿರುವ ಡೆಲ್ಲಿ ಡೇರ್‌ಡೆವಿಲ್ಸ್ ಯಾವ ರೀತಿ ಸವಾಲೆಸೆಯಲಿದೆ ಎಂಬ ಕುತೂಹಲ ಹೆಚ್ಚಿಸಿದೆ.
ಶನಿವಾರ ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಮೊದಲ ಗೆಲವಿಗಾಗಿ ಹೋರಾಟ ನಡೆಸಿದರೆ, ಕೆಕೆಆರ್ ತಂಡ ತಮ್ಮ ಜಯದ ಹಾದಿಯಲ್ಲಿ ಮುಂದುವರಿಯಲು ಎದುರು ನೋಡುತ್ತಿದೆ.
ಕೆಕೆಆರ್ ತಂಡ ಆರಂಭಿಕ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಪ್ರಭುತ್ವ ಸಾಧಿಸಿತ್ತು. ಆದರೆ ಡೆಲ್ಲಿ ತಂಡ ತನ್ನ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಡುಮಿನಿ ಹಾಗೂ ಟೇಲರ್ ನೆರವಿನಿಂದ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿತಾದರೂ, ಕಳಪೆ ಬೌಲಿಂಗ್ ಪರಿಣಾಮ ಹೀನಾಯ ಸೋಲನುಭವಿಸಿತು.
ಇನ್ನು ಡೆಲ್ಲಿ ತಂಡಕ್ಕೆ ಕೆವಿನ್ ಪೀಟರ್‌ಸನ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಹಾಗಾಗಿ ಮುಂದಿನ ಪಂದ್ಯಕ್ಕೆ ಕೆವಿನ್ ಸಂಪೂರ್ಣ ಫಿಟ್ ಆಗಿದ್ದರೆ ಮಾತ್ರ ಆಡಲಿದ್ದಾರೆ. ಆದರೆ ತಂಡದಲ್ಲಿ ಅಗ್ರ ಬ್ಯಾಟ್ಸ್‌ಮನ್‌ಗಳಾದ ಮುರಳಿ ವಿಜಯ್, ದಿನೇಶ್ ಕಾರ್ತಿಕ್, ಮನೋಜ್ ತಿವಾರಿ ತಂಡಕ್ಕೆ ಆಸರೆಯಾಗುವ ಪ್ರದರ್ಶನ ನೀಡಲೇಬೇಕು. ಅಲ್ಲದೆ ಡೆಲ್ಲಿ ತಂಡ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಗೆ ಮುಂದಾದರೂ ಅಚ್ಚರಿ ಇಲ್ಲ.
ಕೆಕೆಆರ್ ತಂಡಕ್ಕೆ ಜಾಕ್ ಕಾಲಿಸ್ ಹಾಗೂ ಮನೀಷ್ ಪಾಂಡೆ ನೀಡಿದ ಜತೆಯಾಟ ತಂಡದಲ್ಲಿನ ಉಮ್ಮಸ್ಸನ್ನು ಹೆಚ್ಚಿಸಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಮಾರ್ನ್ ಮಾರ್ಕೆಲ್ ವೇಗವಿದ್ದರೆ, ಸುನಿಲ್ ನಾರಾಯಣ್ ಅವರ ಸ್ಪಿನ್ ಮೋಡಿಯ ಅಸ್ತ್ರವಿದೆ. ಹಾಗಾಗಿ ಕೆಕೆಆರ್ ವಿಭಿನ್ನ ಬೌಲಿಂಗ್ ಶೈಲಿಯಿಂದ ಕೂಡಿದೆ.